ಕನ್ನಡಪ್ರಭ ವಾರ್ತೆ ಚಳ್ಳಕೆರೆ

12 ಶತಮಾನದ ಬಸವಾದಿ ಶರಣರ ವಚನಗಳ ಆಶಯ ಎಲ್ಲಾ ಕಾಲಕ್ಕೂ ಪ್ರಸ್ತುತ ಎಂದು ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ನುಡಿದರು.

ಚಳ್ಳಕೆರೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ಅಶ್ವಾರೋಡ ಬಸವೇಶ್ವರ ಪುತ್ಥಳಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಕಾಯಕವೇ ಕೈಲಾಸ ಎಂಬ ತತ್ವದಡಿ ಅನುಭವ ಮಂಟಪ ಸ್ಥಾಪಿಸಿ ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದವರು ಬಸವಣ್ಣ. ಆ ಕಾಲದಲ್ಲಿ ಜಾತಿ ವ್ಯವಸ್ಥೆಯ ಕರಾಳ ಬೇರುಗಳನ್ನು ಬುಡಸಮೇತ ಕಿತ್ತು ಹಾಕಲು ಶ್ರಮಿಸಿದವರು ಎಂದು ಬಣ್ಣಿಸಿದರು.

12ನೇ ಶತಮಾನದಿಂದ 21ನೇ ಶತಮಾನದ ವರೆಗೂ ಬಸವಾದಿ ಶರಣರು ಹೇಳಿಹೋದ ವಚನಗಳ ಸಾರದಿಂದಲೇ ಜನರು ಅರಿವಿನ ಕಡೆಗೆ ನಡೆಯುತ್ತಿದ್ದಾರೆ. ಶ್ರೀ ಸಾಮಾನ್ಯನೂ ಕೂಡ ಬಸವಣ್ಣ ಅವರ ಸಾಮಾಜಿಕ ಬದಲಾವಣೆಯ ಹಾದಿಯನ್ನು ಕಂಡು ಅವರ ಹಾದಿ ಉತ್ತಮವಾದುದು ಎಂದು ಒಪ್ಪಿಕೊಂಡಿದ್ದಾನೆ ಎಂದರು.

ಅನೇಕ ವಚನಕಾರರು ಮಹಿಳಾ ಸ್ವಾವಲಂಬನೆ ಕುರಿತು ವಚನಗಳನ್ನು ರಚಿಸಿದ್ದಾರೆ. ಇಂತಹ ವಚನಗಳ ಸಾರವನ್ನು ಮಹಿಳೆಯರು ಓದಿ ತಿಳಿಯಬೇಕಿದೆ. ಆಯ್ದಕ್ಕಿ ಲಕ್ಕಮ್ಮನಂತಹ ಅನುಭವಮಂಟದ ಶರಣೆ ಅನೇಕ ಅರ್ಥಗರ್ಭಿತ ವಚನಗಳನ್ನು ರಚಿಸಿದ್ದಾರೆ. ಮಹಿಳೆ ಸ್ವಾವಲಂಬಿ ಆದಾಗ ಮಾತ್ರ ಈ ಸಮಾಜ ಮತ್ತಷ್ಟು ಮುಂದುವರೆಯಲು ಸಾಧ್ಯ ಎಂದರು.


ಇದಕ್ಕೂ ಮುನ್ನ ಮಾತನಾಡಿದ ಕೊಪ್ಪಳದ ಗವಿಸಿದ್ದೇಶ್ವರ ಮಠದ ಗವಿಸಿದ್ದೇಶ್ವರ ಮಹಾಸ್ವಾಮಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಬಸವಾದಿ ಪ್ರಮಥರ ಕಾರ್ಯಗಳು ಶ್ಲಾಘನೀಯವಾದವುಗಳು. ಇಂತಹ ಕಾರ್ಯಗಳನ್ನು ಈಗಿನ ಮಠಮಾನ್ಯಗಳು ಹಾಗೂ ಜನರು ಮುಂದುವರಿಸಿಕೊಂಡು ಹೋಗುವ ಅಗತ್ಯ ಇದೆ ಎಂದು ತಿಳಿಸಿದರು.

ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಬಸವಣ್ಣನ ಆಶಯಗಳು ಸಮಾನತೆಯ ಸಮಾಜವನ್ನು ಜಾತಿ, ಮತಗಳಿಲ್ಲದ ಸಾಮಾಜಿಕ ವ್ಯವಸ್ಥೆ ನಿರ್ಮಾಣ ಆಗಬೇಕು ಎಂಬ ಮಹದಾಸೆ ಹೊಂದಿದ್ದರು. ಇಂತಹ ಮಹಾ ಪುರುಷನ ಜಯಂತಿಯಂದು ವಿವಿಧ ಸಂಘಟನೆಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮಾತನಾಡಿ ಬಸವಣ್ಣ ಎಲ್ಲಾ ಕಾಲಕ್ಕೂ ಶ್ರೇಷ್ಠ. ಇಂತಹ ಮಹಾಪುರುಷನ ಆದರ್ಶಗಳನ್ನು ತಮ್ಮ ನಿಜಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಂಸ್ಕಾರ ನಮ್ಮದಾಗಲಿದೆ ಎಂದು ವಿವರಿಸಿದರು. ಕೊರಟಗೆರೆಯ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಜೀ, ವಿಧಾನ ಪರಿಷತ್ ಸದಸ್ಯ ಕೆ.ಎಸ್‌. ನವೀನ್, ಕೆಡಿಪಿ ಸದಸ್ಯ ಕೆ‌.ಸಿ. ನಾಗರಾಜ್, ಉದ್ಯಮಿ ರುದ್ರಮುನಿಯಪ್ಪ, ಶಿವಪುತ್ರಪ್ಪ ಸೇರಿದಂತೆ ವೀರಶೈವ ಲಿಂಗಾಯಿತ ಸಮುದಾಯದ ಮುಖಂಡರುಗಳು ಹಾಜರಿದ್ದರು.