ಸಾರಾಂಶ
ಎಮ್ಮೆಗೆ ನೀರು ಕುಡಿಸಲು ಹೋಗಿದ್ದ ವೇಳೆ ಯುವತಿ ಕಾಲುಜಾರಿ ಆಳವಾದ ಗುಂಡಿಗೆ ಬಿದ್ದಿದ್ದಾಳೆ. ಈ ಯುವತಿಯನ್ನು ರಕ್ಷಿಸಲು ಹೋಗಿ ಮತ್ತಿಬ್ಬರು ನೀರು ಪಾಲಾಗಿ ಮೃತಪಟ್ಟ ಘಟನೆ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಎಮ್ಮೆಗೆ ನೀರು ಕುಡಿಸಲು ಹೋಗಿದ್ದ ವೇಳೆ ಯುವತಿ ಕಾಲುಜಾರಿ ಆಳವಾದ ಗುಂಡಿಗೆ ಬಿದ್ದಿದ್ದಾಳೆ. ಈ ಯುವತಿಯನ್ನು ರಕ್ಷಿಸಲು ಹೋಗಿ ಮತ್ತಿಬ್ಬರು ನೀರು ಪಾಲಾಗಿ ಮೃತಪಟ್ಟ ಘಟನೆ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ಹಡಲಗೇರಿ ಗ್ರಾಮದ ನೀಲಮ್ಮ ಖಿಲಾರಹಟ್ಟಿ (16) ಮುತ್ತಪ್ಪ ಖಿಲಾರಹಟ್ಟಿ (24) ಹಾಗೂ ಶಿವು ಯಾಳವಾರ (25) ಮೃತಪಟ್ಟವರು.ಎಮ್ಮೆ ಮೇಯಿಸಲು ಜಮೀನಿಗೆ ಹೋಗಿದ್ದ ಯುವತಿ ನೀಲಮ್ಮ ಖಿಲಾರಹಟ್ಟಿ ಅದಕ್ಕೆ ನೀರು ಕುಡಿಸಲು ನೀರು ತುಂಬಿದ್ದ ಗುಂಡಿ ಬಳಿ ಹೋಗಿದ್ದಾಳೆ. ಈ ವೇಳೆ ಕಾಲು ಜಾರಿ ಆ ಗುಂಡಿಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಮುತ್ತಪ್ಪ ಖಿಲಾರಹಟ್ಟಿ ಯುವತಿಯನ್ನು ರಕ್ಷಿಸಲು ಗುಂಡಿಗೆ ಇಳಿದಿದ್ದಾರೆ. ಈ ವೇಳೆ ಆತನೂ ನೀರಿನಿಂದ ಹೊರ ಬರಲು ಪರದಾಡಿದ್ದಾನೆ. ಈ ವೇಳೆ ಇವರ ರಕ್ಷಣೆಗೆ ಆಗಮಿಸಿದ ಶಿವು ಯಾಳವಾರ ಸಹ ನೀರು ನೀರು ಪಾಲಾಗಿದ್ದಾನೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮುದ್ದೇಬಿಹಾಳ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹಗಳನ್ನು ನೀರಿನಿಂದ ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಹಡಲಗೇರಿ ಗ್ರಾಮದ ಚಿನ್ನಪ್ಪ ತಳವಾರ ಎಂಬುವವರಿಗೆ ಸೇರಿದ ಜಮೀನಿನಲ್ಲಿದ್ದ ಈ ಆಳವಾದ ಗುಂಡಿ ಇದೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.