ಸಾರಾಂಶ
- ನಿಗಮ ಮಂಡಳಿ ಅಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀ ಷಡಕ್ಷರಿಮುನಿ ಸ್ವಾಮೀಜಿ
- - - ಕನ್ನಡಪ್ರಭ ವಾರ್ತೆ ಜಗಳೂರುಡಾ.ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಎಂಬುದು ಹುಲಿ ಹಾಲಿದ್ದಂತೆ. ಅದನ್ನು ಕುಡಿದವನು ಘರ್ಜಿಸಲೇ ಬೇಕು. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಮಾದಿಗ ಸಮುದಾಯಕ್ಕೆ ಸೇರಬೇಕಾದ ಒಳಮೀಸಲಾತಿ ಜೊತೆ ಸಮಾನತೆ ಆರ್ಥಿಕತೆ ಬಲಿಷ್ಠಗೊಳ್ಳಲು ಸಹಕಾರಿ ಆಗುತ್ತದೆ ಎಂದು ಶ್ರೀ ಷಡಕ್ಷರಿಮುನಿ ಸ್ವಾಮೀಜಿ ನುಡಿದರು.
ತಾಲೂಕು ಆದಿಜಾಂಬವ ಮಾದಿಗ ಸಮಾಜ ಸೇವಾ ಸಂಘದಿಂದ ಸೋಮವಾರ ಆಯೋಜಿಸಿದ್ದ ನೂತನ ನಿಗಮ ಮಂಡಳಿ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.ಸಮುದಾಯದವರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಆಗ ಮಾತ್ರ ಸರ್ಕಾರಗಳು ಒಳಮೀಸಲಾತಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬಹುದು. ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ನ್ಯಾಯ ಸಿಗಬೇಕಾದರೆ ಒಳಮೀಸಲಾತಿ ಜಾರಿಯಾಗಲೇಬೇಕು ಎಂದರು.
ಶಾಸಕ ಬಿ.ದೇವೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ, ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿದ ಮೀಸಲಾತಿಯಿಂದ ನಾನು ಶಾಸಕನಾಗಿದ್ದೇನೆ. ಮಾದಿಗ ಸಮಾಜದವರು ಇನ್ನೊಬ್ಬರ ಮೇಲೆ ಅವಲಂಬಿತವಾಗಬಾರದು. ಸ್ವಾಭಿಮಾನಿಯಾಗಿ ಕೆಲಸ ನಿರ್ವಹಿಸಬೇಕು. ಅಂಬೇಡ್ಕರ್ ಭಾರತಕ್ಕೆ ದಲಿತ ಸೂರ್ಯನಾಗಿ ನಿತ್ಯ ಬೆಳಗಿ ದಲಿತಪರ ಬಾಳಿಗೆ ಬೆಳಕಾಗಿದ್ದಾರೆ. ಅವರ ಬೆಳಕಿನ ಹಾದಿಯಲ್ಲಿ ನಾವೆಲ್ಲ ಸಾಗೋಣ ಎಂದರು.ಮಾಜಿ ಶಾಸಕ ಎಸ್.ವಿ,ರಾಮಚಂದ್ರ ಮಾತನಾಡಿ, ನಾನು ಶಾಸಕನಾಗಿದ್ದಾಗ ಅಂಬೇಡ್ಕರ್ ಭವನ, ಜಗಜೀವನ್ ರಾಮ್ ಭವನ, ಅಂಬೇಡ್ಕರ್ ಪುತ್ಥಳಿ ನಿರ್ಮಿಸಿದ್ದೇನೆ. ಆ ಮೂಲಕ ಮಾದಿಗ ಸಮಾಜಕ್ಕೆ ಚಿರಋಣಿಯಾಗಿ ಕೆಲಸ ಮಾಡಿದ್ದೇನೆ ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ನಮ್ಮ ಅವಧಿಯಲ್ಲಿಯೂ ಮಾದಿಗ ಸಮಾಜ ಇರುವ ಗ್ರಾಮಗಳಲ್ಲಿ ಕಡೆ ರಸ್ತೆ ಅಭಿವೃದ್ಧಿ, ಜಗಜೀವನ್ ರಾಮ್ ಭವನ ಅಭಿವೃದ್ಧೀಕರಣ ಮಾಡಿದ್ದೇನೆ. ಸಮಾಜ ಒಗ್ಗಟ್ಟಾಗಿದ್ದರೆ ರಾಜಕೀಯ ಸೇರಿದಂತೆ ಎಲ್ಲ ವಿಭಾಗದಲ್ಲಿ ಸ್ಥಾನ ಸಿಗುತ್ತವೆ ಎಂದರು.ನೂತನವಾಗಿ ಆಯ್ಕೆಯಾದ ಆದಿಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಸ್. ಮಂಜುನಾಥ , ಡಾ.ಬಾಬುಜಗಜೀವನ್ ರಾಮ್ ಅಭಿವೃದ್ಧಿ ನಿಗಮ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಬ್ರಾಹ್ಮಣ ಅಭಿವೃದ್ಧಿ ನಿಗಮ ಅಧ್ಯಕ್ಷ ಅಸಗೋಡು ಜಯಸಿಂಹ ಅವರನ್ನು ಸನ್ಮಾನಿಸಲಾಯಿತು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿ, ಮೆರವಣಿಗೆ ಮೂಲಕ ಪಟ್ಟಣದ ಡಾ.ಅಂಬೇಡ್ಕರ್ ಭವನಕ್ಕೆ ಆಗಮಿಸಲಾಯಿತು.ಆದಿಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಸ್.ಮಂಜುನಾಥ, ಕೆ.ಪಿ.ಪಾಲಯ್ಯ ಆದಿಜಾಂಬವ ಮಾದಿಗ ಸಮಾಜ ತಾಲೂಕು ಅಧ್ಯಕ್ಷ ಜಿ.ಎಚ್. ಶಂಭುಲಿಂಗಪ್ಪ, ತುಪ್ಪದಹಳ್ಳಿ ಪೂಜಾರಿ ಸಿದ್ದಪ್ಪ, ಗ್ಯಾಸ್ ಓಬಣ್ಣ, ಪ.ಪಂ. ಸದಸ್ಯರಾದ ನಿರ್ಮಲಾ ಕುಮಾರಿ, ದೇವರಾಜ್, ಹನುಮಂತಾಪುರ ಶಿವಣ್ಣ, ರುದ್ರೇಶ್ ಗುತ್ತಿದುರ್ಗ, ಸತೀಶ್ ಮಲೆಮಾಚಿಕರೆ, ಪಲ್ಲಾಗಟ್ಟೆ ಶೇಖರಪ್ಪ, ದೊಣ್ಣೆಹಳ್ಳಿ ಗ್ರಾ.ಪಂ. ಅಧ್ಯಕ್ಷ ತಿಪ್ಪೇಸ್ವಾಮಿ, ರಾಜಪ್ಪ ಇತರರು ಇದ್ದರು.
- - -ಬಾಕ್ಸ್ * ಒಳಮೀಸಲಾತಿಗೆ ಎಲ್ಲ ತ್ಯಾಗಕ್ಕೆ ಬದ್ಧರಾಗಿ ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ೧೦೧ ಜಾತಿಯಲ್ಲಿ ಶೇ.೧೫ರಷ್ಟು ಮೀಸಲಾತಿಯಲ್ಲಿ ಐಎಎಸ್ ಕೆಎಎಸ್‌ನಲ್ಲಿ ಒಬ್ಬ ಮಾದಿಗನು ಇರಲಾರನು. ನಮ್ಮ ಜನಾಂಗದ ಹಳ್ಳಿಗಳಲ್ಲಿ ತುಂಡು ಭೂಮಿ ಇಲ್ಲದೇ ಜೀವನ ನಡೆಸುತ್ತಿರುವುದು ನೋಡಿದರೆ ಎಂತಹ ನ್ಯಾಯಾಧೀಶರು ಬಂದು ಅವಲೋಕಿಸಿದರು ನಮ್ಮ ನೈಜಸ್ಥಿತಿ ನೋಡಿ ಒಳಮೀಸಲಾತಿ ಅನುಷ್ಠಾನ ಮಾಡದೇ ಬಿಡಲಾರರು. ಈಗಿನ ಕಾಂಗ್ರೆಸ್ ಸರ್ಕಾರ ಸುಪ್ರೀಂಕೋರ್ಟ್ ಆದೇಶದ ಮೇಲೆ ಒಳಮೀಸಲಾತಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ಯಾವುದೇ ಹೋರಾಟಕ್ಕೆ ಸಿದ್ಧ. ಒಳಮೀಸಲಾತಿಗೆ ಎಲ್ಲ ತ್ಯಾಗಕ್ಕಾಗಿ ಬದ್ಧರಾಗಿರೋಣ ಎಂದು ತಿಳಿಸಿದರು.
- - --30ಜೆ.ಜಿ.ಎಲ್.1:
ಅಭಿನಂದನಾ ಕಾರ್ಯಕ್ರಮವನ್ನು ಶಾಸಕ ಬಿ.ದೇವೇಂದ್ರಪ್ಪ ಉದ್ಘಾಟಿಸಿದರು.