ಸಾರಾಂಶ
ಕುಂಭಮೇಳಕ್ಕೆ ತೆರಳಿದ್ದ ಉದ್ಯಮಿ ಜಯಪ್ರಕಾಶ್ ಅಮೈ ಕಥನ । ವ್ಯವಸ್ಥೆಯ ಬಗ್ಗೆ ಶ್ಲಾಘನೆ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿನಾವಾಡುತ್ತಿದ್ದ ತುಳು ಭಾಷೆ ನಮ್ಮನ್ನು ವಾರವಿಡೀ ಅಖಾಡದಲ್ಲಿ ಉಳಿಸಿತು. ನಾಗಾ ಸಾಧು ಹಾಗೂ ಅಘೋರಿಗಳ ಮಧ್ಯೆ ಆ ದಿನಗಳನ್ನು ಕಳೆದೆವು. ಒಟ್ಟಾರೆ ದೈವೀ ಕೃಪೆ ನಮ್ಮನ್ನು ಅಖಾಡದ ವಾಸ್ತವ್ಯಕ್ಕೆ ಕೊಂಡೊಯ್ದಿತ್ತು ಎಂದು ಪುತ್ತೂರಿನ ಮೊಬೈಲ್ ಉದ್ಯಮಿ ಜಯಪ್ರಕಾಶ್ ಅಮೈ ತನ್ನ ಕುಂಭಮೇಳದ ಅನುಭವವನ್ನು ವಿವರಿಸಿದ್ದಾರೆ.೧೪೪ ವರ್ಷಗಳಲ್ಲಿ ಬರುವ ಮಹಾಕುಂಭ ಮೇಳಕ್ಕೆ ಹೋಗಲೇಬೇಕೆಂಬ ಸಂಕಲ್ಪ ತೊಟ್ಟಿದ್ದೆವು. ಐವರು ಕೂಡಿ ಹೋಗುವುದೆಂದು ನಿಶ್ಚಯಿಸಿ ವಿಮಾನಯಾನದ ಟಿಕೆಟ್ ಖರೀದಿಸಿದ್ದೆವು. ಹೋಗುವ ದಿನ ಸಮೀಪಿಸಿದಂತೆ ನಮ್ಮ ತಂಡದ ಇಬ್ಬರಿಗೆ ಸೂತಕ ಕಾಡಿತು. ಹೀಗಾಗಿ ಪುತ್ತೂರಿನ ನಿವಾಸಿಗರಾದ ಪ್ರದೀಪ್ ಪೂಜಾರಿ ಮತ್ತು ವಿನೋದ್ ಕುಮಾರ್ ಹಾಗೂ ನಾನು ಸೇರಿ ಮೂವರೇ ಯಾತ್ರೆಯನ್ನು ಕೈಗೊಳ್ಳಬೇಕಾಗಿ ಬಂತು. ಬೆಂಗಳೂರಿನಲ್ಲಿ ಸ್ವಾಮಿಯೊಬ್ಬರು ನಮಗೆ ಜೊತೆಯಾಗಿ ಅವರ ಅವಶ್ಯಕತೆಗಾಗಿ ನಮ್ಮನ್ನು ನೇರವಾಗಿ ಪ್ರಯಾಗಕ್ಕೆ ಕರೆದೊಯ್ದರು. ಅಯೋಧ್ಯೆ ಹಾಗೂ ಕಾಶಿಗೆ ಮೊದಲು ಹೋಗಿ ಬಳಿಕ ಪ್ರಯಾಗಕ್ಕೆ ಹೋಗುವ ಪೂರ್ವ ಯೋಜನೆಯನ್ನು ಈ ಸ್ವಾಮಿಯವರ ಒತ್ತಾಸೆಯಂತೆ ಬದಲಾಯಿಸಿದೆವು. ಈ ಸ್ವಾಮಿಯವರು ನಮ್ಮನ್ನು ನೇರವಾಗಿ ಅಖಾಡಕ್ಕೆ ಕರೆದೊಯ್ದ ಬಳಿಕ ಅವರು ನಮ್ಮಿಂದ ಬೇರ್ಪಟ್ಟರು.
ಆ ವೇಳೆ ನಾವುಗಳು ತುಳುವಿನಲ್ಲಿ ಮಾತನಾಡುತ್ತಾ ಇರುವುದನ್ನು ಕಂಡ ಅಖಾಡದಲ್ಲಿದ್ದ ನಾಗ ಸಾಧುವೊಬ್ಬರು ನಮ್ಮಲ್ಲಿ ನೇರವಾಗಿ ತುಳುವಿನಲ್ಲಿ ಮಾತಾಡಿ, ನಮ್ಮ ಬಗ್ಗೆ ವಿಚಾರಿಸಿದರು. ನಾವು ದ.ಕ ಜಿಲ್ಲೆಯಿಂದ ಬಂದವರೆಂದು ತಿಳಿದು ಸಂತಸಗೊಂಡ ಅವರು, ನಮ್ಮ ದಾಖಲೆ ಪತ್ರಗಳನ್ನು ಪರಿಶೀಲಿಸಿ ಅಖಾಡದಲ್ಲಿ ಉಳಿಯಲು ಅಗತ್ಯವಾದ ಪೂರಕ ದಾಖಲೆಗಳನ್ನು ಸಿದ್ಧಪಡಿಸಿ ಒದಗಿಸಿದರು. ಬಳಿಕ ಪ್ರಯಾಗದಿಂದ ಅಯೋಧ್ಯೆಗಾಗಲಿ, ಕಾಶಿಗಾಗಲಿ ಹೋಗಬೇಡಿ ಮುಂದೊಂದು ದಿನ ನೀವು ಅಲ್ಲಿಗೆ ಯಾತ್ರೆ ಕೈಗೊಳ್ಳಲಿದ್ದೀರಿ. ಈ ಬಾರಿ ಮೌನಿ ಅಮವಾಸ್ಯೆಯ ದಿನದ ವರೆಗೆ ನೀವು ಇಲ್ಲಿಯೇ ಇದ್ದು ಬಿಡಿ ಎಂದರು.ಈ ಎಲ್ಲಾ ಬೆಳವಣಿಗೆ ದೈವದ ನಿಯಮದಂತೆ ನಡೆಯುತ್ತಿದೆಯೋ ಏನೋ ಎಂದು ಭಾವಿಸಿ ಒಪ್ಪಿಗೆ ನೀಡಿದೆವು. ಗುರುತು ಪರಿಚಯವಿಲ್ಲದ ನಮ್ಮನ್ನು ಸಾಧು ಸನ್ಯಾಸಿಗಳು ನೆಲೆ ನಿಂತ ಅಖಾಡದಲ್ಲಿ ಉಳಿಯುವಂತೆ ಮಾಡಿದ ಬಾಬಾ ವಿಠಲ್ ಗಿರಿ ಮಹಾರಾಜ್ ಆಗಲಿ, ಬೆಂಗಳೂರಿನಿಂದ ಜೊತೆಗೂಡಿದ ಸನ್ಯಾಸಿಯಾಗಲಿ ನಮಗೆ ಪರಿಚಿತರಲ್ಲ. ಅಷ್ಟಕ್ಕೂ ನಮ್ಮನ್ನು ಅಖಾಡಕ್ಕೆ ಕರೆತಂದ ಬೆಂಗಳೂರಿನಿಂದ ಜೊತೆಗೂಡಿದ ಸ್ವಾಮೀಜಿ ನಮ್ಮ ಯಾತ್ರೆಯುದ್ದಕ್ಕೂ ಅಗೋಚರ ಶಕ್ತಿಯಾಗಿಯೇ ಗೋಚರಿಸಿದರು.* ಅಖಾಡದಲ್ಲೇ ಊಟೋಪಚಾರ
ಅಲ್ಲಿದ್ದ ಎಲ್ಲ ದಿನಗಳಲ್ಲಿಯೂ ನಮಗೆ ಪುಣ್ಯ ತೀರ್ಥ ಸ್ನಾನದ ಸೌಭಾಗ್ಯ ಒದಗಿತ್ತು. ಮೌನಿ ಅಮವಾಸ್ಯೆಯ ದಿನದ ಕಾಲ್ತುಲಿತ ನಮ್ಮ ಸನಿಹದ ಬೇರೊಂದು ವಿಭಾಗದಲ್ಲಿ ಘಟಿಸಿತ್ತು. ಆದರೆ ಅಲ್ಲಿನ ಆಡಳಿತ ಕೈಗೊಂಡ ವ್ಯವಸ್ಥಿತವಾದ ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ಸಮಸ್ಯೆಯನ್ನು ತ್ವರಿತವಾಗಿ ನಿವಾರಿಸಲಾಯಿತು. ನಮಗೆಲ್ಲ ಅಖಾಡದಲ್ಲಿಯೇ ಊಟೋಪಚಾರಗಳು ನಡೆದಿತ್ತು. ಸಾಧುಗಳ ಅನುಯಾಯಿಗಳಿಂದ ಊಟೋಪಚಾರದ ವ್ಯವಸ್ಥೆ ನಿತ್ಯ ನಿರಂತರ ನಡೆಯುತ್ತಿತ್ತು. * ಸಾಧುಗಳು ಒಬ್ಬರಿಗೊಬ್ಬರು ಭಿನ್ನರುಸಾಧುಗಳು ಮಾತ್ರ ಒಬ್ಬರಿಗೊಬ್ಬರು ಭಿನ್ನವಾಗಿದ್ದರು. ಕೆಲವರು ಮಾತು ಕಡಿಮೆ, ಇನ್ನು ಕೆಲವರು ಸದಾ ಮೌನಿಗಳು, ಮತ್ತೆ ಹಲವರು ಯಾವುದೋ ಲೋಕದಲ್ಲಿದ್ದಂತೆ ಭಾಸವಾಗುತ್ತಿದ್ದರು. ಏನು ಕೇಳಿದರೂ ಪ್ರತಿಕ್ರಿಯಿಸದೆ ಎಲ್ಲೋ ನೋಡುತ್ತಿದ್ದರು. ಅವರವರ ವಾಸ್ತವ್ಯದ ಸ್ಥಳದಲ್ಲಿ ಹೋಮ ಹವನಗಳು ನಡೆಯುತ್ತಿದ್ದು, ವಿವಿಧ ಭಜನ್ ಕಥಾಪ್ರಸಂಗದಂತಹ ಧಾರ್ಮಿಕ ಕಾರ್ಯಕ್ರಮಗಳು ನಿರಂತರ ನಡೆಸುತ್ತಿದ್ದರು. ಆಹಾರದ ಕಡೆ ಆಸಕ್ತಿ ಇಲ್ಲದೆ ಅತ್ಯಂತ ಕಡಿಮೆ ಆಹಾರವನ್ನು ಸೇವಿಸುತ್ತಿರುವುದನ್ನು ಗಮನಿಸಿದ್ದೇವೆ. ಹಠ ಯೋಗಿಗಳನ್ನು ಕಂಡೆವು. ನಾವಿದ್ದ ೬ ದಿನಗಳಲ್ಲಿ ಅಲ್ಲಿನ ೨೦ ಅಖಾಡಗಳನ್ನು ಭೇಟಿ ಮಾಡುವ ಅವಕಾಶವೂ ಪ್ರಾಪ್ತಿಯಾಯಿತು.ಕುಂಭಮೇಳಕ್ಕೆ ಜನ ಸಾಗರ ಹರಿದು ಬರುತ್ತಿದೆ. ಅವರೆಲ್ಲರಿಗೂ ಅತ್ಯುತ್ತಮ ವ್ಯವಸ್ಥೆಯನ್ನು ಅಲ್ಲಿನ ಸರ್ಕಾರ ಮಾಡಿದೆ. ನಡಿಗೆಯ ಅನಿವಾರ್ಯತೆಯನ್ನು ಹೊರತುಪಡಿಸಿದರೆ ಅಲ್ಲಿ ಯಾವುದಕ್ಕೂ ಸಮಸ್ಯೆ ಇಲ್ಲ. ಕಿಲೋ ಮೀಟರ್‌ಗಟ್ಟಲೆ ನಡೆಯುವುದೇ ಅಲ್ಲಿನ ಸವಾಲು. ಆಹಾರ, ಶೌಚ, ವಾಸ್ತವ್ಯ ಅಲ್ಲಿ ಸುಲಲಿತ ಹಾಗೂ ಸುವ್ಯವಸ್ಥಿತವಾಗಿ ಲಭಿಸುವಂತೆ ಸರ್ಕಾರ ಮಾಡಿದೆ. ಈ ನಿಟ್ಟಿನಲ್ಲಿ ಪ್ರತಿ ಯಾತ್ರಿಕನೂ ದೇವರನ್ನು ನೆನೆದಂತೆ ಅಲ್ಲಿನ ಸರ್ಕಾರವನ್ನು ನೆನೆಯುತ್ತಾರೆ. ಪ್ರಯಾಗದಿಂದ ತಂದ ೨ ಕ್ಯಾನ್ ಗಂಗಾ ಜಲವನ್ನು ಬಂಧು ಮಿತ್ರರಿಗೆ ಹಂಚಿದ್ದೇನೆ ಎಂದು ಜಯಪ್ರಕಾಶ್ ಅಮೈ ವಿವರಿಸಿದ್ದಾರೆ. ಬಾಬಾ ವಿಠಲ್ ಗಿರಿ ಮಹಾರಾಜ್ ನಮ್ಮ ಜಿಲ್ಲೆಯವರು:ನಮ್ಮ ತುಳು ಭಾಷೆಯನ್ನು ಕಂಡು ನಮಗೆ ಆತಿಥ್ಯ ಒದಗಿಸಿದ ಬಾಬಾ ವಿಠಲ್ ಗಿರಿ ಮಹಾರಾಜ್ ಮೂಲತಃ ದ.ಕ. ಜಿಲ್ಲೆಯ ಪೊಳಲಿಯವರು. ಎಂಜಿನಿಯರ್ ಪದವೀಧರರಾದ ಅವರು ಅಮೆರಿಕದಲ್ಲಿ ಉದ್ಯೋಗಿಯಾಗಿದ್ದರು. ಉದ್ಯೋಗ ತ್ಯಜಿಸಿ ತಾಯ್ನಾಡಿಗೆ ಬಂದ ಅವರು ಆರ್‌ಎಸ್‌ಎಸ್ ಪ್ರಚಾರಕರಾದರು. ಬಳಿಕ ಅಲ್ಲಿಂದಲೇ ಆಧ್ಯಾತ್ಮ ಕ್ಷೇತ್ರದತ್ತ ಆಕರ್ಷಿತರಾದ ಅವರು ನಾಗಾ ಸಾಧುವಾಗಿ ಪ್ರಸಕ್ತ ಹರ್ಯಾಣದ ಕಾಡೊಂದರಲ್ಲಿ ಸಾಧಕರಾಗಿದ್ದಾರೆಂದು ಅವರೊಡನೆ ಮಾತುಕತೆಗಿಳಿದಾಗ ತಿಳಿಸಿದರು.