ಸಾರಾಂಶ
ಬೆಂಗಳೂರಿನಿಂದ ಆಂಬುಲೆನ್ಸ್ ನಲ್ಲಿ ಗೆಳೆಯರ ಪ್ರವಾಸ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಆಂಬುಲೆನ್ಸ್ ಇರುವುದು ಗಂಭೀರವಾಗಿರುವ ವ್ಯಕ್ತಿಗಳನ್ನು ವೇಗವಾಗಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಕಾರ್ಯಕ್ಕೆ. ಆದರೆ ಬೆಂಗಳೂರಿನ 7 ಮಂದಿ ಯುವಕರು ಆಂಬುಲೆನ್ಸ್‌ನಲ್ಲಿ ಪ್ರವಾಸ ಮಾಡಿರುವ ವಿಚಿತ್ರ ವಿದ್ಯಮಾನ ನಡೆದಿದ್ದು, ಈ ಯುವಕರನ್ನು ಉಜಿರೆಯಲ್ಲಿ ಪೊಲೀಸರು ಹಿಡಿದು ದಂಡ ಹಾಕಿದ ಘಟನೆ ನಡೆದಿದೆ.ಆಂಬುಲೆನ್ಸ್ ಚಾಲಕ ತನ್ನ ಆರು ಮಂದಿ ಗೆಳೆಯರನ್ನು ಆಂಬುಲೆನ್ಸ್‌ನಲ್ಲಿ ಬೆಂಗಳೂರಿನಿಂದ ಧರ್ಮಸ್ಥಳ, ಉಡುಪಿ ದೇವಸ್ಥಾನಕ್ಕೆ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ. ಆದರೆ ಕೊಟ್ಟಿಗೆಹಾರ ಆಗಿ ಉಜಿರೆ ಬರುತ್ತಿದ್ದಂತೆ ಬೆಳ್ತಂಗಡಿ ಸಂಚಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದರು.
ಚಿಕ್ಕಮಗಳೂರಿನ ಕೊಟ್ಟಿಗೆಹಾರದಿಂದ ಚಾರ್ಮಾಡಿಯಾಗಿ ಉಜಿರೆ ಕಡೆ ತ್ಯಾಗರಾಜ್ ಎಂಬ ಹೆಸರಿನ ಅಂಬುಲೆನ್ಸ್‌ನಲ್ಲಿ ಒಟ್ಟು ಏಳು ಜನ ಬರುತ್ತಿರುವ ಮಾಹಿತಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಅರ್ಜುನ್ ಅವರಿಗೆ ಬಂದಿತ್ತು. ತಕ್ಷಣ ತಮ್ಮಠಾಣೆಯ ಸಿಬ್ಬಂದಿ ಸುನಿಲ್ ಉಜಿರೆ ಬೀಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಾಹಿತಿ ನೀಡಿ ವಾಹನ ನಿಲ್ಲಿಸಿ ಠಾಣೆಗೆ ತರಲು ಸೂಚಿಸಿದ್ದಾರೆ. ಅದರಂತೆ ಆಂಬುಲೆನ್ಸ್ ಠಾಣೆಗೆ ತಂದು ವಿಚಾರಿಸಿದಾಗ ಆಂಬುಲೆನ್ಸ್‌ನಲ್ಲಿ ಗೆಳೆಯರ ಜೊತೆ ದೇವಸ್ಥಾನ ಟ್ರಿಪ್ ಬಗ್ಗೆ ಹೇಳಿದ್ದಾರೆ. ಸಂಚಾರಿ ಪೊಲೀಸರು ಚಾಲಕನಿಗೆ ದಂಡ ಹಾಕಿದ್ದಾರೆ.