ಲಿಂಗೈಕ್ಯ ತೋಂಟದ ಶ್ರೀಗಳು, ಡಾ. ಎಂ.ಎಂ. ಕಲಬುರ್ಗಿ ನಾಡಿನ ಆಸ್ತಿ

| Published : Oct 04 2025, 01:00 AM IST

ಸಾರಾಂಶ

ತೋಂಟದಾರ್ಯ ಮಠದಲ್ಲಿ ಲಿಂಗಾಯತ ಅಧ್ಯಯನ ಸಂಸ್ಥೆ ಆರಂಭವಾಗಲು ಕಲಬುರ್ಗಿ ಅವರೇ ಕಾರಣವಾಗಿದ್ದರು. ಆ ಸಂಸ್ಥೆ 500ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ಗದಗ: ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳು ಮತ್ತು ಡಾ. ಎಂ.ಎಂ. ಕಲಬುರ್ಗಿ ಇಬ್ಬರೂ ನಮ್ಮ ನಾಡಿನ ಬಹುದೊಡ್ಡ ಆಸ್ತಿಯಾಗಿದ್ದರು. ಅವರ ಸಂಬಂಧವೂ ಒಡಲೆರಡು, ಜೀವ ಒಂದೇ ಎನ್ನುವ ರೀತಿಯಲ್ಲಿತ್ತು ಎಂದು ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರ ತಿಳಿಸಿದರು.

ಶುಕ್ರವಾರ ನಗರದ ತೋಂಟದಾರ್ಯ ಮಠದ ಆವರಣದಲ್ಲಿನ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಶಿವಾನುಭವ ಮಂಟಪದಲ್ಲಿ ಲಿಂ. ಸಿದ್ಧಲಿಂಗ ಶ್ರೀಗಳ 7ನೇ ಪುಣ್ಯಸ್ಮರಣೆ, ಮರಣವೇ ಮಹಾನವಮಿ ಆಚರಣೆ ಹಾಗೂ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ- 2025 ಸಮಾರಂಭದಲ್ಲಿ ಅವರು ಮಾತನಾಡಿದರು.

ತೋಂಟದಾರ್ಯ ಮಠದಲ್ಲಿ ಲಿಂಗಾಯತ ಅಧ್ಯಯನ ಸಂಸ್ಥೆ ಆರಂಭವಾಗಲು ಕಲಬುರ್ಗಿ ಅವರೇ ಕಾರಣವಾಗಿದ್ದರು. ಆ ಸಂಸ್ಥೆ 500ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಒಂದು ವಿಶ್ವವಿದ್ಯಾಲಯದ ಪ್ರಸಾರಂಗ ಮಾಡುವ ಕೆಲಸಕ್ಕಿಂತಲೂ ಹೆಚ್ಚಿನ ಕೆಲಸ ಮಾಡಿದ್ದು, ನಾಡಿನ ಸಾರಸ್ವತ ಲೋಕಕ್ಕೆ ಅಮೂಲ್ಯ ಕೃತಿಗಳನ್ನು ಕೊಡುಗೆಯಾಗಿ ಕೊಟ್ಟಿದೆ ಎಂದರು.

ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿದ್ದರೂ ಅವರು ಮಾತ್ರ ಯಾವುದಕ್ಕೂ ಬೀಗಲಿಲ್ಲ. ಬಂದ ಪ್ರಶಸ್ತಿಯನ್ನು ಗೌರವದಿಂದ ಸ್ವೀಕರಿಸಿ, ಪ್ರಶಸ್ತಿಯ ಮೊತ್ತವನ್ನು ಸಮಾಜಕ್ಕೆ ಅರ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕಲಬುರ್ಗಿ ಅವರಿಗೆ ಸಾಹಿತ್ಯ ಅಕಾಡೆಮಿಯ 6 ಪ್ರಶಸ್ತಿ ಸೇರಿದಂತೆ 32ಕ್ಕೂ ಹೆಚ್ಚಿನ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಈಗ ಈ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯು 33ನೇಯದ್ದಾಗಿದ್ದು, ಇದು ಅತ್ಯಂತ ಮಹತ್ವಪೂರ್ಣ ಪ್ರಶಸ್ತಿಯಾಗಿದೆ ಎಂದು ಬಣ್ಣಿಸಿದರು.

ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಮಾತನಾಡಿ, ಕಲಬುರ್ಗಿ ಗುರುಗಳು ಇಂದು ಬದುಕಿದ್ದರೆ ಇಂದಿನ ಪ್ರಸ್ತುತ ರಾಜಕೀಯ, ಸಾಮಾಜಿಕ ಗೊಂದಲಗಳಿಗೆ ಕಟುವಾಗಿ ಟೀಕಿಸುವ ಜತೆಗೆ ಮಾರ್ಗದರ್ಶನ ಮಾಡುವ ಶಕ್ತಿ ಹೊಂದಿದ್ದರು. ಅಂಥ ಗುರುಗಳಿಗೆ ತೋಂಟದ ಸಿದ್ಧಲಿಂಗ ಶ್ರೀಗಳ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆ ತಂದಿದೆ. ಡಾ. ಕಲಬುರ್ಗಿ ಅವರು ಸಾವಿಲ್ಲದ ಗುರುಗಳು ಎಂದರು.ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮದ ಬಗ್ಗೆ ಡಾ. ಕಲಬುರ್ಗಿ ಅವರಿಗೆ ಸ್ಪಷ್ಟತೆ ಇತ್ತು. ಅವರ ಚಿಂತನೆಗಳನ್ನು ತೋಂಟದಾರ್ಯ ಮಠ ಕಾರ್ಯರೂಪಕ್ಕೆ ತಂದಿದೆ. ಕಲಬುರ್ಗಿ ಅವರು ಬಸವತತ್ವ ಬೆಳೆಯಬೇಕು ಎನ್ನುವ ಗಟ್ಟಿ ಧ್ವನಿಯಾಗಿದ್ದರು. ಹೀಗಾಗಿ ಕಲಬುರ್ಗಿ ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಇನ್ನಷ್ಟು ಗಟ್ಟಿಯಾಗಿ ನಡೆಯಬೇಕು ಎಂದರು.

ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠ ಶಾಂತಲಿಂಗ ಸ್ವಾಮೀಜಿ, ಸಂಡೂರಿನ ಪ್ರಭು ಸ್ವಾಮೀಜಿ, ಆಳಂದದ ಕೋರಣೇಶ್ವರ ಸ್ವಾಮೀಜಿ, ಅರಸಿಕೆರೆಯ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ಶಿವಪ್ರಸಾದ ದೇವರು, ಚಂದ್ರಶೇಖರ ದೇವರು, ಶಿವರುದ್ರಯ್ಯ ಸ್ವಾಮೀಜಿ ಬಾದಾಮಿ, ಬೇಲೂರಿನ ಶಂಕರಾನಂದ ಸ್ವಾಮೀಜಿ, ರೇವಣಸಿದ್ದೇಶ್ವರ ಶಿವಾಚಾರ್ಯರು, ಕೆಂಚಬಸವ ಶಿವಾಚಾರ್ಯರು ಕಲಬುರ್ಗಿ, ಗಂಗಾಧರ ಸ್ವಾಮೀಜಿ ಯಶವಂತನಗರ, ಮಹಾಂತ ದೇವರು ಬೇಲೂರ (ಹಾಸನ), ಶಾಂತವೀರೇಶ್ವರ ಸ್ವಾಮೀಜಿ, ವೆಂಕಟಾಪುರ ಶರಣರು ಸಮ್ಮುಖ ವಹಿಸಿದ್ದರು.

ಸಮಾರಂಭದಲ್ಲಿ ಯಾಕೂಬ್ ಮೋಹಿಸೀನ್ ಬರೆದ ಹಿಂದಿ ಮೂಲದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ತೋಂಟದ ಸಿದ್ಧರಾಮ ಶ್ರೀಗಳ ತೌಲನಿಕ ಧರ್ಮದರ್ಶನ ಕೃತಿ ಬಿಡುಗಡೆ ಮಾಡಲಾಯಿತು. ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಮಲ್ಲಿಕಾರ್ಜುನ ಅಕ್ಕಿ, ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಕೊಟ್ರೇಶ ಮೆಣಸಿನಕಾಯಿ, ಬಾಲಚಂದ್ರ ಭರಮಗೌಡ್ರ ಮುಂತಾದವರು ಇದ್ದರು. ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು. ಪ್ರಶಸ್ತಿ ಸ್ವೀಕರಿಸಿದ ಉಮಾದೇವಿ ಕಲಬುರ್ಗಿ

ಸಮಾರಂಭದಲ್ಲಿ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ- 2025ನ್ನು ಮರಣೋತ್ತರವಾಗಿ ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ₹5 ಲಕ್ಷ ನಗದು, ಸ್ಮರಣಿಕೆ ಒಳಗೊಂಡಿದೆ. ಪ್ರಶಸ್ತಿಯನ್ನು ಕಲಬುರ್ಗಿ ಅವರ ಪತ್ನಿ ಉಮಾದೇವಿ ಕಲಬುರ್ಗಿ ಅವರು ಭಾವುಕತೆಯಿಂದ ಸ್ವೀಕರಿಸಿದರು. ಆಗ ಅವರು ಸೇರಿದಂತೆ ಅಲ್ಲಿದ್ದ ಹಲವರ ಕಣ್ಣಂಚಲ್ಲಿ ನೀರು ಜಿನುಗಿತು. ಪ್ರಶಸ್ತಿಯ ಬೃಹತ್ ಮೊತ್ತವನ್ನು ಶ್ರೀಮಠದ ನೌಕರರ ಮಕ್ಕಳ ಕಲ್ಯಾಣಕ್ಕೆ ನೀಡುವ ಮೂಲಕ ಉಮಾದೇವಿ ಅವರು ಕೂಡಾ ಡಾ. ಎಂ.ಎಂ. ಕಲಬುರ್ಗಿ ಅವರ ಪರಂಪರೆಯನ್ನು ಮುಂದುವರಿಸಿದರು.