ಅಭಿವೃದ್ಧಿ ಕಾಣದ ಸರ್ವಜ್ಞನ ಐಕ್ಯಸ್ಥಳ, ಸ್ಥಳೀಯ ಜನಪ್ರತಿನಿಧಿಗಳ ಆಕ್ರೋಶ

| Published : Mar 11 2025, 12:49 AM IST

ಅಭಿವೃದ್ಧಿ ಕಾಣದ ಸರ್ವಜ್ಞನ ಐಕ್ಯಸ್ಥಳ, ಸ್ಥಳೀಯ ಜನಪ್ರತಿನಿಧಿಗಳ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಮಾಸೂರು ಗ್ರಾಮದಲ್ಲಿರುವ ಸರ್ವಜ್ಞನ ಹುಟ್ಟೂರಿನ ಅಭಿವೃದ್ಧಿ ಯಾರಿಗೂ ಬೇಡವಾದಂತಿರುವುದು ವಿಪರ್ಯಾಸ.

ಸತೀಶ ಸಿ.ಎಸ್.

ರಟ್ಟೀಹಳ್ಳಿ: ವಚನಗಳ ಮೂಲಕ 16ನೇ ಶತಮಾನದಲ್ಲೇ ಸಮಾಜದ ಉದ್ಧಾರಕ್ಕೆ ಶ್ರಮಿಸಿದ ಮಹಾನ್ ದಾರ್ಶನಿಕ, ತ್ರಿಪದಿಗಳ ಬ್ರಹ್ಮ ಸರ್ವಜ್ಞನ ಐಕ್ಯಸ್ಥಳ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಭಿವೃದ್ಧಿ ಕಾಣದೆ ಅನಾಥವಾಗಿದೆ.

ಸರ್ವಜ್ಞ ಜನಿಸಿದ್ದು ತಾಲೂಕಿನ ಅಂಬಲೂರು (ಮಾಸೂರು) ಗ್ರಾಮ ಅವನ ಹೆತ್ತಮ್ಮ ಕುಂಬಾರ ಮಾಳೆ, ಸಾಕು ತಾಯಿ ಮಲ್ಲಮ್ಮ, ತಂದೆ ಬಸವರಸ. ಸರ್ವಜ್ಞ ಅವರು ಸರಳ ಭಾಷೆಯಲ್ಲಿ ರಚಿಸಿದ ನೂರಾರು ವಚನಗಳು (ತ್ರಿಪದಿ) ನಾಡಿನಾದ್ಯಂತ ಜನಜನಿತವಾಗಿವೆ.ತಾಲೂಕಿನ ಮಾಸೂರು ಗ್ರಾಮದಲ್ಲಿರುವ ಸರ್ವಜ್ಞನ ಹುಟ್ಟೂರಿನ ಅಭಿವೃದ್ಧಿ ಯಾರಿಗೂ ಬೇಡವಾದಂತಿರುವುದು ವಿಪರ್ಯಾಸ. ರಾಜಕೀಯ ಘಟಾನುಘಟಿಗಳ ತವರು ಜಿಲ್ಲೆಯಲ್ಲಿರುವ ಸರ್ವಜ್ಞನ ಜನ್ಮಸ್ಥಳ ಅಭಿವೃದ್ಧಿಯಾಗದೆ ಅನಾಥವಾಗಿರುವುದು ಪ್ರಜ್ಞಾವಂತ ಸಮಾಜ ತಲೆತಗ್ಗಿಸುವಂತಿದೆ.

ಹೋರಾಟ ಸಮಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಸರ್ವಜ್ಞನ ಹುಟ್ಟೂರಿನ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಅಹೋರಾತ್ರಿ ಧರಣಿ, ರಸ್ತೆತಡೆ, ಗ್ರಾಮ ಪಂಚಾಯಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾದರೂ ಯಾವೊಬ್ಬ ರಾಜಕಾರಣಿಗಳು ಗಮನಹರಿಸದೆ ನಿರ್ಲಕ್ಷಿಸಿರುವುದು ಜನಪ್ರತಿನಿಧಿಗಳ ಕಾಳಜಿ ತೋರಿಸುತ್ತದೆ. 2012ರಲ್ಲಿ ಸರ್ವಜ್ಞನ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಲಾಯಿತು. 2021ರಲ್ಲಿ ಸರ್ವಜ್ಞ ಜಯಂತಿ ಮಾಡಲು ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಆಗ್ರಹಿಸಿದ್ದರು. ಆ ವರ್ಷದಿಂದ ಸರ್ಕಾರದಿಂದಲೇ ಸರ್ವಜ್ಞನ ಜಯಂತಿ ಆಚರಿಸಲಾಯಿತು. ಅಲ್ಲದೇ ಅದೇ ವರ್ಷ ₹5 ಕೋಟಿ ಹಣವನ್ನು ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೂ ಬಿಡುಗಡೆ ಮಾಡಲಾಗಿತ್ತು. ಅದನ್ನು ಸಮರ್ಪಕ ಬಳಕೆ ಮಾಡದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಯಾವುದೇ ಅಭಿವೃದ್ಧಿಯಾಗಿಲ್ಲ ಎಂಬುದು ಹೋರಾಟಗಾರರ ಅಸಮಾಧಾನವಾಗಿದೆ.

ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ ₹25 ಕೋಟಿ ಹಣ ಬಿಡುಗಡೆ ಮಾಡಿದ್ದರು. ಆದರೆ ತಾಲೂಕಾಡಳಿತ ಮತ್ತು ಜಿಲ್ಲಾಡಳಿತ ಸಮರ್ಪಕ ಕ್ರಿಯಾಯೋಜನೆ ಮಾಡದ ಕಾರಣ ಬಂದಿದ್ದ ಹಣ ವಾಪಸ್‌ ಹೋಗಿತ್ತು.

ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಜ್ಞ ಅಭಿವೃದ್ಧಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ವಿಸ್ತೃತ ವರದಿ ನೀಡಲು ಜಿಲ್ಲಾಧಿಕಾರಿಗೆ ಆದೇಶ ನೀಡಿದರೂ ಜಿಲ್ಲಾಧಿಕಾರಿಯಿಂದ ಸಮರ್ಪಕ ಉತ್ತರ ಸಿಕ್ಕಿಲ್ಲ. ಇತ್ತೀಚೆಗೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಜಿಲ್ಲೆಗೆ ಆಗಮಿಸಿದ್ದ ಉಪ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ ಎಂದು ಹೋರಾಟ ಸಮಿತಿಯ ನಾಗನಗೌಡ ಪಾಟೀಲ್ ಹಾಗೂ ಸುರೇಶ ಬಡಿಗೇರ ತಿಳಿಸಿದ್ದಾರೆ.ಪ್ರಮುಖ ಬೇಡಿಕೆಗಳು: ಸರ್ವಜ್ಞನ ಐಕ್ಯಸ್ಥಳ ಕುಮದ್ವತಿ ನದಿ ದಂಡೆ ಮೇಲಿರುವ ಪರಿಣಾಮ ಪ್ರವಾಹ ಸಂದರ್ಭದಲ್ಲಿ ಕೊಚ್ಚಿ ಹೋಗದಂತೆ ತಡೆಗೋಡೆಯಾಗಬೇಕು. ಪ್ರವಾಸಿಗರ ಅನುಕೂಲಕ್ಕಾಗಿ ಮಾರ್ಗಸೂಚಿ ಫಲಕಗಳ ನಿರ್ಮಾಣ ಮಾಡಬೇಕು. ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ವಚನಗಳನ್ನು ಬಹುಭಾಷೆಗಳಿಗೆ ಭಾಷಾಂತರವಾಗಬೇಕು. ಮೂಲ ಸೌಲಭ್ಯಗಳು ಆಗಬೇಕು. ಸರ್ವಜ್ಞರ ತಂದೆ ಆರಾಧಿಸುವ ಕಾಶಿ ವಿಶ್ವನಾಥನ ದೇವಸ್ಥಾನ ಅಭಿವೃದ್ಧಿಯಾಗಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ. ಅಲ್ಲದೆ ಕವಿ ಪರಿಚಯಕ್ಕಾಗಿ ಒಂದು ಸಣ್ಣ ಮಾಹಿತಿ ಕೂಡ ಗ್ರಾಮದಲ್ಲಿ ಇಲ್ಲ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಇಚ್ಛಾಶಕ್ತಿಯ ಕೊರತೆ: ಸರ್ವಜ್ಞ ವಚನ ಸಾಹಿತ್ಯದ ಮೂಲಕ 16ನೇ ಶತಮಾನದಲ್ಲಿ ಜಗತ್ತಿನ ಅಂಧಕಾರ ಹೋಗಲಾಡಿಸಲು ಶ್ರಮಿಸಿದ ಮಹಾನ್ ವ್ಯಕ್ತಿಯನ್ನು ಪ್ರಸ್ತುತ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸರ್ವಜ್ಞ ಪ್ರಾಧಿಕಾರ ಅಭಿವೃದ್ಧಿಯಾದೇ ಮೂಲೆಗುಂಪಾಗಿರುವುದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಸರ್ವಜ್ಞ ಪ್ರಾಧಿಕಾರ ಹೋರಾಟ ಸಮಿತಿ ಸದಸ್ಯ ಮಲ್ಲೇಶಪ್ಪ ಗುತ್ತೆಣ್ಣನವರ ತಿಳಿಸಿದರು.

ಅಭಿವೃದ್ಧಿಯಾಗಬೇಕು: ಪ್ರಸ್ತುತ ರಾಜಕಾರಣ ಏನೇ ಇರಲಿ, ನಮ್ಮ ಗ್ರಾಮದವರೆ ಆದ ಸರ್ವಜ್ಞರ ಮಾಸೂರು ಅಭಿವೃದ್ಧಿಯಾಗಬೇಕು ಹಾಗೂ ಬಸವಣ್ಣನವರ ಐಕ್ಯಮಂಟಪದ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಮಾಸೂರು ಗ್ರಾಪಂ ಅಧ್ಯಕ್ಷೆ ಪ್ರಮೀಳಾ ನಡುವಿನಮನಿ ತಿಳಿಸಿದರು.