ಚಿಂತಕರ ಚಾವಡಿ ಈಗ ಪುನರ್‌ ವಸತಿ ಕೇಂದ್ರ-ಬಸವರಾಜ ಹೊರಟ್ಟಿ ವಿಷಾದ

| Published : Jan 14 2024, 01:31 AM IST

ಸಾರಾಂಶ

ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರು, ಸಂಗೀತ ಸಾಧಕರು ಬರಬೇಕಾದ ಮೇಲ್ಮನೆಗೆ ಅರ್ಹತೆ ಇಲ್ಲದವರು ಬರುವುದರ ಜೊತೆಗೆ ಅದರ ಘನತೆ ಮತ್ತು ಗೌರವಕ್ಕೆ ಧಕ್ಕೆ ತರಲಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಪ್ರಸ್ತುತ ಕಲುಷಿತ ರಾಜಕೀಯದಲ್ಲಿ ವಿಧಾನಪರಿಷತ್ ಚಿಂತಕರ ಚಾವಡಿಯಾಗಿ ಉಳಿದಿಲ್ಲ. ಇದು ರಾಜಕೀಯ ನಾಯಕರ ಪುನರ್ ವಸತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿಷಾದ ವ್ಯಕ್ತಪಡಿಸಿದರು.

ಸದನದಲ್ಲಿ ಎಚ್‌.ಕೆ. ಪಾಟೀಲ ಸಂಪುಟ ಬಿಡುಗಡೆಯ ಅಧ್ಯಕ್ಷತೆ ವಹಿಸಿದ ಅವರು, ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರು, ಸಂಗೀತ ಸಾಧಕರು ಬರಬೇಕಾದ ಮೇಲ್ಮನೆಗೆ ಅರ್ಹತೆ ಇಲ್ಲದವರು ಬರುವುದರ ಜೊತೆಗೆ ಅದರ ಘನತೆ ಮತ್ತು ಗೌರವಕ್ಕೆ ಧಕ್ಕೆ ತರಲಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಿನಾಮೆ ಕೊಡುವಷ್ಟು ಬೇಸರ:

ಶಾಸನ ಸಭೆಯಲ್ಲಿ ಎಲ್ಲರೂ ಮಾರಿ ಗಂಟು ಹಾಕಿಕೊಂಡೇ ಇರುತ್ತಾರೆ. ಯುವ ರಾಜಕಾರಣಿಗೆ ಆಳುವ ಪಕ್ಷ, ವಿಪಕ್ಷದ ಪರಿಕಲ್ಪನೆ ಇಲ್ಲವಾಗಿದೆ. ಸಭಾಧ್ಯಕ್ಷ ಹಾಗೂ ಸಭಾಪತಿಗಳ ಬಗ್ಗೆ ಗೌರವವೂ ಇಲ್ಲ. ರಾಜೀನಾಮೆ ಕೊಡುವಷ್ಟು ನನಗೆ ಬೇಸರವಿದೆ. ಸದನದಲ್ಲಿ ಕೆಲವು ಘಟನೆಗಳು ನೋವು ತರಿಸಿವೆ. ಮಾರ್ಗದರ್ಶನದ ಸ್ಥಾನದಲ್ಲಿ ಇರುವ ಶಾಸನ ಸಭೆ ಹಾದಿ ತಪ್ಪುತ್ತಿದೆ. ಮತ್ತೊಬ್ಬರ ಕಣ್ಣಲ್ಲಿ ಮಣ್ಣು ಎರೆಚುವ ಕೆಲಸ ಮಾಡುವ ಯುವ ರಾಜಕಾರಣಿಗಳ ನಡೆಯೂ ತಮಗೆ ನೋವು ತರಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸನ್ಮಾರ್ಗದಲ್ಲಿ ನಡೆಸಬೇಕಾದ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂಬ ಖ್ಯಾತಿ ಪಡೆದ ಪತ್ರಿಕಾರಂಗದ ವ್ಯವಸ್ಥೆಯೂ ಹದಗೆಟ್ಟು ಹೋಗಿದೆ. ಚುನಾವಣೆ ವ್ಯವಸ್ಥೆ ಸುಧಾರಿಸಿದಾಗ ಮಾತ್ರವೇ ಪ್ರಜಾಪ್ರಭುತ್ವ ವ್ಯವಸ್ಥೆ ಸುಧಾರಿಸಲಿದೆ ಎಂದು ಹೊರಟ್ಟಿ ಹೇಳಿದರು.

ನಿರ್ಣಯಗಳನ್ನು ಕೋರ್ಟ್‌ಗೆ ಹಸ್ತಾಂತರಿಸುತ್ತಿರುವ ಶಾಸನ ಸಭೆಶಾಸನಸಭೆ ಅಥವಾ ಸಂಸತ್ತಿಗಿಂತ ನ್ಯಾಯಾಲಯ ಹೆಚ್ಚು ನಂಬಿಗಸ್ಥ ಸಂಸ್ಥೆ ಎಂದು ಸಾರ್ವಜನಿಕವಾಗಿ ಅಭಿಪ್ರಾಯ ಬರಲು ಅವಕಾಶ ನೀಡಿದರೆ, ಅದು ಪ್ರಜಾಪ್ರಭುತ್ವದ ಅಂತ್ಯದ ದಿನಗಳು ಆರಂಭವಾಗಿದೆ ಎಂಬ ಸೂಚಕ. ಇದಕ್ಕೆ ಅವಕಾಶ ನೀಡಬಾರದು ಎಂದು ಕರ್ನಾಟಕ ವಿಧಾನಪರಿಷತ್‌ ವಿಶ್ರಾಂತ ಸಭಾಪತಿ ಡಾ. ಬಿ.ಎಲ್‌. ಶಂಕರ ಎಚ್ಚರಿಸಿದರು.

ಕರ್ನಾಟಕ ವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಶನಿವಾರ ನಡೆದ ಸದನದಲ್ಲಿ ಎಚ್‌.ಕೆ. ಪಾಟೀಲ ಐದು ಸಂಪುಟಗಳ ಲೋಕಾರ್ಪಣೆಯಲ್ಲಿ ಈ ಆತಂಕ ವ್ಯಕ್ತಪಡಿಸಿದ ಅವರು, ಇತ್ತೀಚೆಗೆ ಸಂಸತ್ತು ಅಥವಾ ಶಾಸನ ಸಭೆಗಳು ತಾವು ತೆಗೆದುಕೊಳ್ಳಬೇಕಾದ ತೀರ್ಮಾನಗಳನ್ನು ಕೋರ್ಟ್‌ಗೆ ಹಸ್ತಾಂತರ ಮಾಡುತ್ತಿವೆ ಎಂದು ಕರ್ನಾಟಕ ಹಾಗೂ ಮಹಾರಾಷ್ಟ್ರ ವಿಧಾನಸಭೆಗಳ ಉದಾಹರಣೆ ಸಮೇತ ವಿವರಿಸಿದ ಬಿ.ಎಲ್‌.ಶಂಕರ, ಸಭಾಧ್ಯಕ್ಷರು ರಾಷ್ಟ್ರೀಯ ಸಮ್ಮೇಳನಕ್ಕೆ ಹೋದಾಗ ಈ ವಿಷಯ ಬಗ್ಗೆ ಚರ್ಚೆ ಮಾಡಬೇಕು. ಸಂಸತ್ತು, ಶಾಸನ ಸಭೆಗಳು ತಮಗಿರುವ ಅಧಿಕಾರವನ್ನು ಬಳಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಸಲಹೆ ನೀಡಿದರು.