ಹೊಸಕೋಟೆ: ಸಮಾಜದ ಉನ್ನತಿಗೆ ತತ್ವ ಪದಗಳು, ಕೀರ್ತನೆಗಳ ಮೂಲಕ ಶ್ರಮಿಸಿದ ಹಲವಾರು ಸಾಧು-ಸಂತರು, ದಾರ್ಶನಿಕರು, ಯೋಗಿಗಳ ಪೈಕಿ ಮಹಾಯೋಗಿ ವೇಮನರು ಕೂಡ ಮುಂಚೂಣಿಯಲ್ಲಿ ನಿಲ್ಲುವಂತಹವರು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಹೊಸಕೋಟೆ: ಸಮಾಜದ ಉನ್ನತಿಗೆ ತತ್ವ ಪದಗಳು, ಕೀರ್ತನೆಗಳ ಮೂಲಕ ಶ್ರಮಿಸಿದ ಹಲವಾರು ಸಾಧು-ಸಂತರು, ದಾರ್ಶನಿಕರು, ಯೋಗಿಗಳ ಪೈಕಿ ಮಹಾಯೋಗಿ ವೇಮನರು ಕೂಡ ಮುಂಚೂಣಿಯಲ್ಲಿ ನಿಲ್ಲುವಂತಹವರು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ರೆಡ್ಡಿ ಜನಸಂಘ ಆಯೋಜಿಸಿದ್ದ ಮಹಾಯೋಗಿ ವೇಮನ ಅವರ 614ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣ, ಕನಕದಾಸರು, ಪುರಂದರದಾಸರಂತಹ ಹಲ ಮಹನೀಯರು ಸರಳವಾದ ಕೀರ್ತನೆಗಳು, ತತ್ವಪದಗಳ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಮೂಲಕ ಸಮಾಜವನ್ನು ಸರಿದಾರಿಗೆ ತರುವ ಕೆಲಸ ಮಾಡಿದ್ದರು. ಅವರ ಸಮಕಾಲೀನರಾಗಿದ್ದ ವೇಮನರೂ ಕೂಡ ಮುಖ್ಯವಾಗಿ ಆಳವಾಗಿ ಬೇರೂರಿದ್ದ ಜಾತಿಪದ್ದತಿಯ ಸಂಕೋಲೆಯನ್ನು ಬಿಡಿಸಿ ಸಾಮಾಜಿಕ ಸುಧಾರಣೆಯಿಂದ ಸರ್ವ ಸಮಾನತೆಗಾಗಿ ಸರಳ ಪದ್ಯಗಳ ಮೂಲಕ ಸಮಾಜ ಸುಧಾರಣೆಯ ಸಾರವನ್ನು ಉಣಬಡಿಸಿದವರ ಎಂದು ಹೇಳಿದರು. ಮನುಷ್ಯ ಜನ್ಮದಲ್ಲಿ ಹುಟ್ಟಿರುವ ನಾವು ವೇಮನರ ಸರಳ ಪದ್ಯಗಳನ್ನು ಓದಿ ಅರ್ಥೈಸಿಕೊಂಡು ಅವರ ಹಾದಿಯಲ್ಲಿ ಸಾಗಬೇಕು. ಕಾಂಗ್ರೆಸ್‌ ಸರ್ಕಾರ ಕೂಡ ವೇಮನರ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಣೆ ಮಾಡುವಂತೆ ಮಾಡಿದೆ. ರಾಜ್ಯದಲ್ಲಿ ಪ್ರತಿ ವರ್ಷ ಆಚರಣೆ ಮಾಡುವ 40ಕ್ಕೂ ಹೆಚ್ಚಿನ ಮಹನೀಯರ ಜಯಂತಿಗಳಲ್ಲಿ 25ಕ್ಕೂ ಹೆಚ್ಚಿನ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಣೆ ಮಾಡುವಂತೆ ಮಾಡಿದ ಕೀರ್ತಿ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ತಾಲೂಕಿನಲ್ಲಿ ರೆಡ್ಡಿ ಸಮುದಾಯ ಅನುಗೊಂಡನಹಳ್ಳಿ ಹೋಬಳಿಯ ಭಾಗದಲ್ಲಿ ಹೆಚ್ಚಾಗಿದ್ದು ಭವನ ನಿರ್ಮಾಣಕ್ಕೆ ಜಾಗ ಒದಗಿಕೊಡಲು ಮನವಿ ಸಲ್ಲಿಸಿದ್ದಾರೆ. ಅನುಗೊಂಡನಹಳ್ಳಿ ಹೋಬಳಿ ವ್ಯಾಪ್ತಿಯ ಸೂಕ್ತ ಜಾಗದಲ್ಲಿ ಗುರುತಿಸಿದರೆ ಕನಿಷ್ಠ 20 ಗುಂಟೆ ಜಾಗ ಕೊಡುತ್ತೇನೆ. ವೇಮನ ಪ್ರತಿಮೆ ನಿರ್ಮಾಣಕ್ಕೂ ನಗರದಲ್ಲಿ ಸೂಕ್ತ ಜಾಗ ಗುರುತಿಸಿ ಪ್ರತಿಮೆ ಸ್ಥಾಪನೆ ಮಾಡಲಾಗುವುದು. ಮಹಾಯೋಗಿ ವೇಮನ ಅವರು ಸಮ ಸಮಾಜ ನಿರ್ಮಾಣದ ಕಲ್ಪನೆ ಹೊಂದಿದವರು. ಅವರ ಆಶಯ ಈಡೇರಿಸುವ ಕೆಲಸ ಎಲ್ಲರಿಂದ ಆಗಬೇಕು. ತಾಲೂಕಿನಲ್ಲಿ ಸಹಕಾರ ಕ್ಷೇತ್ರ, ರಾಜಕೀಯ ಕ್ಷೇತ್ರದಲ್ಲೂ ಬಿ.ಎನ್.ಬಚ್ಚೇಗೌಡರ ಕಾಲದಿಂದ ರೆಡ್ಡಿ ಸಮುದಾಯಕ್ಕೆ ಸೂಕ್ತ ಅವಕಾಶ ಕೊಟ್ಟು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.

ರಾಜ್ಯ ರೆಡ್ಡಿ ಜನಸಂಘದ ನಿರ್ದೇಶಕ ಎಂಎ.ಕೃಷ್ಣಾರೆಡ್ಡಿ ಮಾತನಾಡಿ, ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಹುಟ್ಟೂರು ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿ ಗ್ರಾಮದ ಅಭಿವೃದ್ಧಿ, ವಿಧಾನ ಸೌಧದ ಮುಂದೆ ಕೆ.ಸಿ.ರೆಡ್ಡಿ ಅವರ ಪ್ರತಿಮೆ ಸ್ಥಾಪನೆ, ವೇಮನ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಅನುದಾನ ಸೇರಿದಂತೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ದಿಗೆ ಸುಮಾರು 10ಕ್ಕೂ ಹೆಚ್ಚಿನ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೆವು. ಸರ್ಕಾರ ಕೂಡ ಸ್ಪಂದಿಸಿ ಸಾಕಷ್ಟು ಬೇಡಿಕೆ ಈಡೇರಿಸಿದೆ. ಮುಂದಿನ ದಿನಗಳಲ್ಲಿ ರೆಡ್ಡಿ ಸಮುದಾಯ ತಾಲೂಕಿನಲ್ಲಿ ಸಂಘಟಿತರಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ರೆಡ್ಡಿ ಜನಸಂಘದ ಪ್ರಧಾನ ಕಾರ್ಯದರ್ಶಿ ಶೇಖರ್‌ರೆಡ್ಡಿ, ವೇಮನ ಜಯಂತಿ ಸಮಿತಿ ಸದಸ್ಯರಾದ ಎಂ.ಬಾಬುರೆಡ್ಡಿ, ಎಚ್‌.ಜಿ.ಪ್ರಕಾಶ್‌ರೆಡ್ಡಿ, ಕೇಶವರೆಡ್ಡಿ, ಆಂಜಿನಪ್ಪರೆಡ್ಡಿ, ಅಶೋಕ್‌ರೆಡ್ಡಿ, ಲತಾರೆಡ್ಡಿ, ನಾಗರಾಜರೆಡ್ಡಿ, ವಿಜಯೇಂದ್ರಬಾಬುರೆಡ್ಡಿ, ಎಚ್.ಕೆ.ಮುರಳಿ, ಶಂಕರರೆಡ್ಡಿ, ರಮೇಶರೆಡ್ಡಿ, ನಿರ್ದೆಶಕ ಎಂ.ಎ.ಕೃಷ್ಣಾರೆಡ್ಡಿ, ತಹಸೀಲ್ದಾರ್ ಸೋಮಶೇಖರ್, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ, ಡಿವೈಎಸ್ಪಿ ಮಲ್ಲೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಇತರರು ಹಾಜರಿದ್ದರು.

ಫೋಟೋ: 19 ಹೆಚ್‌ಎಸ್‌ಕೆ 2 ಮತ್ತು 3

2: ಹೊಸಕೋಟೆಯಲ್ಲಿ ತಾಲೂಕು ರೆಡ್ಡಿ ಜನಸಂಘ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.