ವೇದ, ಉಪನಿಷತ್ತು, ಜ್ಯೋತಿಷ್ಯ, ಸಂಸ್ಕೃತ ಇವುಗಳ ಪರಿಪೂರ್ಣ ಅಧ್ಯಯನ ಮಾಡಿದವನಿಗೆ ಸಮಾಜದಲ್ಲಿ ಸದಾ ಶ್ರೇಷ್ಠರೆನಿಸಿಕೊಳ್ಳುತ್ತಾರೆ.
ಶಾರದಾಂಬಾ ಪಾಠಶಾಲೆಯಲ್ಲಿ ವಸಂತ ವೇದ ಸಂಸ್ಕೃತ ಯೋಗ ಶಿಬಿರಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಯಲ್ಲಾಪುರವೈದಿಕ ಪರಂಪರೆಗೆ ಬಹುದೊಡ್ಡ ಇತಿಹಾಸವಿದೆ. ವೇದ, ಉಪನಿಷತ್ತು, ಜ್ಯೋತಿಷ್ಯ, ಸಂಸ್ಕೃತ ಇವುಗಳ ಪರಿಪೂರ್ಣ ಅಧ್ಯಯನ ಮಾಡಿದವನಿಗೆ ಸಮಾಜದಲ್ಲಿ ಸದಾ ಶ್ರೇಷ್ಠರೆನಿಸಿಕೊಳ್ಳುತ್ತಾರೆ. ಅಲ್ಲದೇ ಒಬ್ಬ ಐಎಎಸ್ ಅಧಿಕಾರಿಗಿಂತಲೂ ಗೌರವ ಪಡೆಯುತ್ತಾನೆ. ಅಂತಹ ಸನಾತನ ಧರ್ಮದಲ್ಲಿ ನಾವು ಬಂದಿದ್ದೇವೆ. ಅದನ್ನು ಉಳಿಸಿಕೊಂಡು ಹೋಗುವಲ್ಲಿ ಇಂದಿನ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಮಂಗಳವಾರ ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ವೇದ, ಸಂಸ್ಕೃತ ಪಾಠಶಾಲಾ ಸಭಾಭವನದಲ್ಲಿ ವಸಂತ ವೇದ ಸಂಸ್ಕೃತ ಯೋಗ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸ್ವರ್ಣವಲ್ಲಿ ಶ್ರೀಗಳು ಇಡೀ ಜಿಲ್ಲೆಯಲ್ಲೇ ಸನಾತನ ಧರ್ಮ, ವೇದ ಇವುಗಳ ಏಳಿಗೆಗಾಗಿ ಸದಾ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಎಲ್ಲೆಡೆ ಇಂತಹ ಶಿಬಿರಗಳು ನಡೆಯುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ನಮ್ಮ ಪರಂಪರೆಯನ್ನು ಉಳಿಸುವ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಪಾಲಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಅದರಲ್ಲೂ ನಮ್ಮ ತಾಲೂಕಿನವರೇ ಆದ ಆನಂದಬೋಧೇಂದ್ರ ಸರಸ್ವತೀ ಶ್ರೀಗಳ ವರ್ಧಂತಿ ಉತ್ಸವ ಕೂಡ ಆಚರಿಸಲಾಗುತ್ತಿದೆ. ಅಂತಹ ಸುಸಂದರ್ಭದಲ್ಲಿ ಈ ಶಿಬಿರವನ್ನು ಪ್ರಾರಂಭಿಸುತ್ತಿರುವುದು ಸಂತಸ ಎಂದರು.ಡಾ. ವೆಂಕಟ್ರಮಣ ಭಟ್ಟ ಹಲಸ್ಖಂಡ ಶಿಬಿರಕ್ಕೆ ಚಾಲನೆ ನೀಡಿದರು.ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಮೇಶ ಭಾಗ್ವತ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ತಾಲೂಕಾ ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ, ಯಲ್ಲಾಪುರ ಸೀಮಾ ಅಧ್ಯಕ್ಷ ಎನ್.ಎಂ. ಹೆಗಡೆ ಪಣತಗೇರಿ ಮಾತನಾಡಿದರು. ಶಾರದಾಂಬಾ ದೇವಸ್ಥಾನದ ಕಾರ್ಯಾಧ್ಯಕ್ಷ ಜಗದೀಶ ದೀಕ್ಷಿತ, ಸಹಕಾರ್ಯದರ್ಶಿ ನರಸಿಂಹ ಗೇರಗದ್ದೆ, ನಿರ್ದೇಶಕರಾದ ಶಂಕರ ಭಟ್ಟ ತಾರೀಮಕ್ಕಿ, ನಾಗೇಂದ್ರ ಕವಾಳೆ ಮತ್ತಿತರರಿದ್ದರು. ವಿದ್ಯಾರ್ಥಿಗಳು ವೇದಘೋಷ ಪಠಿಸಿದರು. ಮುಖ್ಯಾಧ್ಯಾಪಕ ಡಾ. ಶಿವರಾಮ ಭಾಗ್ವತ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿ ಕಾರ್ತಿಕೇಯ ಭಟ್ಟ ನಿರ್ವಹಿಸಿದರು. ಅಧ್ಯಾಪಕ ಡಾ. ನರಸಿಂಹ ಭಟ್ಟ ವಂದಿಸಿದರು.