ಆರ್ಥಿಕ ಬೆಳವಣಿಗೆಯಲ್ಲಿ ಪ್ರವಾಸೋದ್ಯಮ ವಲಯ ಕೊಡುಗೆ ಮಹತ್ವದ್ದು

| Published : Sep 28 2025, 02:00 AM IST

ಆರ್ಥಿಕ ಬೆಳವಣಿಗೆಯಲ್ಲಿ ಪ್ರವಾಸೋದ್ಯಮ ವಲಯ ಕೊಡುಗೆ ಮಹತ್ವದ್ದು
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಸೇವಾ ವಲಯ, ಉತ್ಪಾದನೆ ವಲಯಗಳಂತೆ ಪ್ರವಾಸೋದ್ಯಮ ವಲಯವು ಕೂಡ ಸಾಕಷ್ಟು ಆದಾಯವನ್ನು ತಂದುಕೊಡುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ್ ಹೇಳಿದರು.

ಹಾವೇರಿ: ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಸೇವಾ ವಲಯ, ಉತ್ಪಾದನೆ ವಲಯಗಳಂತೆ ಪ್ರವಾಸೋದ್ಯಮ ವಲಯವು ಕೂಡ ಸಾಕಷ್ಟು ಆದಾಯವನ್ನು ತಂದುಕೊಡುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ್ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದು ದೇಶಾದ್ಯಾಂತ ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನ ಆಚರಿಸುತ್ತಿದ್ದೇವೆ. ಇಂದು ಫ್ರಾನ್ಸ್ ಹಾಗೂ ಅರಬ್ ರಾಷ್ಟ್ರಗಳು ಪ್ರವಾಸೋದ್ಯಮದಲ್ಲಿ ಸಾಕಷ್ಟು ಬೆಳವಣಿಗೆ ಹೊಂದಿವೆ. ಜಗತ್ತಿನ ಮುಕ್ಕಾಲು ಭಾಗದಷ್ಟು ಜನರು ಪ್ರವಾಸೋದ್ಯಮನ್ನು ವೀಕ್ಷಿಸಲು ಫ್ರಾನ್ಸ್ ಮೊದಲಾದ ಪ್ರದೇಶಗಳಿಗೆ ತೆರಳುತ್ತಾರೆ. ಇದು ಆ ದೇಶದ ಆರ್ಥಿಕತೆ ಬೆಳವಣಿಗೆಗೆ ಸಹಾಯಕಾರಿಯಾಗಿದೆ. ನಮ್ಮ ದೇಶದಲ್ಲಿ ಕೂಡ ಪ್ರವಾಸೋದ್ಯಮ ಅಭಿವೃದ್ಧಿ ಕಡೆಗೆ ಹೆಚ್ಚು ಒತ್ತು ನೀಡುವುದು ಅವಶ್ಯಕತೆ ಇದೆ. ಭಾರತವು ಭೌಗೋಳಿಕವಾಗಿ ಶ್ರೀಮಂತವಾಗಿದೆ. ಇಲ್ಲಿ ಪ್ರವಾಸೋದ್ಯಮಕ್ಕೆ ಬೇಕಾದ ಎಲ್ಲ ಸಂಪನ್ಮೂಲಗಳು ಹೆರಳವಾಗಿವೆ. ಅವುಗಳ ಅಭಿವೃದ್ಧಿ ಕಡೆಗೆ ಗಮನಹರಿಸಿದರೆ ಭಾರತವು ಕೂಡ ಪ್ರವಾಸೋದ್ಯಮದಲ್ಲಿ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದರು.ಕೇವಲ ಪ್ರೇಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿ ಪಡಿಸಿದರೆ ಎಲ್ಲವೂ ಸರಿ ಹೋಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಅದಕ್ಕೆ ಸಾರ್ವಜನಿಕರಿಂದಲೂ ಅಷ್ಟೇ ಸಹಕಾರ ಬೇಕಾಗುತ್ತದೆ. ಸಾರ್ವಜನಿಕ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಿದಾಗ ಅಲ್ಲಿನ ಪ್ರದೇಶವನ್ನು ಹಾಳು ಮಾಡದೆ ಅದನ್ನು ರಕ್ಷಿಸುವಂತ ಕೆಲಸವಾಗಬೇಕು ಎಂದರು.ಚಾಲುಕ್ಯರು ಹಾಗೂ ಕದಂಬರ ಕಾಲದ ಕೆಲವು ದೇವಸ್ಥಾನಗಳು ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕಾಣುತ್ತೇವೆ. ಅವುಗಳ ಉಳಿವಿಕೆಗೆ ಪ್ರಯತ್ನಿಸಬೇಕು, ಆ ದೇವಸ್ಥಾನಗಳ ಮಹತ್ವ ಅಲ್ಲಿನ ಗ್ರಾಮಸ್ಥರಿಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಈ ದಿಸೆಯಲ್ಲಿ ಗ್ರಾಮಸ್ಥರಿಗೆ ಅರಿವು ಮೂಡಿಸಿ ಆ ಕಾಲದ ದೇವಸ್ಥಾನಗಳನ್ನು ರಕ್ಷಿಸಬೇಕು ಎಂದರು.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಬಂಡು ಸುರೇಶ ಕೆಂಪವಾಡೆ ಅವರು ಕಾರ್ಯಕ್ರಮದ ಕುರಿತು ವಿಶೇಷ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಶಂಕರ ಸುತಾರ, ಎಂ.ಕೆ.ಇ.ಟಿ. ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಸಪ್ಪ ಚಳಕೊಪ್ಪ, ಬಿಎಜೆಎಸ್ ಎಸ್ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ.ಮೃತ್ಯುಂಜಯ ಎಂ.ಎಂ. ಹಾಗೂ ವಿದ್ಯಾರ್ಥಿಗಳು ಇದ್ದರು. ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಸ್ವಾಗತಿಸಿದರು. ನಮ್ಮ ದೇಶದಲ್ಲಿ ಕೂಡ ಪ್ರವಾಸೋದ್ಯಮ ಅಭಿವೃದ್ಧಿ ಕಡೆಗೆ ಹೆಚ್ಚು ಒತ್ತು ನೀಡುವುದು ಅವಶ್ಯಕತೆ ಇದೆ. ಭಾರತವು ಭೌಗೋಳಿಕವಾಗಿ ಶ್ರೀಮಂತವಾಗಿದೆ. ಇಲ್ಲಿ ಪ್ರವಾಸೋದ್ಯಮಕ್ಕೆ ಬೇಕಾದ ಎಲ್ಲ ಸಂಪನ್ಮೂಲಗಳು ಹೇರಳವಾಗಿವೆ. ಅವುಗಳ ಅಭಿವೃದ್ಧಿ ಕಡೆಗೆ ಗಮನಹರಿಸಿದರೆ ಭಾರತವು ಕೂಡ ಪ್ರವಾಸೋದ್ಯಮದಲ್ಲಿ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಲ್. ನಾಗರಾಜ ಹೇಳಿದರು.