ಭಕ್ತಿ ಪ್ರಧಾನವಾಗಿ ನಡೆಯುತ್ತಿರುವ ಉಮಾಮಹೇಶ್ವರಿ ದೊಡ್ಡಹಬ್ಬ

| Published : Mar 27 2025, 01:04 AM IST

ಸಾರಾಂಶ

ಗ್ರಾಮ ದೇವತೆಗಳಾದ ಉಮಾಮಹೇಶ್ವರಿ, ಚೌಡಮ್ಮ, ಮಂಚಮ್ಮ, ಸೇರಿದಂತೆ ವಿವಿಧ ದೇವತೆಗಳಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಉಮಾ ಮಹೇಶ್ವರಿ ಅರ್ಚಕ ಚಿಕ್ಕಲಿಂಗಯ್ಯ ಅವರಿಗೆ ಒಕ್ಕಲಿನ 12 ತಂಡೆಯವರು 12 ಬಣ್ಣದ ಬಟ್ಟೆಯನ್ನು ಕಟ್ಟಿ ತಮಟೆ ತಾಳಕ್ಕೆ ಕುಣಿಸುವುದರ ಮೂಲಕ 12 ಸೆರಗು ವೇಷಾಧಾರಿ ಸಂಪ್ರದಾಯಕ್ಕೆ ಮುನ್ನುಡಿ ಬರೆದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ತಳಗವಾದಿ ಗ್ರಾಮದಲ್ಲಿ 9 ವರ್ಷಕ್ಕೊಮ್ಮೆ ನಡೆಯುತ್ತಿರುವ ಉಮಾ ಮಹೇಶ್ವರಿ ದೊಡ್ಡಹಬ್ಬವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಪ್ರದಾಯಕ ವಿಧಿ ವಿಧಾನದಲ್ಲಿ ಪೂಜಾ ಕಾರ್ಯಕ್ರಮವು ಭಕ್ತಿ ಪ್ರಧಾನವಾಗಿ ಮುಂದುವರಿದಿದೆ.

ಗ್ರಾಮದ ಮಧ್ಯೆ ಇರುವ ಮಾರಿಗುಡಿ ರಂಗ ಮಂದಿರ ಆವರಣದಲ್ಲಿ ಬಿದಿರು ಹಾಗೂ ಅಡಿಕೆ ಮರದ ಕಂಬಗಳನ್ನು ನೆಟ್ಟು ಆವರಣದಲ್ಲಿ ಉದ್ದಕ್ಕೂ ಹಸಿರು ಚಪ್ಪರ ಹಾಕಿ ಮಾರಮ್ಮ ದೇವಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು.

ಗ್ರಾಮ ದೇವತೆಗಳಾದ ಉಮಾಮಹೇಶ್ವರಿ, ಚೌಡಮ್ಮ, ಮಂಚಮ್ಮ, ಸೇರಿದಂತೆ ವಿವಿಧ ದೇವತೆಗಳಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಉಮಾ ಮಹೇಶ್ವರಿ ಅರ್ಚಕ ಚಿಕ್ಕಲಿಂಗಯ್ಯ ಅವರಿಗೆ ಒಕ್ಕಲಿನ 12 ತಂಡೆಯವರು 12 ಬಣ್ಣದ ಬಟ್ಟೆಯನ್ನು ಕಟ್ಟಿ ತಮಟೆ ತಾಳಕ್ಕೆ ಕುಣಿಸುವುದರ ಮೂಲಕ 12 ಸೆರಗು ವೇಷಾಧಾರಿ ಸಂಪ್ರದಾಯಕ್ಕೆ ಮುನ್ನುಡಿ ಬರೆದರು.

ಎತ್ತಿನ ಕೊಂಬಿಗೆ ನಾಣ್ಯವನ್ನು ಕಟ್ಟಿ ಹಗ್ಗ ಮತ್ತು ಮೂಗುದಾರವನ್ನು ತೆರವುಗೊಳಿಸಿ ಎತ್ತನ್ನು ರಂಗೇರಿಸಿದ ಸಂದರ್ಭದಲ್ಲಿ ಎತ್ತಿನ ಕೊಂಬಿನಲ್ಲಿರುವ ನಾಣ್ಯವನ್ನು ಬಿಚ್ಚಿದ ವ್ಯಕ್ತಿಗೆ ಗ್ರಾಮದಿಂದ ವಿಶೇಷ ಬಹುಮಾನ ನೀಡಲಾಯಿತು. ಹುಚ್ಚೆತ್ತು ಬಿಡುವುದು ಕ್ರೀಡೆಯನ್ನು ನೋಡಲು ಸಹಸ್ರರು ಮಂದಿ ಆಗಮಿಸಿ ಯುವಕರನ್ನು ಪ್ರೋತ್ಸಾಹಿಸುವ ಮೂಲಕ ಉತ್ತಮ ಮನರಂಜನೆಯನ್ನು ಪಡೆದರು.

ಶಾಸಕರು ಭೇಟಿ:

ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರು ಉಮಾಮಹೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಬಳಿಕ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಎಲ್ಲಾ ಸಮುದಾಯದವರು ಒಗ್ಗಟ್ಟಿನಿಂದ 9 ವರ್ಷಕೊಮ್ಮೆ ಹಬ್ಬ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಉಮಾ ಮಾಹೇಶ್ವರಿ ತಾಯಿಯೂ ಎಲ್ಲಾರಿಗೂ ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಜೊತೆಗೆ ನಾಡಿಗೆ ಮಳೆಬೆಳೆ ಚೆನ್ನಾಗಿ ಆಗಲೆಂದು ಪ್ರಾರ್ಥೀಸಿಕೊಳ್ಳುವುದಾಗಿ ಹೇಳಿದರು.

ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಚೌಡಪ್ಪ, ಮುಖಂಡರಾದ ದಿಲೀಪ್(ವಿಶ್ವ), ತಳಗವಾದಿ ಗ್ರಾಮದ ಯುವಕರ ವತಿಯಿಂದ 12 ಸೆರಗು ವೇಷಾಧಾರಿ ಹಾಗೂ ಹುಚ್ಚೆತ್ತು ಬಿಡುವುದನ್ನು ನೋಡಲು ಬಂದ ಸಾವಿರಾರು ಮಂದಿಗೆ ಮಜ್ಜಿಗೆ ಪಾನಕ ವಿತರಿಸಿದರು. ವಿವಿದೆಡೆಯಿಂದ ಭಕ್ತರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ದೊಡ್ಡಹಬ್ಬಕ್ಕೆ ಆಗಮಿಸಿದ ಸಂಬಂಧಿಕರಿಗೆ ಅನ್ನಸಂತರ್ಪಣೆ ನಡೆಯಿತು.