ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ ಡಿ.14ರಂದು ದೆಹಲಿಯಲ್ಲಿ ಹಮ್ಮಿಕೊಂಡಿರುವ ಮತಗಳ್ಳತನ ವಿರುದ್ಧದ ಬೃಹತ್ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಬಹುತೇಕ ಸಚಿವರು, ಕೆಲ ಶಾಸಕರು ಭಾಗವಹಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ ಡಿ.14ರಂದು ದೆಹಲಿಯಲ್ಲಿ ಹಮ್ಮಿಕೊಂಡಿರುವ ಮತಗಳ್ಳತನ ವಿರುದ್ಧದ ಬೃಹತ್ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಬಹುತೇಕ ಸಚಿವರು, ಕೆಲ ಶಾಸಕರು ಭಾಗವಹಿಸಲಿದ್ದಾರೆ.ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಾಮ್‌ಲೀಲಾ ಮೈದಾನದಲ್ಲಿ ‘ವೋಟ್ ಚೋರ್ ಗದ್ದಿ ಚೋಡ್’ ಹೆಸರಿನಲ್ಲಿ ಮಹಾ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾಗವಹಿಸಲು ರಾಜ್ಯದಿಂದ ಶನಿವಾರ ಸಂಜೆಯೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಬಹುತೇಕ ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ದೆಹಲಿಗೆ ತೆರಳಿದ್ದಾರೆ.
ಸಿದ್ದರಾಮಯ್ಯ ಭಾನುವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸಲಿದ್ದಾರೆ. ಮುಖ್ಯಮಂತ್ರಿಗಳ ಜತೆಗೆ ಸಚಿವರೂ ಪ್ರಯಾಣಿಸುವ ಸಾಧ್ಯತೆಯಿದೆ. ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿರುವುದರಿಂದ ವರಿಷ್ಠರೊಂದಿಗೆ ಪ್ರತ್ಯೇಕ ಭೇಟಿ ಅವಕಾಶ ಕಡಿಮೆ. ಒಂದು ವೇಳೆ ಭೇಟಿಗೆ ಅವಕಾಶ ಸಿಕ್ಕರೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆಯಾಗುವ ನಿರೀಕ್ಷೆಯಿದೆ.1 ಸಾವಿರಕ್ಕೂ ಹೆಚ್ಚು ಜನ ಭಾಗಿ-ಡಿಕೆಶಿ:
ಮತಕಳವು ಅಭಿಯಾನದ ಅಂಗವಾಗಿ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಭಾನುವಾರ ನಡೆಯುವ ಪ್ರತಿಭಟನೆಗೆ ರಾಜ್ಯದಿಂದ ಒಂದು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನ ಬದ್ಧವಾಗಿ ನಡೆದುಕೊಂಡು ಬಂದಿದೆ. ಈಗಾಗಲೇ ಕರ್ನಾಟಕದ ವಿವಿಧ ಭಾಗದಿಂದ ಸಾವಿರಾರು ಕಾರ್ಯಕರ್ತರು, ಮುಖಂಡರು ದೆಹಲಿಗೆ ರೈಲು ಹಾಗೂ ಇತರೆ ಸಾರಿಗೆ ವ್ಯವಸ್ಥೆ ಮೂಲಕ ತೆರಳಿದ್ದಾರೆ. ಪ್ರತಿಭಟನೆಯಲ್ಲಿ 100ಕ್ಕೂ ಹೆಚ್ಚು ಶಾಸಕರು ಹಾಗೂ ಪರಿಷತ್ ಸದಸ್ಯರು ಭಾಗವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಮತದಾರರ ಹಕ್ಕಿನ ರಕ್ಷಣೆಗಾಗಿ ಮತಕಳ್ಳತನ ವಿರುದ್ಧದ ಹೋರಾಟ ಆರಂಭಿಸಿದ್ದೇವೆ. ಮತಕಳ್ಳತನ ವಿರುದ್ಧದ ಹೋರಾಟ ಕರ್ನಾಟಕದಿಂದಲೇ ಆರಂಭವಾಗಿದ್ದು, ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ರಾಜ್ಯದಲ್ಲಿ ಚಿಲುಮೆ ಸಂಸ್ಥೆ ಮೂಲಕ ಈ ಹಿಂದೆ ಸಾವಿರಾರು ಬಿಎಲ್ಓಗಳನ್ನು ನೇಮಕ ಮಾಡಿ ಅಕ್ರಮ ಎಸಗಲಾಗಿತ್ತು ಎಂದು ತಿಳಿಸಿದರು.ನಾವು ಚುನಾವಣೆ ಸೋತಿರಬಹುದು. ಆದರೆ, ಮತಗಳವು ಕುರಿತು ಈಗ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಹೀಗಾಗಿ, ನಾಯಕರಾದ ರಾಹುಲ್ ಗಾಂಧಿ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.
--ಬಾಕ್ಸ್--ನೋಟಿಸ್‌ಗೆ ಉತ್ತರ
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ನನಗೂ ನೋಟಿಸ್ ಬಂದಿದ್ದು, ಅದಕ್ಕೆ ಉತ್ತರ ನೀಡಬೇಕಿದೆ. ಎಲ್ಲಾ ದಾಖಲೆ ತೆಗೆದುಕೊಂಡು ಹೋಗಿ ಉತ್ತರ ನೀಡುತ್ತೇನೆ.-ಡಿ.ಕೆ.ಶಿವಕುಮಾರ್, ಡಿಸಿಎಂ.