ಪ್ರಕೃತಿ ಮುನಿದು ಬರದ ಛಾಯೆ ಆವರಿಸಿದಾಗ ಹಳ್ಳಿಗಾಡಿನ ಜನತೆ ಸಂಕಷ್ಟಕ್ಕೀಡಾಗುವುದು ಸಹಜ. ಆದರೆ ಇಂತಹ ಕಷ್ಟದ ಕಾಲದಲ್ಲೂ ಸರ್ಕಾರದ ಸಕಾಲಿಕ ಯೋಜನೆಗಳು ಮತ್ತು ಸ್ಥಳೀಯರ ಜನಪರ ಕಾಳಜಿ ಒಂದಾದರೆ ಬದುಕು ಹೇಗೆ ಹಸನಾಗುತ್ತದೆ ಎಂಬುದಕ್ಕೆ ತಾಲೂಕಿನ ಅಡರಕಟ್ಟಿ ಗ್ರಾಪಂ ವ್ಯಾಪ್ತಿಯ ಕೊಂಡಿಕೊಪ್ಪ ಗ್ರಾಮವು ಜೀವಂತ ಉದಾಹರಣೆಯಾಗಿದೆ.
ಗುಳೆ ಹೋಗಬೇಕಿದ್ದ ಅನಿವಾರ್ಯತೆ ತಪ್ಪಿಸಿದ ಸರ್ಕಾರ । ಸ್ವಗ್ರಾಮದಲ್ಲೇ ಕೈತುಂಬಾ ಕೂಲಿ
ಅಶೋಕ ಡಿ. ಸೊರಟೂರ
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರಪ್ರಕೃತಿ ಮುನಿದು ಬರದ ಛಾಯೆ ಆವರಿಸಿದಾಗ ಹಳ್ಳಿಗಾಡಿನ ಜನತೆ ಸಂಕಷ್ಟಕ್ಕೀಡಾಗುವುದು ಸಹಜ. ಆದರೆ ಇಂತಹ ಕಷ್ಟದ ಕಾಲದಲ್ಲೂ ಸರ್ಕಾರದ ಸಕಾಲಿಕ ಯೋಜನೆಗಳು ಮತ್ತು ಸ್ಥಳೀಯರ ಜನಪರ ಕಾಳಜಿ ಒಂದಾದರೆ ಬದುಕು ಹೇಗೆ ಹಸನಾಗುತ್ತದೆ ಎಂಬುದಕ್ಕೆ ತಾಲೂಕಿನ ಅಡರಕಟ್ಟಿ ಗ್ರಾಪಂ ವ್ಯಾಪ್ತಿಯ ಕೊಂಡಿಕೊಪ್ಪ ಗ್ರಾಮವು ಜೀವಂತ ಉದಾಹರಣೆಯಾಗಿದೆ.
ವಿಬಿಜಿ-ರಾಮ್ಜಿ ಯೋಜನೆಯು ಇಲ್ಲಿನ ಬಡ ಜನರಿಗೆ ನಿಜಕ್ಕೂ ದೊಡ್ಡ ವರದಾನವಾಗಿದೆ. ಇದರ ಸದುಪಯೋಗ ಪಡೆದುಕೊಂಡಿರುವ ಗ್ರಾಮಸ್ಥರು ಮಾದರಿ ಹೆಜ್ಜೆ ಇಟ್ಟಿದ್ದಾರೆ. ಮಳೆ ಇಲ್ಲದೆ ಕೃಷಿ ಚಟುವಟಿಕೆಗಳು ಸ್ತಬ್ಧಗೊಂಡು, ಕೂಲಿ ಅರಸಿ ಪಟ್ಟಣ, ಗೋವಾ, ಮಂಗಳೂರು, ಬೆಂಗಳೂರು, ಮಹಾರಾಷ್ಟ್ರ ಹಾಗೂ ಕೇರಳ ಕಡೆಗೆ ಗುಳೆ ಹೋಗಬೇಕಿದ್ದ ಅನಿವಾರ್ಯತೆಯನ್ನು ವಿಬಿಜಿ-ರಾಮ್ಜಿ ಯೋಜನೆಯು ತಪ್ಪಿಸಿದೆ ಎಂದರೆ ತಪ್ಪಾಗಲಾರದು. ಗ್ರಾಮದ ಹಿರಿಯರು, ಮಹಿಳೆಯರು ಮತ್ತು ಯುವಕರು ಒಟ್ಟಾಗಿ ಕೈಯಲ್ಲಿ ಗುದ್ದಲಿ, ಹಾರೆ-ಪಿಕಾಸಿ ಹಾಗೂ ಬುಟ್ಟಿ ಹಿಡಿದು ತಮ್ಮೂರಿನ ಐತಿಹಾಸಿಕ ''''''''ಕಲಬೆಂಚ್ಚಿ ಕೆರೆ''''''''ಯನ್ನು ಅಂಗಳಕ್ಕಿಳಿದು ಹೂಳೆತ್ತುವ ಮೂಲಕ ಅಭಿವೃದ್ಧಿಪಡಿಸುತ್ತಿದ್ದಾರೆ. ಇದರಿಂದ ಬಡ ಕಾರ್ಮಿಕರಿಗೆ ಸ್ವಗ್ರಾಮದಲ್ಲೇ ಕೈತುಂಬಾ ಕೂಲಿ ಸಿಕ್ಕಂತಾಗಿದ್ದು, ಅವರ ಆರ್ಥಿಕ ಸಂಕಷ್ಟಕ್ಕೆ ದೊಡ್ಡ ಮಟ್ಟದ ಭರವಸೆ ಸಿಕ್ಕಿದೆ.ಜನಪರ ಕಾಳಜಿ:
ಕೇವಲ ಸರ್ಕಾರಿ ಕೆಲಸಕ್ಕೆ ಸೀಮಿತವಾಗದೆ, ಕೊಂಡಿಕೊಪ್ಪದ ಜನತೆ ತಮ್ಮ ಸ್ವಂತ ಜವಾಬ್ದಾರಿಯಂತೆ ಕೆರೆ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆರೆಯ ಅಲ್ಲಲ್ಲಿ ಗುಂಡಿಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿದ್ದ ಕಲುಷಿತ ನೀರನ್ನು ಪ್ರತ್ಯೇಕ ಬೆರೆಗುಂಡಿಗಳಿಗೆ ಯಾವುದೇ ಮೋಟರ್ ಇಲ್ಲದೆ ಕೈಗಳಿಂದ ಬುಟ್ಟಿಗಳಲ್ಲಿ ತುಂಬಿ ನೀರನ್ನು ಹರಿಯಬಿಡುವ ವ್ಯವಸ್ಥೆ ಮಾಡಿದ್ದಾರೆ. ಇದರೊಂದಿಗೆ, ಸಂಪೂರ್ಣವಾಗಿ ಹೂಳೆತ್ತಿ ಸ್ವಚ್ಛಗೊಳಿಸಿರುವ ಕೆರೆ ಕಟ್ಟೆಗಳಿಗೆ ಮಳೆನೀರು, ಇತರೆ ಜಲಮೂಲಗಳು ಅಥವಾ ತುರ್ತಾಗಿ ನೀರಿನ ಟ್ಯಾಂಕ್ಗಳ ಮುಖಾಂತರ ನೀರನ್ನು ತಂದು ತುಂಬಿಸಲು ಗ್ರಾಮಸ್ಥರು ದೃಢ ನಿರ್ಧಾರ ಕೈಗೊಂಡಿದ್ದಾರೆ ಎಂಬುದು ಅಚ್ಚರಿಯ ಸಂಗತಿಯಾಗಿದೆ.ಮೂಕ ಜೀವಿಗಳ ರಕ್ಷಣೆ:
ತೀವ್ರ ಬರಗಾಲದ ಈ ದಿನಗಳಲ್ಲಿ ಕೇವಲ ಮನುಷ್ಯರಷ್ಟೇ ಅಲ್ಲದೆ, ದನಕರುಗಳು, ಆಡು-ಕುರಿಗಳು ಹಾಗೂ ಸುತ್ತಮುತ್ತಲಿನ ಪ್ರಾಣಿ-ಪಕ್ಷಿಗಳು ಕುಡಿಯುವ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಅರಿತು ಕೆರೆಯನ್ನು ಸ್ವಚ್ಛಗೊಳಿಸುವುದರ ಜೊತೆಗೆ ಪ್ರಾಣಿ-ಪಕ್ಷಿಗಳಿಗೆ ನೀರಿನ ಅನುಕೂಲ ಕಲ್ಪಿಸುವ ವಿನೂತನ ಹಾಗೂ ಮಾನವೀಯ ಕಾರ್ಯಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.ಸರ್ಕಾರದ ಯೋಜನೆಗಳು ಸರಿಯಾದ ರೀತಿಯಲ್ಲಿ ಜಾರಿಗೆ ಬಂದರೆ ಬಡ ಜನರಿಗೆ ಹೇಗೆ ಆಸರೆಯಾಗಬಹುದು ಮತ್ತು ಸ್ಥಳೀಯರ ಸ್ವಯಂಪ್ರೇರಿತ ಕಾಳಜಿ ಸೇರಿಕೊಂಡರೆ ವ್ಯವಸ್ಥೆ ಹೇಗೆ ಬದಲಾಗಬಹುದು ಎಂಬುದಕ್ಕೆ ಕೊಂಡಿಕೊಪ್ಪ ಗ್ರಾಮದ ಈ ಯಶೋಗಾಥೆ ರಾಜ್ಯದ ಇತರೆ ಬರಪೀಡಿತ ಪ್ರದೇಶಗಳಿಗೂ ಮಾದರಿಯಾಗಬೇಕಿದೆ.ಬರಗಾಲದ ಈ ಕಾಲದಲ್ಲಿ ಸರ್ಕಾರದ ವಿಬಿಜಿ-ರಾಮ್ಜಿ ಯೋಜನೆಯಿಂದ ನಮ್ಮ ಜನರಿಗೆ ಊರಲ್ಲೇ ಕೂಲಿ ಸಿಕ್ಕಿರುವುದು ದೊಡ್ಡ ವರದಾನವಾಗಿದೆ. ಇದರ ಜೊತೆಗೆ ನಾವೆಲ್ಲರೂ ಸೇರಿ ಕೆರೆಯನ್ನು ಸ್ವಚ್ಛಗೊಳಿಸಿ, ಟ್ಯಾಂಕ್ ಅಥವಾ ಇತರೆ ಮೂಲಗಳಿಂದ ನೀರು ತುಂಬಿಸಿ ನಮ್ಮ ದನಕರುಗಳಿಗೆ ಹಾಗೂ ಮೂಕ ಪ್ರಾಣಿ-ಪಕ್ಷಿಗಳಿಗೆ ನೀರಿನ ಅನುಕೂಲ ಕಲ್ಪಿಸುವ ಒಳ್ಳೆಯ ಕೆಲಸಕ್ಕೆ ಮುಂದಾಗಿದ್ದೇವೆ ಗ್ರಾಮಸ್ಥ ಮಂಜು ಲಮಾಣಿ.ಬರಗಾಲದ ಹಿನ್ನೆಲೆ ಗ್ರಾಮೀಣ ಜನತೆಗೆ ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ತಾಲೂಕಿನಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ಗ್ರಾಪಂಗೆ ಹೋಗಿ ಕೆಲಸ ಕೇಳಿ ಪಡೆದುಕೊಳ್ಳುವ ವಿನೂತ ವ್ಯವಸ್ಥೆ ಜಾರಿಗೆ ತರಲಾಗಿದ್ದು. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುತ್ತಾರೆ ಲಕ್ಷ್ಮೇಶ್ವರ ತಾಪಂ ಸಹಾಯಕ ನಿರ್ದೇಶಕ ಕೃಷ್ಣಪ್ಪ ಧರ್ಮರ.