ಸಾರಾಂಶ
ತೀರ್ಥಹಳ್ಳಿ: ಶ್ರೀಲಂಕಾದಲ್ಲಿ ಅ.16ರಂದು ಸಮಾಪನಗೊಂಡ ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶದಲ್ಲಿ ಅಡಕೆ ಬಗ್ಗೆ ತೆಗೆದುಕೊಂಡಿರುವ ನಿರ್ಣಯಗಳು ಕಠಿಣವಾಗಿದ್ದು, ಅನುಮಾನಕ್ಕೂ ಕಾರಣವಾಗಿದೆ. ಇದರ ಹಿಂದಿರುವ ಲಾಬಿಯ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.ಅಡಕೆ ಬೆಳೆಗೆ ಧಾರಣೆ ಹೆಚ್ಚಿದಾಗೆಲ್ಲಾ ಬೆಳೆಯ ಬಗ್ಗೆ ಬೆಳೆಗಾರರಲ್ಲಿ ಆತಂಕ ಮೂಡಿಸುವಂತಹ ನಿರ್ಣಯಗಳನ್ನು ಅಂಗೀಕರಿಸುವ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ಗೊಂದಲವನ್ನು ಸೃಷ್ಟಿಸುತ್ತಿದೆ. ಇದರ ಹಿಂದೆ ಯಾವುದೋ ಷಡ್ಯಂತ್ರ ನಡೆದಿರುವ ಶಂಕೆ ಮೂಡಿದ್ದು ಕೇಂದ್ರ ಸರ್ಕಾರ ಸೂಕ್ತ ತನಿಖೆ ನಡೆಸುವ ಮೂಲಕ ಬೆಳೆಗಾರರ ನೆರವಿಗೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆ ಪ್ರಭಾವಕ್ಕೆ ಒಳಗಾಗಿ ಹಿಂದಿನ ಸರ್ಕಾರ ಅಡಕೆ ಬಗ್ಗೆ ಸುಪ್ರೀಂಕೋರ್ಟಿಗೆ ಅಫಿಡವಿಟ್ ನೀಡಿದ್ದು ಆ ಬಗ್ಗೆ ಪ್ರಕರಣ ಮುಂದುವರಿದಿದೆ. ಇಂದಿನ ಸರ್ಕಾರ ಅನೇಕ ವಿಶ್ವವಿದ್ಯಾಲಯಗಳ ಮೂಲಕ ಅಡಕೆ ಬಗ್ಗೆ ಸಂಶೋಧನೆ ನಡೆಸಲು ನಿರ್ಧಾರ ಕೈಗೊಂಡಿದ್ದು ಆ ಕಾರ್ಯ ನಡೆದಿದೆ. ಸಂಶೋಧನೆಯ ತೀರ್ಪು ಬರುವವರೆಗೆ ಅಡಕೆ ಬೆಳೆಯ ಬಗ್ಗೆ ಯಾವುದೇ ರೀತಿಯ ನಕಾರಾತ್ಮಕ ಹೇಳಿಕೆಗಳು ಬಾರದಂತೆ ಸರ್ಕಾರ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ.ಭಾರತ ಮಾತ್ರವಲ್ಲದೇ ಮಾಲ್ಡೀವ್ಸ್, ಶ್ರೀಲಂಕಾ, ಮಾನ್ಮಾರ್ ದೇಶಗಳಲ್ಲೂ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಅನಾದಿ ಕಾಲದಿಂದಲೂ ದೇಶದಲ್ಲಿ ಬಳಕೆಯಲ್ಲಿರುವ ಅಡಕೆ ತಿನ್ನುವ ಯಾರಿಗೂ ಕ್ಯಾನ್ಸರ್ ಬಂದಿರುವ ಸಾಧ್ಯತೆ ಇಲ್ಲಾ. ಅಡಕೆ ಜೊತೆ ತಂಬಾಕು ಗುಟ್ಕಾದಿಂದ ತಿನ್ನುವವರಿಗೆ ರೋಗ ತಗುಲಿರಬಹುದು. ಹಾಗೂ ಧಾರ್ಮಿಕ ಭಾವನೆಯನ್ನೂ ಹೊಂದಿದೆ. ಈ ಎಲ್ಲಾ ವಿಷಯಗಳನ್ನು ಗಮನಿಸಿ ಸರ್ಕಾರ ರೈತರ ನೆರವಿಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.