ಕೆಂಪು ಬಣ್ಣದಲ್ಲಿ ಢಾಳವಾಗಿ ಮರಾಠಿ ಭಾಷೆಯಲ್ಲಿ ಬರೆದಿರುವ ಬ್ಯಾನರ್ ಮಹಾ ಗಡಿಯಲ್ಲಿರುವ ಬರದಿಂದ ಕಂಗೆಟ್ಟಿರೋ ತುಳಸಿ ಗ್ರಾಮದಲ್ಲಿ ರಾರಾಜಿಸಿದ್ದು, ಅದೀಗ ಮಹಾರಾಷ್ಟ್ರ ರಾಜಕೀಯ, ಆಡಳಿತದಲ್ಲೇ ಸಂಚಲನಕ್ಕೆ ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ/ಆಳಂದಕೆಂಪು ಬಣ್ಣದಲ್ಲಿ ಢಾಳವಾಗಿ ಮರಾಠಿ ಭಾಷೆಯಲ್ಲಿ ಬರೆದಿರುವ ಬ್ಯಾನರ್ ಮಹಾ ಗಡಿಯಲ್ಲಿರುವ ಬರದಿಂದ ಕಂಗೆಟ್ಟಿರೋ ತುಳಸಿ ಗ್ರಾಮದಲ್ಲಿ ರಾರಾಜಿಸಿದ್ದು, ಅದೀಗ ಮಹಾರಾಷ್ಟ್ರ ರಾಜಕೀಯ, ಆಡಳಿತದಲ್ಲೇ ಸಂಚಲನಕ್ಕೆ ಕಾರಣವಾಗಿದೆ.ಭೀಕರ ಬರಗಾಲ ಕರ್ನಾಟಕಕ್ಕಷ್ಟೇ ಅಲ್ಲ, ಪಕ್ಕದ ಮಹಾರಾಷ್ಟ್ರವನ್ನೂ ಕಾಡುತ್ತಿದೆ ಎಂಬುದಕ್ಕೆ ಊರನ್ನೇ ಮಾರಾಟಕ್ಕಿಟ್ಟ ಬ್ಯಾನರ್ ಕನ್ನಡಿ ಹಿಡಿದಿದೆ. ಕಲಬುರಗಿಯಂತೆಯೇ ಸೊಲ್ಲಾಪುರ ಜಿಲ್ಲೆಯಲ್ಲೂ ಬರಗಾಲ, ನೀರಿನ ಕೊರತೆ, ಜಾನುವಾರು ಮೇವಿನ ಬರದಿಂದಾಗಿ ಜನರು ಕಂಗೆಟ್ಟಿದ್ದಾರೆ.ಕಲಬುರಗಿ ಗಡಿಗೆ ಹತ್ತಿರವಾಗಿರುವ ಸೊಲ್ಲಾಪುರ ಜಿಲ್ಲೆಯಲ್ಲಿ ಬರುವ ಮಂಡರಾ ತಾಲೂಕಿನ ತುಳಸಿ ಗ್ರಾಮದಲ್ಲಿ ಅಲ್ಲಿನ ನಿವಾಸಿಗಳು ಬರಗಾಲದಿಂದ ಕಂಗೆಟ್ಟಿದ್ದು, ಇಡೀ ಊರೇ ಮಾರಾಟಕ್ಕಿದೆ ಎಂಬ ಬ್ಯಾನರ್ ಕಟ್ಟುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ಈ ಬ್ಯಾನರ್ ಮಹಾರಾಷ್ಟ್ರದಲ್ಲಿನ ಭೀಕರ ಬರಗಾಲಕ್ಕೆ ಕನ್ನಿಡಿ ಹಿಡಿದಿದೆಯಲ್ಲದೆ ಈ ರೀತಿಯ ಗ್ರಾಮಕ್ಕೆ ಗ್ರಾಮವೇ ಮಾರಾಟಕ್ಕಿದೆ ಎಂಬ ಬ್ಯಾನರ್ನಿಂದ ಅಲ್ಲಿನ ರಾಕೀಯದಲ್ಲಿ ತೀವ್ರ ಸಂಚಲನ ಉಂಟಾಗಿದೆ.ತುಳಸಿ ಗ್ರಾಮದಲ್ಲಿ ನೀರಿನ ತೀವ್ರ ಅಭಾವ ಕಾಡುತ್ತಿದೆ. ರೋಸಿ ಹೋಗಿರುವ ಗ್ರಾಮದ ಜನ ಇಡೀ ಊರನ್ನೇ ಮಾರಿ ಬಿಡುವುದಾಗಿ ಘೋಷಿಸಿದ್ದಾರೆ. ಗ್ರಾಮ ಮಾರಾಟಕ್ಕಿದೆ ಎಂಬ ಬ್ಯಾನರ್ ಅಳವಡಿಸಿರೋ ಸುದ್ದಿ ಅರಿತು ಸೋಲಾಪುರ ಜಿಲ್ಲೆಯ ತುಳಸಿ ಗ್ರಾಮಕ್ಕೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಭೇಟಿ ನೀಡಿ, ಬರ ಪರಿಸ್ಥಿತಿ ಪರಿಶೀಲಿಸಿದ್ದಾರೆ.
ಅಲ್ಲಿನ ರೈತರ ಸಮಸ್ಯೆಗಳನ್ನು ಆಲಿಸಿದ ಅವರು, ಬರಪೀಡಿತ ಪ್ರದೇಶದ ನೆರವಿಗಾಗಿ 50 ಲಕ್ಷ ರು.ನೀಡಿರೋದಾಗಿ ವರದಿಯಾಗಿದೆ. ಸೋಲಾಪುರ ಜಿಲ್ಲೆಯ ಮಂಡರಾ ತಾಲೂಕಿನ ಬರಪೀಡಿತ ಪ್ರದೇಶಗಳ ಭೇಟಿಯೊಂದಿಗೆ ಶರದ್ ಪವಾರ್ ತಮ್ಮ ಬರ ಅಧ್ಯಯನ ಪ್ರವಾಸ ಆರಂಭಿಸಿದ್ದಾರೆ. ತುಳಸಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ರೈತರೊಂದಿಗೆ ಸಂವಾದ ನಡೆಸಿ ನೀರಿನ ಕೊರತೆ, ಬೆಳೆಗಳ ಹಾನಿ ಹಾಗೂ ಕೃಷಿ ಸಂಕಷ್ಟದ ಕುರಿತು ಮಾಹಿತಿ ಪಡೆದರು.1972ರ ಭೀಕರ ಬರಗಾಲವನ್ನು ಸ್ಮರಿಸಿದ ಪವಾರ್, ಆಗಲೂ ಸೋಲಾಪುರ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿತ್ತು. ಪ್ರಸ್ತುತ ಸಂಕಷ್ಟದಲ್ಲಿರುವ ರೈತರಿಗೆ ತುರ್ತು ನೆರವು ಒದಗಿಸುವುದು ಅಗತ್ಯವಾಗಿದೆ ಎಂದಿದ್ದಾರೆ.ಬರಪೀಡಿತ ಪ್ರದೇಶಗಳ ನೆರವಿಗಾಗಿ 50 ಲಕ್ಷ ರು. ಮೊತ್ತದ ಚೆಕ್ ಸಂಸದ ಧೈರ್ಯಶೀಲ ಮೊಹಿತೆ-ಪಾಟೀಲ ಅವರಿಗೆ ಹಸ್ತಾಂತರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬಾರಾಮತಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಂಸದೆ ಸುಪ್ರಿಯಾ ಸುಳೆ ಹಾಗೂ ಧೈರ್ಯಶೀಲ ಮೊಹಿತೆ- ಪಾಟೀಲ ಅವರಿಗೆ ರೈತರ ಸಮಸ್ಯೆಗಳನ್ನು ಪ್ರಸ್ತಾಪಿಸಲು ಅವಕಾಶ ಕಲ್ಪಿಸುವ ಪ್ರಯತ್ನ ಮಾಡುವುದಾಗಿ ಶರದ್ ಪವಾರ್ ಭರವಸೆ ನೀಡಿದ್ದಾರೆ.ಮರಾಠವಾಡದ ಬರಪೀಡಿತ ಪ್ರದೇಶಗಳ ಪ್ರವಾಸ ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಬರ ಪರಿಹಾರ ಕ್ರಮಗಳ ಕುರಿತು ಚರ್ಚಿಸುವುದಾಗಿಯೂ ಪವಾರ್ ಹೇಳಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆಯೇ ಬರ ನಿರ್ವಹಣೆಗೆ ಅಗತ್ಯ ಕ್ರಮಗಳ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವುದಾಗಿ ಪವಾರ್ ಮೆಲಕು ಹಾಕಿದ್ದಾರೆ.ಬ್ಯಾನರಿಂದ ಗಮನ ಸೆಳೆದ ಗ್ರಾಮ:ಮಂಡರಾ ತಾಲೂಕಿನ ತುಳಸಿ ಗ್ರಾಮದಲ್ಲಿ ನೀರಿನ ತೀವ್ರ ಅಭಾವದಿಂದ ಬದುಕು ದುಸ್ತರವಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ‘ಗ್ರಾಮ ಮಾರಾಟಕ್ಕಿದೆ’ ಎಂಬ ಬ್ಯಾನರ್ ಅಳವಡಿಸಿದ್ದರು. ಈ ಘಟನೆ ಆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ ನೆರವಿನ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬ್ಯಾನರ್ ತೆರವುಗೊಳಿಸಿದ್ದರು.ಇದೀಗ ಶರದ್ ಪವಾರ್ ಅವರ ಭೇಟಿ ಹಾಗೂ ಆರ್ಥಿಕ ನೆರವಿನ ಘೋಷಣೆಯಿಂದ ಬರಪೀಡಿತ ಗ್ರಾಮಸ್ಥರಲ್ಲಿ ಪರಿಹಾರದ ನಿರೀಕ್ಷೆ ಮೂಡಿದೆ. ಇಲ್ಲಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ಮತ್ತು ರೈತರ ಸಂಕಷ್ಟ ನಿವಾರಿಸುವುದು ಮಹಾರಾಷ್ಟ್ರ ಸರ್ಕಾರದ ಮುಂದಿರುವ ಪ್ರಮುಖ ಸವಾಲಾಗಿದೆ.