೧೨ನೇ ಶತಮಾನದಲ್ಲಿ ಬಸವಾದಿ ಶರಣರು ನೀಡಿದ ಅಕ್ಷರ, ಕಾಯಕ ಮತ್ತು ಅನ್ನ ಎಂಬ ತ್ರಿವಿಧ ದಾಸೋಹದ ಕೊಡುಗೆಯೇ ಇಂದಿನ ಸಮ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಿದೆ ಎಂದು ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸೊರಬ

೧೨ನೇ ಶತಮಾನದಲ್ಲಿ ಬಸವಾದಿ ಶರಣರು ನೀಡಿದ ಅಕ್ಷರ, ಕಾಯಕ ಮತ್ತು ಅನ್ನ ಎಂಬ ತ್ರಿವಿಧ ದಾಸೋಹದ ಕೊಡುಗೆಯೇ ಇಂದಿನ ಸಮ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಿದೆ ಎಂದು ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಕಾನಕೇರಿ ಮಠದ ಆವರಣದಲ್ಲಿ ಆಯೋಜಿಸಿದ್ದ ಮಠದ ದ್ವಾದಶಮಾನೋತ್ಸವ ಹಾಗೂ ಗುರುವಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿವಶರಣರು ಹಂಚಿ ತಿನ್ನುವ ಶ್ರೇಷ್ಠ ಸಂಪ್ರದಾಯವನ್ನು ಹುಟ್ಟುಹಾಕಿದ್ದರಿಂದಲೇ ಇಂದು ಮಠಗಳಲ್ಲಿ ಸಾಮೂಹಿಕ ದಾಸೋಹ ಸಾಗುತ್ತಿದೆ. ಮಠಗಳಲ್ಲಿ ದೊರೆಯುವ ಉತ್ತಮ ಸಂಸ್ಕಾರಗಳು ಮನೆಗಳಲ್ಲಿಯೂ ಮೂಡಿದಾಗ ಮಾತ್ರ ನವ ಸಮಾಜ ನಿರ್ಮಾಣ ಸಾಧ್ಯ. ಜಂಗಮರ ನಡವಳಿಕೆಗಳು ಭಕ್ತರಿಗೆ ಮಾದರಿಯಾಗಬೇಕು ಹಾಗೂ ಸ್ವಾಮೀಜಿಗಳು ಭಕ್ತರೊಂದಿಗೆ ಅವಿನಾಭಾವ ಸಂಬಂಧ ಬೆಸೆಯುವಂತೆ ನಡೆದುಕೊಳ್ಳಬೇಕು ಎಂದರು.

ಇಂದಿನ ಮೊಬೈಲ್, ಟಿವಿ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಾನವ ಸಂಬಂಧಗಳು ಕ್ಷೀಣಿಸುತ್ತಿವೆ. ಇಳಿ ವಯಸ್ಸಿನಲ್ಲಿ ಮಕ್ಕಳೊಂದಿಗೆ ಸಂತೋಷದಿಂದ ಇರಬೇಕಾದ ವೃದ್ಧರು ವೃದ್ಧಾಶ್ರಮ ಸೇರುವ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಪೋಷಕರು ಬಾಲ್ಯದಿಂದಲೇ ಮಕ್ಕಳಿಗೆ ಗುರುಹಿರಿಯರನ್ನು ಗೌರವಿಸುವ ಉತ್ತಮ ಸಂಸ್ಕಾರ ನೀಡಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲೆಯ ಪ್ರತಿ ತಾಲೂಕಿಗೂ ರೈಲ್ವೆ ಸಂಪರ್ಕ ಕಲ್ಪಿಸುವ ಸಂಕಲ್ಪ ಹೊಂದಲಾಗಿದೆ. ತಾಳಗುಪ್ಪ-ಸೊರಬ ಮಾರ್ಗವಾಗಿ ಹುಬ್ಬಳ್ಳಿಗೆ ರೈಲು ಸಂಚಾರ ಆರಂಭಿಸಲು ಕಳೆದ ಎರಡು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದ್ದು, ಈಗಾಗಲೇ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಶೀಘ್ರದಲ್ಲೇ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಭರವಸೆ ನೀಡಿದರು.

ಮಾನವ ಜನ್ಮ ಸಾರ್ಥಕವಾಗಲು ಸ್ವಾಮೀಜಿಗಳ ಮಾರ್ಗದರ್ಶನ ಅಗತ್ಯ. ವೀರಶೈವ ಧರ್ಮವು ಜಾತಿ-ಮತಗಳ ಎಲ್ಲೆ ಮೀರಿ ಸಮಾಜವನ್ನು ಒಗ್ಗೂಡಿಸುತ್ತಿದೆ. ಬಹಿರಂಗದ ಶುದ್ಧಿಯ ಜತೆಗೆ ಪ್ರತಿಯೊಬ್ಬರೂ ಅಂತರಂಗದ ಶುದ್ಧಿಗೂ ಆದ್ಯತೆ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಕಾನಕೇರಿ ಮಠದ ಪೀಠಾಧಿಪತಿ ಘನಬಸವ ಅಮರೇಶ್ವರ ಸ್ವಾಮೀಜಿ ಅವರ ಅಮರತ್ವದೆಡೆಗೆ ಭಾಗ-೨ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ತಾ.ಪಂ. ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ ಮಾತನಾಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ವಹಿಸಿದ್ದರು. ಗೊಗ್ಗೆಹಳ್ಳಿ ಮಠದ ಸಂಗಮೇಶ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಗೊಗ್ಗೆಹಳ್ಳಿ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಅಖಿಲ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಗುರುಕುಮಾರ್ ಪಾಟೀಲ್ ಹಾಗೂ ಕಾನಕೇರಿ ಮಠದ ಘನಬಸವ ಅಮರೇಶ್ವರ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಜಡೆ ಮಠದ ಡಾ. ಮಹಾಂತ ಸ್ವಾಮೀಜಿ, ಕ್ಯಾಸನೂರು ಹಿರೇಮಠದ ಗುರುಬಸವ ಪಂಡಿತಾರಾಧ್ಯ ದೇಶಿಕೇಂದ್ರ ಸ್ವಾಮೀಜಿ, ಪ್ರಮುಖರಾದ ಅಶೋಕ ನಾಯಕ್ ಅಂಡಿಗೆ, ಜೈಶೀಲಗೌಡ ಅಂಕರವಳ್ಳಿ, ರಾಜಶೇಖರ, ದಯಾನಂದಗೌಡ, ಜಗದೀಶ್, ಕೆ.ವಿ. ಗೌಡ, ರೇಖಾ ಜಗದೀಶ್, ನಾಗರಾಜ್ ಗುತ್ತಿ, ಡಾ. ಎಚ್.ಇ. ಜ್ಞಾನೇಶ್, ಪಾಣಿ ರಾಜಪ್ಪ, ಶಂಕರ್ ಶೇಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.