ಋಷಿಗಳ ದೃಷ್ಟಿಯು ಸೂಕ್ಷ್ಮ, ಸಮಗ್ರ: ಸ್ವರ್ಣವಲ್ಲೀ ಶ್ರೀ

| Published : Jul 26 2024, 01:41 AM IST

ಸಾರಾಂಶ

ಋಷಿಗಳ ದೃಷ್ಟಿ ಸೂಕ್ಷ್ಮ ಮತ್ತು ಸಮಗ್ರ. ಋಷಿಗಳು ಗಮನಿಸಿರುವ ಪ್ರತಿಯೊಂದು ವಿಷಯಗಳಲ್ಲಿ ಸೂಕ್ಷ್ಮ ಹಾಗೂ ಸಮಗ್ರತೆಯನ್ನು ಕಾಣಬಹುದು.

ಶಿರಸಿ: ಋಷಿಗಳು ಗಮನಿಸಿರುವ ಪ್ರತಿಯೊಂದು ವಿಷಯಗಳಲ್ಲಿ ಸೂಕ್ಷ್ಮ ಹಾಗೂ ಸಮಗ್ರತೆಯನ್ನು ಕಾಣಬಹುದು ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ತಮ್ಮ ೩೪ನೇ ಹಾಗೂ ಮಠದ ಕಿರಿಯ ಸ್ವಾಮೀಜಿ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯ ಪ್ರಥಮ ಚಾತುರ್ಮಾಸ್ಯ ಸಂದರ್ಭದಲ್ಲಿ ಶ್ರೀಮಠದ ಪಾರಂಪರಿಕ ಶಿಷ್ಯರಾದ ಬನವಾಸಿ, ಬದನಗೋಡು, ತವನಂದಿ ಸೀಮೆಯ ಸಮಸ್ತ ಭಕ್ತರಿಂದ ಭಿಕ್ಷಾ ಹಾಗೂ ಪಾದಪೂಜೆ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.ಋಷಿಗಳ ದೃಷ್ಟಿ ಸೂಕ್ಷ್ಮ ಮತ್ತು ಸಮಗ್ರ. ಋಷಿಗಳು ಗಮನಿಸಿರುವ ಪ್ರತಿಯೊಂದು ವಿಷಯಗಳಲ್ಲಿ ಸೂಕ್ಷ್ಮ ಹಾಗೂ ಸಮಗ್ರತೆಯನ್ನು ಕಾಣಬಹುದು. ಅವರ ದೃಷ್ಟಿ ಆಮೂಲಾಗ್ರವಾಗಿ ಹಾಗೂ ತಳಸ್ಪರ್ಶಿಯಾಗಿ ಇರುವುದು ಕಂಡುಬರುತ್ತದೆ. ಅವರು ಬರೆದ ಎಲ್ಲ ಗ್ರಂಥಗಳಲ್ಲೂ ಅವರ ದೃಷ್ಟಿಯನ್ನು ನೋಡಬಹುದು. ಯಾವುದೇ ಶಾಸ್ತ್ರ, ವೇದಾಂತ, ಯೋಗ, ಆಯುರ್ವೇದ, ಪಾಕಶಾಸ್ತ್ರ ಇವೆಲ್ಲದರಲ್ಲೂ ಅವರು ಗಮನ ಹರಿಸಿರುವುದನ್ನು ಕಂಡುಕೊಳ್ಳಬಹುದು ಎಂದರು.ಋಷಿಗಳ ದೃಷ್ಟಿ ಎಷ್ಟು ಆಳವಾಗಿ ಇತ್ತು ಎಂಬುದನ್ನು ಉದಾಹರಣೆ ಸಹಿತ ನುಡಿದ ಶ್ರೀಗಳು, ಲೋಕದಲ್ಲಿ ಎಷ್ಟು ಯಜ್ಞ- ಯಾಗಗಳನ್ನು ಮಾಡುತ್ತಾರೋ ಅದರಿಂದಲೇ ಎಲ್ಲವೂ ಆಗುವಂತದ್ದು. ಅದೇ ಎಲ್ಲದಕ್ಕೂ ಕಾರಣ. ದೇವತೆಗಳು ಮಳೆ- ಬೆಳೆಗಳನ್ನು ಕೊಡುವುದು ಇಲ್ಲಿ ನಡೆಯುವ ಕರ್ಮಗಳನ್ನು ನೋಡಿಕೊಂಡು ಎಂದರು.ಋಷಿ ಮುನಿಗಳ ಚಿಂತನೆಗಳು ಆಧುನಿಕರ ದೃಷ್ಟಿಯಲ್ಲಿ ಕಾಣಲು ಸಾಧ್ಯವಿಲ್ಲ. ಆಧುನಿಕರ ದೃಷ್ಟಿಯಲ್ಲಿ ಸಂಕುಚಿತವಾದ ದೃಷ್ಟಿಗಳು ಕಾಣುತ್ತವೆ. ಆಧುನಿಕರ ಮಾತುಗಳು ಬದಲಾವಣೆ ಹೊಂದುತ್ತಾ ಇರುತ್ತದೆ. ಋಷಿಗಳ ಅಧ್ಯಯನ ಹಾಗಲ್ಲ. ಋಷಿಗಳಿಗೆ ತಪ್ಪಸ್ಸಿನಿಂದ ಹಾಗೂ ದೇವರ ಅನುಗ್ರಹದಿಂದ ಆ ದೃಷ್ಟಿ ಬಂತು. ಆ ದಾರಿಯಲ್ಲಿ ಆಧುನಿಕ ವಿಜ್ಞಾನಿಗಳು, ಆಧುನಿಕ ವಿಚಾರವಾದಿಗಳು ಹೋಗಲಿಲ್ಲ. ಋಷಿಗಳ ದೃಷ್ಟಿ ಬಹಳ ಅದ್ಭುತವಾದದ್ದು. ಆದ್ದರಿಂದ ಅವರ ಎಲ್ಲ ವಿಷಯಗಳನ್ನೂ ನಾವು ಸ್ವೀಕರಿಸುವ ಹಾಗೆ ಆಗಬೇಕು. ಋಷಿ ಪ್ರಣೀತ ಧರ್ಮ ಮತ್ತು ಸಂಸ್ಕೃತಿ ನಮ್ಮದಾಗಿದೆ. ಅದನ್ನು ರಕ್ಷಿಸಿಕೊಂಡು ಹೋಗಬೇಕು. ಮಹಾತ್ಮರ ದಾರಿಯಲ್ಲಿ ಸಾಗಬೇಕು ಎಂದರು.ಸೀಮೆಯ ಮಾತೆಯರು ಮತ್ತು ಮಹನೀಯರು ಅತ್ಯಂತ ಶ್ರದ್ಧಾ ಭಕ್ತಿಯಿಂದ ತಮ್ಮ ಸೇವೆಯನ್ನು ಸಲ್ಲಿಸಿದರು. ಬೆಳಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆಯನ್ನು ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನವನ್ನು ಕೈಗೊಂಡರು.ಸೀಮೆಯ ಪ್ರಮುಖರಾದ ಅನಂತ ಭಟ್ ಬೆಂಗಳೆ, ಶ್ರೀಪಾದ್ ರಾಯ್ಸದ್, ಶ್ರೀಪಾದ್ ಹೆಗಡೆ ಬಸೂರು ಇತರರು ಇದ್ದರು. ಆರ್.ಎಸ್. ಹೆಗಡೆ ಭೈರುಂಬೆ ನಿರ್ವಹಿಸಿದರು.