ಸಾರಾಂಶ
ತಾಲೂಕಿನ ಯಲ್ಲದಕೆರೆ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕೆ ಬಸ್ ಸೌಲಭ್ಯ ಒದಗಿಸಿದ್ದರಿಂದ ಆ ಭಾಗದ ವಿದ್ಯಾರ್ಥಿಗಳು ಸಾರ್ವಜನಿಕರು ಸಿಹಿ ಹಂಚಿ ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಯಲ್ಲದಕೆರೆ ಭಾಗದ ನೂರಾರು ವಿದ್ಯಾರ್ಥಿಗಳು ಕಳೆದ 4 ತಿಂಗಳಿಂದ ಬಸ್ ಸೌಲಭ್ಯ ಕಲ್ಪಿಸುವಂತೆ ಮಾಡುತ್ತಿದ್ದ ಪ್ರತಿಭಟನೆಗೆ ಕೊನೆಗೂ ಪ್ರತಿಫಲ ದೊರಕಿದೆ.ಡಿ.2ರಂದು ನೂರಾರು ವಿದ್ಯಾರ್ಥಿಗಳು ಸುಮಾರು 2 ಗಂಟೆಗಳ ಕಾಲ ಬಸ್ ತಡೆದು ಪ್ರತಿಭಟನೆ ನಡೆಸಿದ್ದರು. ಬಸ್ ಸೌಲಭ್ಯ ವಂಚಿತ ವಿದ್ಯಾರ್ಥಿಗಳ ಸಂಕಷ್ಟದ ಬಗ್ಗೆ ಕನ್ನಡಪ್ರಭ ಪತ್ರಿಕೆ ಮಾಡಿದ ವರದಿಯ ಜೆರಾಕ್ಸ್ ಪ್ರತಿ ಹಿಡಿದು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಕೊನೆಗೆ ವಿದ್ಯಾರ್ಥಿಗಳ ಪ್ರತಿಭಟನೆಗೆ ಮನ್ನಣೆ ನೀಡಿ ಒಂದು ವಾರದೊಳಗೆ ಬಸ್ ಸೌಲಭ್ಯ ಒದಗಿಸುತ್ತೇವೆ ಎಂದು ಅಧಿಕಾರಿಗಳು ಮಾತು ಕೊಟ್ಟದ್ದರಿಂದ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದಿದ್ದರು. ಇದೀಗ ಸೋಮವಾರದಿಂದ ಸಾರಿಗೆ ಅಧಿಕಾರಿಗಳು ಆ ಭಾಗದ ನೂರಾರು ವಿದ್ಯಾರ್ಥಿಗಳ ಓಡಾಟಕ್ಕೆ ಬಸ್ ಸೌಲಭ್ಯ ಕಲ್ಪಿಸಿದ್ದು ವಿದ್ಯಾರ್ಥಿಗಳು ಸಾರ್ವಜನಿಕರು ಬಸ್ ಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.
ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಆರ್.ಜಯಪ್ರಕಾಶ್ ಮಾತನಾಡಿ, ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿನನಿತ್ಯ ಇಲ್ಲಿಂದ ನಗರ ಪ್ರದೇಶದ ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದು ಇಷ್ಟು ದಿನ ಬಸ್ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿತ್ತು. ಇದೀಗ ಎರಡು ದಿನದಿಂದ ಒಂದು ಬಸ್ ಸಂಚರಿಸುತ್ತಿದ್ದು ವಿದ್ಯಾರ್ಥಿಗಳ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು ಇನ್ನೂ ಎರಡು ಬಸ್ಸು ಬಿಟ್ಟರೆ ಈ ಭಾಗದ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ ಎಂದರು. ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ನಟರಾಜು, ಹಾಲೇಶ್, ಗ್ಯಾಸ್ ಕರಿಯಪ್ಪ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.