ಸಾರಾಂಶ
ಮಂಜುನಾಥ ಕೆ.ಎಂ.
ಸಿರುಗುಪ್ಪ: ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಪ್ರಗತಿ ಮತ್ತು ಗಡಿನಾಡಿನಲ್ಲಿ ಭಾಷಾಭಿಮಾನ ಮೂಡಿಸುವ ಆಶಯದಲ್ಲಿ ನಗರದ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸಿರುಗುಪ್ಪ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಆಚರಣೆಗೊಂಡಿತು.ಸಿರುಗುಪ್ಪ ಸೇರಿದಂತೆ ಸುತ್ತಮುತ್ತ ಗ್ರಾಮಗಳು ಹಾಗೂ ಗಡಿಭಾಗದ ಅನೇಕ ಕಡೆಗಳಿಂದ ಆಗಮಿಸಿದ್ದ ಕನ್ನಡಾಭಿಮಾನಿಗಳು ಸಮ್ಮೇಳನಕ್ಕೆ ಸಾಕ್ಷಿಯಾದರು. ವಿದ್ಯಾರ್ಥಿ, ಯುವಜನರು, ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಭಾಷಾಭಿಮಾನದ ಕನ್ನಡಿಗರು ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನುಡಿಜಾತ್ರೆ ಅದ್ಧೂರಿಗೊಳಿಸಿದರು.
ಸಮ್ಮೇಳನದ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಪರಿಷತ್ತಿನ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ನಗರಸಭೆ ಅಧ್ಯಕ್ಷೆ ರೇಣುಕಮ್ಮ ನಾಡ ಧ್ವಜಾರೋಣ ಮಾಡಿದರು. ಪರಿಷತ್ತಿನ ತಾಲೂಕು ಅಧ್ಯಕ್ಷ ಡಾ.ಮಧುಸೂದನ್ ಕಾರಿಗನೂರು ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.ಬಳಿಕ ಕನ್ನಡ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಗೆ ಚಾಲನೆ ದೊರೆಯತು. ಸಾರೋಟದಲ್ಲಿ ಸಮ್ಮೇಳನದ ಅಧ್ಯಕ್ಷ ಶಿವಕುಮಾರ ಎಸ್.ಬಳಿಗಾರ ಅವರನ್ನು ಸಡಗರ ಸಂಭ್ರಮದಿಂದ ಕರೆತರಲಾಯಿತು. ಸಿರುಗುಪ್ಪದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪರಿಷತ್ತಿನ ಸದಸ್ಯರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್, ಸೇವಾದಳದ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರಗು ತಂದರು. ಪ್ಯಾಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಶುರುಗೊಂಡ ಮೆರವಣಿಗೆ ಅಭಯಾಂಜನೇಯ ದೇವಸ್ಥಾನ ಎದುರುಗಿನ ಸಮ್ಮೇಳನದ ವೇದಿಕೆವರೆಗೆ ಸಾಗಿ ಬಂತು.
ಸಂಗೀತ ವಿದ್ವಾನ್ ದೊಡ್ಡಬಸವಾರ್ಯ ಗವಾಯಿಗಳ ವೇದಿಕೆಯಲ್ಲಿ ಜರುಗಿದ 7ನೇ ಸಿರುಗುಪ್ಪ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಚಂದನ ವಾಹಿನಿಯ ಖ್ಯಾತ ನಿರೂಪಕ, ಲೇಖಕ, ಜನಮುಖಿ ಚಿಂತಕ ಡಾ.ನಾ.ಸೋಮೇಶ್ವರ ಚಾಲನೆ ನೀಡಿದರು.ಇದೇ ವೇಳೆ ಮಾತನಾಡಿದ ಅವರು, ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಪರಂಪರೆ ಕುರಿತು ತಿಳಿಸಿಕೊಟ್ಟರು. ಪ್ರಾಸ್ತಾವಿಕ ಮಾತನಾಡಿದ ಸಾಹಿತ್ಯ ಪರಿಷತ್ತಿನ ಸಿರುಗುಪ್ಪ ಘಟಕದ ಅಧ್ಯಕ್ಷ ಡಾ.ಮಧುಸೂದನ್ ಕಾರಿಗನೂರು ಸಿರುಗುಪ್ಪದಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಈವರೆಗೆ ಕೈಗೊಂಡಿರುವ ಕನ್ನಡಮುಖಿ ಕಾರ್ಯಗಳು ಕುರಿತು ತಿಳಿಸಿಕೊಟ್ಟರು.
ಪರಿಷತ್ತಿನ ಸಿರುಗುಪ್ಪ ಘಟಕದಿಂದ ವಿದ್ಯಾರ್ಥಿಗಳಲ್ಲಿ ಕನ್ನಡ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ನಡೆಯುತ್ತಿದೆ. ರಸಪ್ರಶ್ನೆ, ಪ್ರಬಂಧ, ಭಾಷಣ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ಮಕ್ಕಳಲ್ಲಿ ಭಾಷಾ ಪ್ರಜ್ಞೆ ಮೂಡಿಸುವ ಕೆಲಸವಾಗುತ್ತಿದೆ ಎಂದು ತಿಳಿಸಿದರು. ಅಲ್ಲದೆ, ಇನ್ನು ಮುಂದೆ ಪ್ರತಿ ವರ್ಷ ಸಿರುಗುಪ್ಪದಲ್ಲಿ ಕನ್ನಡದ ಉತ್ಸವ ಹಮ್ಮಿಕೊಳ್ಳುವ ಮೂಲಕ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಪ್ರಗತಿಯೆಡೆಗಿನ ಸಣ್ಣದೊಂದು ಹೆಜ್ಜೆ ಇಡುವ ಕೆಲಸವಾಗಲಿದೆ ಎಂದು ಹೇಳಿದರು.ಆಶಯ ನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿದ್ದು, ಬಳ್ಳಾರಿ-ವಿಜಯನಗರ ಜಿಲ್ಲೆಗಳ ಜನರು ಸೇರಿ ಯಶಸ್ವಿಗೊಳಿಸಬೇಕಾಗಿದೆ ಎಂದರು.
ಬಸವಪ್ರಭುಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್ ಎಚ್.ವಿಶ್ವನಾಥ್, ಹಿರಿಯ ಲೆಕ್ಕಪರಿಶೋಧಕ ಹಾಗೂ ಅರಿವು ಸಂಸ್ಥೆಯ ಮುಖ್ಯಸ್ಥ ಸಿರಿಗೇರಿ ಪನ್ನರಾಜ, ಬಿ.ಎಂ. ಸತೀಶ್, ಹಿರಿಯ ಲೇಖಕ ಶಿವಕುಮಾರ ತಾತ, ಡಾ.ಚಂದ್ರಮೌಳಿ, ದಮ್ಮೂರು ಮಲ್ಲಿಕಾರ್ಜುನ, ಪಂಪಾಪತಿ, ದರಪ್ಪ ನಾಯಕ, ತಾಪಂ ಇಒ ಪವನ್‌ಕುಮಾರ್ ದಂಡಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಹನುಮಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಗುರ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ದಮ್ಮೂರು ಬಸವರಾಜ್ ಸೇರಿದಂತೆ ಸಾಹಿತ್ಯ ಪರಿಷತ್ತಿನ ಸಿರುಗುಪ್ಪ ಘಟಕದ ಮಾಜಿ ಅಧ್ಯಕ್ಷರು ಹಾಗೂ ಈ ಹಿಂದಿನ ಸಮ್ಮೇಳನದ ಅಧ್ಯಕ್ಷರು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಇದೇ ವೇಳೆ ಸಿರಿಸೌರಭ ಸ್ಮರಣ ಸಂಚಿಕೆಯನ್ನು ವೇದಿಕೆಯಲ್ಲಿದ್ದ ಗಣ್ಯರು ಲೋಕಾರ್ಪಣೆಗೊಳಿಸಿದರು. ಸಿರುಗುಪ್ಪ ಕಲಾವಿದರ ತಂಡದವರು ನಾಡಗೀತೆ ಹಾಗೂ ರೈತಗೀತೆಗಳನ್ನು ಪ್ರಸ್ತುತಪಡಿಸಿದರು. ಸಮಾರಂಭದಲ್ಲಿ ಸಮ್ಮೇಳನದ ಅಧ್ಯಕ್ಷ ಲೇಖಕ ಡಾ.ಶಿವಕುಮಾರ ಎಸ್.ಬಳಿಗಾರ ಕುಟುಂಬ ಹಾಗೂ ನಾ.ಸೋಮೇಶ್ವರ ಅವರನ್ನು ಸನ್ಮಾನಿಸಲಾಯಿತು.
ಜೆ.ನರಸಿಂಹಮೂರ್ತಿ, ಬಿ.ಎಂ. ಅಪರ್ಣಾ ಕಾರ್ಯಕ್ರಮ ನಿರ್ವಹಿಸಿದರು. ಮಧ್ಯಾಹ್ನದ ಬಳಿಕ ವಿಚಾರ ಗೋಷ್ಠಿಗಳು, ಕವಿಗೋಷ್ಠಿ ಜರುಗಿದವು. ಕನ್ನಡ ಸಾಹಿತ್ಯಕ್ಕೆ ಸಿರುಗುಪ್ಪ ತಾಲೂಕಿನ ಕೊಡುಗೆ ವಿಷಯ ಕುರಿತು ಕೆ.ಗಾದಿಲಿಂಗಪ್ಪ ಉಪನ್ಯಾಸ ನೀಡಿದರು.ಸಿರುಗುಪ್ಪ ಜಾನಪದ ಸಾಹಿತ್ಯ ಸೊಬಗು ಕುರಿತು ಸಾಹಿತಿ ನಾ.ಮ.ಮರುಳಾರಾಧ್ಯ ನಾಗರಹಾಳು ಹಾಗೂ ಸಿರುಗುಪ್ಪ ತಾಲೂಕಿನ ಐತಿಹಾಸಿಕ ಮಹತ್ವ ಕುರಿತು ಬಿ.ಚಂದ್ರಶೇಖರ ವಿಚಾರ ಮಂಡಿಸಿದರು. ದಮ್ಮೂರು ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ದರಪ್ಪ ನಾಯಕ, ಶಿವಲಿಂಗಪ್ಪ ಹಂದಿಹಾಳು, ದಮ್ಮೂರು ಸೋಮಪ್ಪ, ಕುಂಟನಹಾಳು ಮಲ್ಲಿಕಾರ್ಜುನ ಸ್ವಾಮಿ, ಬಿ.ಎಂ.ಸತೀಶ್ ಉಪಸ್ಥಿತರಿದ್ದರು.
ನಂತರ ಜರುಗಿದ ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಕವಿಗಳು ಭಾಗವಹಿಸಿ, ಕವನ ವಾಚನ ಮಾಡಿದರು. ಹರೀಶ್ ಬಿ., ಚಂದ್ರಕಾಂತ ಹಾಗೂ ಶರಣಪ್ಪ ಕವಿಗೋಷ್ಠಿಯ ಕಾರ್ಯಕ್ರಮ ನಿರ್ವಹಿಸಿದರು.