ತಿರುಪತಿ ಸೇರಿ ಎಲ್ಲ ದೇವಾಲಯಗಳ ಹಿಂದೂ ಸುಪರ್ದಿಗೆ ವಹಿಸಲು ವಿಶ್ವ ಹಿಂದೂ ಪರಿಷತ್ ಆಗ್ರಹ

| Published : Oct 01 2024, 01:39 AM IST / Updated: Oct 01 2024, 12:23 PM IST

ತಿರುಪತಿ ಸೇರಿ ಎಲ್ಲ ದೇವಾಲಯಗಳ ಹಿಂದೂ ಸುಪರ್ದಿಗೆ ವಹಿಸಲು ವಿಶ್ವ ಹಿಂದೂ ಪರಿಷತ್ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ತಿರುಪತಿ ಸೇರಿದಂತೆ ಎಲ್ಲ ದೇವಾಲಯಗಳನ್ನು ಹಿಂದೂಗಳ ಸುಪರ್ದಿಗೆ ವಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ಸೋಮವಾರ ಸಾಧು, ಸಂತರನ್ನೊಳಗೊಂಡ ಧರ್ಮಾಗ್ರಹ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

  ಮಂಗಳೂರು : ತಿರುಪತಿ ದೇವರಿಗೆ ದನದ ಕೊಬ್ಬು, ಮೀನೆಣ್ಣೆ ಮಿಶ್ರಿತ ತುಪ್ಪದಿಂದ ತಯಾರಿಸಿದ ಲಡ್ಡು ನೈವೇದ್ಯ ಅರ್ಪಿಸಿದ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ತಿರುಪತಿ ಸೇರಿದಂತೆ ಎಲ್ಲ ದೇವಾಲಯಗಳನ್ನು ಹಿಂದೂಗಳ ಸುಪರ್ದಿಗೆ ವಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ಸೋಮವಾರ ಸಾಧು, ಸಂತರನ್ನೊಳಗೊಂಡ ಧರ್ಮಾಗ್ರಹ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ತಿರುಪತಿ ಪ್ರಕರಣದ ಹಿನ್ನೆಲೆಯಲ್ಲಿ ನಗರದ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಧರ್ಮಾಗ್ರಹ ಸಭೆ ಆಯೋಜಿಸಲಾಗಿದ್ದು, ಹಲವು ಸಾಧು ಸಂತರು, ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.

ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಮಾತನಾಡಿ, ಹಿಂದೂಗಳು ಒಗ್ಗಟ್ಟಾಗದೆ ಇರುವುದರಿಂದಲೇ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸರ್ಕಾರದ ಅಧೀನದ ದೇವಸ್ಥಾನಗಳ ಆಡಳಿತ ಮಂಡಳಿಗಳಲ್ಲಿ ಹಿಂದೂಗಳಲ್ಲದವರನ್ನು ನೇಮಕ ಮಾಡಲಾಗುತ್ತಿದೆ. ಇವೆಲ್ಲವುಗಳಿಂದ ಹಿಂದೂ ಧರ್ಮ, ಆಚರಣೆಗಳ ಮೇಲೆ ಅಪಚಾರ ನಡೆಯುತ್ತಿದೆ. ಹಿಂದೂಗಳೆಲ್ಲರೂ ಒಗ್ಗಟ್ಟಾಗಿ ಸಂಘಟಿತ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

ಹಿಂದೂ ವಿರೋಧಿ ನೀತಿ:

ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಕೆಲವು ಸರ್ಕಾರಗಳಿಂದ ಹಿಂದೂ ವಿರೋಧಿ ನೀತಿ ಇತ್ತೀಚೆಗೆ ಹೆಚ್ಚುತ್ತಿದ್ದು, ತಕ್ಕ ಪಾಠ ಕಲಿಸಬೇಕಿದೆ. ದೇವಸ್ಥಾನಗಳ ಹಣ ಮಾತ್ರ ಬೇಕು. ಅಭಿವೃದ್ಧಿ ಬೇಕಿಲ್ಲ ಎಂದರೆ ಏನರ್ಥ? ದೇಶಾದ್ಯಂತ ದೇವಾಲಯಗಳ ಸಂಪತ್ತು ಅನ್ಯರ ಪಾಲಾಗಲು ಬಿಡಬಾರದು ಎಂದರು.

ಒಡಿಯೂರು ಶ್ರೀ ಗುರುದೇವಾನಾಂದ ಸ್ವಾಮೀಜಿ ಮಾತನಾಡಿ, ಸನಾತನ ಹಿಂದೂ ಧರ್ಮಕ್ಕೆ ಧಕ್ಕೆಯಾದಾಗ ರಾಜಕೀಯ ರಹಿತ ಹೋರಾಟ ನಡೆಯಬೇಕಾದ ಅಗತ್ಯವಿದೆ ಎಂದರು.

ಕನ್ಯಾನ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಓಂ ಶ್ರೀ ಮಠದ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಶಿವ ಜ್ಞಾನಮಹಿ ಸರಸ್ವತಿ, ವಿಹಿಂಪ ಕ್ಷೇತ್ರೀಯ ಮಂದಿರ ಅರ್ಚಕ ಪುರೋಹಿತ ಸಂಪರ್ಕ ವಿಭಾಗ ಪ್ರಮುಖ್‌ ಬಸವರಾಜ್‌, ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂ.ಬಿ. ಪುರಾಣಿಕ್‌, ಪೊಳಲಿ ಗಿರಿಪ್ರಕಾಶ್‌ ತಂತ್ರಿ, ಮುರಳೀಧರ್‌ ರಾವ್‌, ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಎಚ್‌.ಕೆ. ಪುರುಷೋತ್ತಮ್‌, ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರವೀಣ್‌ ನಾಗ್ವೇಕರ್‌, ಬಿ.ವರದರಾಯ ಎಸ್‌. ನಾಗ್ವೇಕರ್‌, ಬಿ. ಸಾಯಿದತ್ತ, ವಿಹಿಂಪ ಮುಖಂಡರಾದ ಗೋಪಾಲ ಕುತ್ತಾರ್‌, ಕಟೀಲ್‌ ದಿನೇಶ್‌ ಪೈ, ರವಿ ಅಸೈಗೋಳಿ, ಭುಜಂಗ ಕುಲಾಲ್‌, ಮನೋಹರ್‌ ಸುವರ್ಣ, ಹರೀಶ್‌ ಶೇಟ್‌, ಗುರುಪ್ರಸಾದ್‌ ಕಡಂಬಾರು, ದೀಪಕ್‌ ಮರೋಳಿ ಮತ್ತಿತರರು ಇದ್ದರು....................

ನಿರ್ಣಯಗಳು

1. ತಿರುಪತಿ ಲಡ್ಡು ಪ್ರಕರಣಕ್ಕೆ ಕಾರಣರಾದವರನ್ನು ಸಿಬಿಐ ತನಿಖೆ ಮೂಲಕ ಗುರುತಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಹಾಗೂ ಇನ್ನು ಮುಂದೆ ಯಾವುದೇ ರೀತಿ ದೇವಸ್ಥಾನದಲ್ಲಿ ಅಪವಿತ್ರವಾಗದಂತೆ ಸರ್ವ ಕ್ರಮ ಕೈಗೊಳ್ಳಬೇಕು.

2. ದೇವಸ್ಥಾನಕ್ಕೆ ಅಗತ್ಯವಿರುವ ತುಪ್ಪವನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದಲೇ ತಯಾರು ಮಾಡಲು 25 ಸಾವಿರ ದೇಸಿ ಹಸುಗಳಿರುವ ಬೃಹತ್ ಗೋಶಾಲೆ ಆರಂಭಿಸಬೇಕು.

3. ದೇಶದ ಇತರ ದೇವಸ್ಥಾನಗಳಲ್ಲೂ ದೇವರ ವಿನಿಯೋಗಕ್ಕೆ ಅವಶ್ಯಕತೆ ಇರುವ ತುಪ್ಪ ತಯಾರಿಸಲು ಅಗತ್ಯ ದೇಸಿ ದನಗಳ ಗೋಶಾಲೆಯನ್ನು ಆಯಾ ದೇವಸ್ಥಾನದವರು ಪ್ರಾರಂಭಿಸಬೇಕು.

4. ಸರ್ಕಾರಿ ಸುಪರ್ದಿಯಲ್ಲಿರುವ ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಿಗೊಳಿಸಿ ಸರ್ವ ಸಮ್ಮತ ರೀತಿಯಲ್ಲಿ ಹಿಂದೂ ಸಮಾಜಕ್ಕೆ ಹಸ್ತಾಂತರಿಸಬೇಕು. ಅದಕ್ಕಾಗಿ ರಾಷ್ಟ್ರೀಯ ಧಾರ್ಮಿಕ ಪರಿಷತ್ತು ಮತ್ತು ರಾಜ್ಯ ಧಾರ್ಮಿಕ ಪರಿಷತ್ತನ್ನು ಸ್ಥಾಪಿಸಬೇಕು.