ಕೇಂದ್ರ ಬಜೆಟ್‌ ರಾಜ್ಯಕ್ಕೆ ನಿರಾಶೆ ತಂದಿದೆ: ಕಾಂಗ್ರೆಸ್‌ ನಾಯಕರು

| Published : Feb 02 2025, 01:01 AM IST

ಕೇಂದ್ರ ಬಜೆಟ್‌ ರಾಜ್ಯಕ್ಕೆ ನಿರಾಶೆ ತಂದಿದೆ: ಕಾಂಗ್ರೆಸ್‌ ನಾಯಕರು
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿದ 2025- 2026ನೇ ಸಾಲಿನ ಬಜೆಟ್ ರಾಜ್ಯ ಮತ್ತು ದೇಶದ ದೃಷ್ಟಿಯಿಂದ ಬಹಳ ನಿರಾಶಾದಾಯಕ ಬಜೆಟ್ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ ಟೀಕಿಸಿದ್ದಾರೆ.

ದಾವಣಗೆರೆ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿದ 2025- 2026ನೇ ಸಾಲಿನ ಬಜೆಟ್ ರಾಜ್ಯ ಮತ್ತು ದೇಶದ ದೃಷ್ಟಿಯಿಂದ ಬಹಳ ನಿರಾಶಾದಾಯಕ ಬಜೆಟ್ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ ಟೀಕಿಸಿದ್ದಾರೆ.

ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಚೊಂಬು ಕೊಡುವುದನ್ನು ಈ ಸಲವೂ ಮುಂದುವರೆಸಿದೆ. ಕರ್ನಾಟಕದ ದೃಷ್ಟಿಯಿಂದ ಇದೊಂದು ನಿರಾಶದಾಯಕ ಮತ್ತು ದೂರದೃಷ್ಟಿ ಇಲ್ಲದ ಬಜೆಟ್ ಆಗಿದ್ದು, ಕೇಂದ್ರ ಬಜೆಟ್ ಆಗಿರದೇ ಇದು ಕೇವಲ ಬಿಹಾರಿ ಬಜೆಟ್ ಆಗಿದೆ ಎಂದು ಅವರು ಹೇಳಿದ್ದಾರೆ.ಬಜೆಟ್ ಗಾತ್ರವೂ ಕಡಿಮೆಯಾಗಿದೆ. ಕಳೆದ ಬಾರಿಗಿಂತ 1.04 ಲಕ್ಷ ಕೋಟಿ ಕಡಿಮೆಯಾಗಿದೆ. ತೆರಿಗೆ ಅಂದುಕೊಂಡಷ್ಟು ಸಂಗ್ರಹಿಸಿಲ್ಲ. ಕೇಂದ್ರವು 15,68,936 ಕೋಟಿ ಸಾಲ ಪಡೆಯುತ್ತಿದೆ. 12,70,000 ಕೋಟಿ ಬಡ್ಡಿ ಕಟ್ಟುತ್ತಿದೆ. ದೇಶದ ಸಾಲದ ಪ್ರಮಾಣ 202 ಲಕ್ಷ ಕೋಟಿಯಿಂದ 205 ಲಕ್ಷ ಕೋಟಿಗೆ ಏರುತ್ತಿದೆ. ಈ ಬಜೆಟ್ ನಿರಾಶದಾಯಕ ಬಜೆಟ್ ಆಗಿದೆ ಎಂದು ಅವರು ಹೇಳಿದ್ದಾರೆ.ಕರ್ನಾಟಕ ಹೆಚ್ಚು ತೆರಿಗೆ ಕಟ್ಟುತ್ತಿರುವ ರಾಜ್ಯಗಳಲ್ಲಿ 2ನೇ ಸ್ಥಾನದಲ್ಲಿದೆ. ರಾಜಕೀಯ ಕಾರಣಕ್ಕೆ ಬಿಹಾರ, ಆಂಧ್ರಕ್ಕೆ ಹೆಚ್ಚು ಅನುದಾನ ಸಿಕ್ಕಿದೆ. ಕರ್ನಾಟಕದ ಮೇಕೆದಾಟು, ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆ ಯಾವುದಕ್ಕೂ ಹಣ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆಗೆ 5,300 ಕೋಟಿ ಕೊಡುತ್ತೇವೆಂದು 2 ವರ್ಷ ಹಿಂದೆಯೇ ಘೋಷಿಸಿದ್ದರು. ಈವರೆಗೆ ಒಂದೂ ನಯಾಪೈಸೆಯನ್ನೂ ಯಾಕೆ ಕೊಟ್ಟಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ರಾಜಸ್ಥಾನ ಬಿಟ್ಟರೆ ಕರ್ನಾಟಕ ಹೆಚ್ಚು ಒಣ ಭೂಮಿ ಇರುವ ರಾಜ್ಯ. ಈ ರಾಜ್ಯಕ್ಕೆ ನೀರಾವರಿ ಯೋಜನೆಗಳಿಗೆ ಒಂದು ರುಪಾಯಿ ಸಹ ಕೊಟ್ಟಿಲ್ಲ. ರಾಯಚೂರಿಗೆ ಏಮ್ಸ್ ಘೋಷಣೆ ಮಾಡುತ್ತಾರೆಂಬ ನಿರೀಕ್ಷೆಯೂ ಹುಸಿಯಾಗಿದೆ. ಕೇಂದ್ರ ಸಚಿವ ಜೆ.ಪಿ.ನಡ್ಡಾ ಸ್ವತಃ ಈ ಬಗ್ಗೆ ಭರವಸೆ ಕೊಟ್ಟಿದ್ದರು. ಆದರೆ, ಬಜೆಟ್‌ನಲ್ಲಿ ಅದರ ಪ್ರಸ್ತಾಪವೂ ಇಲ್ಲ ಎಂದು ಕೇಂದ್ರ ಬಜೆಟ್ ಬಗ್ಗೆ ಬೇಸರ ಹೊರಹಾಕಿದ್ದಾರೆ.