ಬಳ್ಳಾರಿಯಲ್ಲಿ ಮೆಗಾ ಡೈರಿ ಸ್ಥಾಪನೆಗೆ ಕೂಡಿ ಬಂತು ಕಾಲ

| Published : Aug 09 2025, 12:01 AM IST

ಸಾರಾಂಶ

ಬಳ್ಳಾರಿ ಜಿಲ್ಲೆಯಲ್ಲಿ ರಾಬಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಿಂದ ಮೆಗಾ ಡೈರಿ ಸ್ಥಾಪಿಸುವ ನಿಟ್ಟಿನಲ್ಲಿ ಶುಕ್ರವಾರ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಹಾಗೂ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ರಾಬಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಿಂದ ಸ್ಥಾಪಿಸಬೇಕು ಎಂದು ನಿರ್ಧರಿಸಿರುವ ಮೆಗಾ ಡೈರಿ ವಿಜಯನಗರ ಜಿಲ್ಲೆಗೆ ಸ್ಥಳಾಂತರಗೊಳ್ಳಲಿದೆ ಎಂಬ ಊಹೋಪೋಹಗಳಿಗೆ ಕೊನೆಗೂ ತೆರೆಬಿದ್ದಿದೆ.

ಈಚೆಗಷ್ಟೇ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಹಾಗೂ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಶುಕ್ರವಾರ ಮೆಗಾಡೈರಿ ಸ್ಥಾಪನೆಯ ಕಾರ್ಯಕ್ಕೆ ಮುನ್ನುಡಿ ಬರೆದಿದ್ದು, ಈ ಸಂಬಂಧ ಸ್ಥಳ ಪರಿಶೀಲನೆ ಕಾರ್ಯ ನಡೆಸಿದರಲ್ಲದೆ, ಒಂದೆರೆಡು ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಹಕಾರ ಸಚಿವ ರಾಜಣ್ಣ ಅವರು ಮೆಗಾ ಡೈರಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ ಎಂದು ಖಚಿತಪಡಿಸಿದರು.

ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಘವೇಂದ್ರ ಹಿಟ್ನಾಳ್, ಮೆಗಾ ಡೈರಿ ನಿರ್ಮಾಣಕ್ಕೆ ಕೆಎಂಇಆರ್‌ಸಿಯಡಿ ₹80 ಕೋಟಿ ಅನುದಾನ ಮೀಸಲಿರಿಸಿದ್ದು, ಡೈರಿ ನಿರ್ಮಾಣಕ್ಕಾಗಿ ಕೊಳಗಲ್ಲುನಲ್ಲಿನ 15 ಎಕರೆ ಸ್ಥಳವನ್ನು ₹2.92 ಕೋಟಿ ವೆಚ್ಚದಲ್ಲಿ ಖರೀದಿಗೆ ಆಡಳಿತ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಬಳ್ಳಾರಿಯಲ್ಲಿ ಗುಣಮಟ್ಟದ ಹಾಗೂ ಮಾದರಿ ಎನಿಸಿದ ಮೆಗಾ ಡೈರಿ ನಿರ್ಮಾಣ ಮಾಡುವುದು ನಮ್ಮ ಉದ್ದೇಶವಾಗಿದೆ. ದೇಶದಲ್ಲಿಯೇ ಮಾದರಿ ಮೆಗಾ ಡೈರಿ ಬಳ್ಳಾರಿಯಲ್ಲಿ ಸ್ಥಾಪಿಸಲಾಗುವುದು. ಇದರ ಹೊರತಾಗಿ ಬಳ್ಳಾರಿಯಲ್ಲಿರುವ ಹಳೇ ಡೈರಿ ದುರಸ್ತಿಗೆ ₹1 ಕೋಟಿ, ಕೊಪ್ಪಳ ಜಿಲ್ಲೆಯ ಬೂದುಗುಂಪದಲ್ಲಿರುವ ಡೈರಿಗೆ ₹4ರಿಂದ 5 ಕೋಟಿ ಅನುದಾನ ಒದಗಿಸಲು ಸಭೆಯಲ್ಲಿ ಅನುಮೋದನೆ ನೀಡಲಾಗುವುದು. 30 ವರ್ಷಕ್ಕೂ ಹಳೆಯದಾದ ರಾಯಚೂರು ಡೈರಿಗೆ ಕೆಕೆಆರ್‌ಡಿಬಿಯಿಂದ ₹10 ಕೋಟಿ ನೀಡುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಸ್ಥಳೀಯ ಶಾಸಕರ ಜತೆ ಮಾತನಾಡಿದ್ದೇನೆ ಎಂದರು.

ಪ್ರತಿ ತಾಲೂಕಿಗೆ 100 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ತೆರೆಯುವ ಗುರಿ ಹೊಂದಲಾಗಿದೆ. ಪಶು ವೈದ್ಯಾಧಿಕಾರಿಗಳನ್ನು ಹೆಚ್ಚುವರಿಯಾಗಿ ಕೊಡಲು ನಿರ್ಧರಿಸಲಾಗಿದೆ. 10 ಪಶು ವೈದ್ಯಾಧಿಕಾರಿಗಳನ್ನು ಕೆಎಂಎಫ್ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲಾವಾರು (ನಾಲ್ಕು ಜಿಲ್ಲೆಗೆ) ಹಂಚಿಕೆ ಮಾಡಲಾಗಿದೆ. ನಾಲ್ಕು ಜಿಲ್ಲೆಗಳಿಗೆ ಹೋಲಿಸಿದರೆ ಹಾಲು ಉತ್ಪಾದನೆ ಹಾಗೂ ಮಾರಾಟ ವ್ಯತ್ಯಾಸ ಸಾಕಷ್ಟು ಕಂಡು ಬಂದಿದೆ. ಹೀಗಾಗಿ ಮಾರುಕಟ್ಟೆಯನ್ನು ವಿಸ್ತರಿಸುವ ಸಂಬಂಧ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಎರಡು ವರ್ಷದಲ್ಲಿ 2.42 ಲಕ್ಷ ಲೀಟರ್ ಉತ್ಪಾದನೆ ಬದಲು 5 ಲಕ್ಷ ಲೀಟರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಸದ್ಯ ಕೇವಲ 9 ಸಾವಿರ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದು, ಹಾಲು ಉತ್ಪಾದನೆಯ ಜತೆಗೆ ಮಾರಾಟ ಹೆಚ್ಚಳ ಮಾಡುವ ಸಂಬಂಧ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಮೆಗಾ ಡೈರಿ ಬಳ್ಳಾರಿಯಿಂದ ಸ್ಥಳಾಂತರಿಸಲು ಸಾಧ್ಯವಿಲ್ಲ:

ಹಲವಾರು ವರ್ಷಗಳ ಬೇಡಿಕೆ ಮೆಗಾ ಡೈರಿ ನಿರ್ಮಾಣವನ್ನು ಬಳ್ಳಾರಿಯಿಂದ ಯಾರು ಸ್ಥಳಾಂತರ ಮಾಡಲು ಸಾಧ್ಯವಿಲ್ಲ ಎಂದು ಗ್ರಾಮೀಣ ಶಾಸಕ ಬಿ. ನಾಗೇಂದ್ರ ಹೇಳಿದರು.

ರಾಬಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್ ಅವರೊಂದಿಗೆ ಸ್ಥಳ ಪರಿಶೀಲನೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಮೆಗಾಡೈರಿ ಸ್ಥಾಪನೆ ಕೆಲಸ ನಾನಾ ಕಾರಣಗಳಿಂದ ವಿಳಂಬವಾಗಿತ್ತು. ಒಕ್ಕೂಟದ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ್‌ ಆಯ್ಕೆಯಾಗುತ್ತಿದ್ದಂತೆ ಮೆಗಾ ಡೈರಿ ಸ್ಥಾಪನೆಗೆ ಆದ್ಯತೆ ನೀಡಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಿ, ಆರ್ಥಿಕ ಪರಿಸ್ಥಿತಿ ಬಲಪಡಿಸಲು ಹಾಲು ಉತ್ಪಾದನೆ ಹೆಚ್ಚಿಸಲು ₹50 ಕೋಟಿ ಅನುದಾನದಲ್ಲಿ 11 ಸಾವಿರ ಹಸುಗಳನ್ನು ವಿತರಣೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಒಂದು ದಶಕಗಳಲ್ಲಿ ಜಿಲ್ಲೆಯಲ್ಲಿ ಪ್ರತಿ ನಿತ್ಯ 2 ಲಕ್ಷ ಲೀಟರ್‌ ಹಾಲು ಉತ್ಪಾದನೆಯ ಗುರಿ ಹೊಂದಲಾಗಿದೆ. ಬಳ್ಳಾರಿ ಜಿಲ್ಲೆಗೆ ನಾಲ್ಕು ನಿರ್ದೇಶಕ ಸ್ಥಾನ ಮೀಸಲಿಡಲು ಕ್ರಮ ಚರ್ಚಿಸಲಾಗುತ್ತಿದೆ ಎಂದು ಹೇಳಿದರು.

ನನಗೆ ಸಚಿವ ಸ್ಥಾನ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ. ಜಮೀರ್‌ ಅಹಮದ್‌ ಅವರು ಎರಡು ಜಿಲ್ಲೆ ಉಸ್ತುವಾರಿ ಸಚಿವರಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಭೇಟಿ ನೀಡಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಆಗಮಿಸಿ ಕೆಲವು ದಿನಗಳ ಕಾಲ ಇಲ್ಲಿಯೇ ಇರಲಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಸಚಿವ ಸಂಪುಟ ಸಭೆಯನ್ನು ಮುಂದಿನ ಬಾರಿ ಬಳ್ಳಾರಿಯಲ್ಲಿ ನಡೆಸಲು ಸರ್ಕಾರ ಮುಂದಾಗಿದೆ. ಚುನಾವಣೆಯಲ್ಲಿ ಕೇಂದ್ರ ಬಿಜೆಪಿಯವರು ಚುನಾವಣೆಯ ಆಯೋಗವನ್ನು ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ರಾಹುಲ್‌ ಗಾಂಧಿ ಅವರು ಸಾಕ್ಷಿ ಸಮೇತ ಬಹಿರಂಗ ಪಡಿಸುತ್ತಿದ್ದಾರೆ ಎಂದು ಶಾಸಕ ನಾಗೇಂದ್ರ ಹೇಳಿದರು. ವಿಜಯನಗರ ಜಿಲ್ಲೆಗೆ ಸ್ಥಳಾಂತರ ಹುನ್ನಾರಕ್ಕೆ ಬ್ರೇಕ್: ಬಳ್ಳಾರಿ ಹೊರ ವಲಯದ ಕೊಳಗಲ್ಲು ಬಳಿ ಸ್ಥಾಪನೆಯ ಉದ್ದೇಶದ ಮೆಗಾ ಡೈರಿಯನ್ನು ವಿಜಯನಗರ ಜಿಲ್ಲೆಗೆ ಸ್ಥಳಾಂತರಿಸಲು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಭೀಮಾನಾಯ್ಕ ಹಾಗೂ ಬೆಂಬಲಿಗರು ಹುನ್ನಾರ ನಡೆಸಿದ್ದಾರೆ ಎಂದೇ ಆರೋಪಿಸಲಾಗಿತ್ತು. ಈ ಸಂಬಂಧ ಹೊಸಪೇಟೆಯಲ್ಲಿ ರೈತರ ಸಭೆ ನಡೆದು, ಮೆಗಾ ಡೇರಿಯನ್ನು ವಿಜಯನಗರ ಜಿಲ್ಲೆಯಲ್ಲಿಯೇ ಸ್ಥಾಪಿಸಬೇಕು ಎಂದು ಒತ್ತಾಯಿಸಲಾಗಿತ್ತು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ ಬಳ್ಳಾರಿಯಲ್ಲಿಯೇ ಮೆಗಾ ಡೈರಿ ನಿರ್ಮಾಣದ ಆಸೆ ಮತ್ತೆ ಚಿಗುರೊಡೆಯಿತು. ಬಳ್ಳಾರಿ ಜಿಲ್ಲೆಯ ಶಾಸಕರ ಜತೆ ಚರ್ಚಿಸಿದ ಹಿಟ್ನಾಳ್, ಬಳ್ಳಾರಿಯಲ್ಲಿ ದೇಶಕ್ಕೆ ಮಾದರಿಯಲ್ಲಿ ಡೇರಿ ನಿರ್ಮಿಸಲಾಗುವುದು ಎಂದು ಶುಕ್ರವಾರ ಭರವಸೆ ನೀಡಿದರು.