ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ಸುಸೂತ್ರವಾಗಿ ನಡೆಯುವ ಸಲುವಾಗಿ ಎಲ್ಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಕ್ಷೇತ್ರದ 224 ಮತಗಟ್ಟೆಗಳಿಗೂ ಇವಿಎಂಗಳು ಸೇರಿದಂತೆ ಚುನಾವಣಾ ಮತದಾನಕ್ಕೆ ಅಗತ್ಯವಿರುವ ಪರಿಕರಗಳನ್ನು ಆಯಾ ಸ್ಥಳಕ್ಕೆ ರವಾನಿಸಲಾಯಿತು ಎಂದು ಸಹಾಯಕ ಚುನಾವಣಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮತಯಂತ್ರಗಳ ಸಂಗ್ರಹಣೆ ಮಾಡಲಾಗಿದೆ. ಬೆಳಗ್ಗೆಯಿಂದಲೇ ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿಗಳ ನೇಮಕ ತಯಾರಿ ನಡೆಸಲಾಯಿತು. ಈ ತಾಲೂಕಿನಿಂದ ಹಲವಾರು ಮಂದಿ ಬೇರೆ ಬೇರೆ ತಾಲೂಕುಗಳಿಗೆ ತೆರಳುವವರನ್ನು ವಾಹನಗಳ ಮೂಲಕ ಕಳುಹಿಸಲಾಯಿತು. ತುರುವೇಕೆರೆ ವಿಧಾನಸಭಾ ಕ್ಷೇತ್ರದ ಎಲ್ಲ ಮತಗಟ್ಟೆ ಕೇಂದ್ರಗಳಿಗೆ ಚುನಾವಣಾ ಸಿಬ್ಬಂದಿ ಗುರುವಾರ ತೆರಳಿದರು.ಅತೀ ಹೆಚ್ಚು ಮಹಿಳಾ ಮತದಾರರು: ತುರುವೇಕೆರೆ ಕ್ಷೇತ್ರದಲ್ಲಿ ಒಟ್ಟು 184568 ಮತದಾರರಿದ್ದು ಪುರುಷರು 91,608, ಮಹಿಳೆಯರು 92,960, ಮತದಾರರಿದ್ದಾರೆ. 224 ಮತಗಟ್ಟೆಗಳಿದ್ದು ಕಸಬಾ 49, ದಂಡಿನಶಿವರ 41, ಮಾಯಸಂದ್ರ 37, ದೆಬ್ಬೇಘಟ್ಟ 39, ಸಿ.ಎಸ್.ಪುರ 30, ಕಡಬಾ 17 ಹಾಗೂ ತುರುವೇಕೆರೆ ಟೌನ್ 11 ಮತಗಟ್ಟೆಗಳನ್ನು ಮಾಡಲಾಗಿದೆ. 59 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಸಹಜ ಪೋಲಿಂಗ್ ಬೂತ್‌ಗಳಿಗೆ 1 ಹೋಂ ಗಾರ್ಡ್, 1 ಪೊಲೀಸ್ ಪೇದೆಯೊಂದಿಗೆ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ. ಸೂಕ್ಷ್ಮ ಮತಗಟ್ಟೆಗಳಿಗೆ ಮುಖ್ಯ ಪೇದೆಯನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಅತಿಸೂಕ್ಷ್ಮ ಹಾಗೂ ಕ್ಲಿಷ್ಠ ಮತಗಟ್ಟೆಗಳಿಗೆ ಅರೆಸೇನಾ ಮಿಲಿಟರಿ ಪಡೆಯನ್ನು ಹೆಚ್ಚುವರಿಯಾಗಿ ನೇಮಿಸಿ, ವೆಬ್ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಪ್ರತಿಯೊಬ್ಬರ ಚಲನವಲನಗಳ ಬಗ್ಗೆ ನಿಗಾ ವಹಿಸಲಾಗುವುದು. ಎಲ್ಲ ಮತಗಟ್ಟೆಗಳಲ್ಲೂ ವಿಡಿಯೋ ಚಿತ್ರೀಕರಣ ಮಾಡುವ ಮೂಲಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲು ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ ಮುನಿಯೂರು ಗ್ರಾಮದಲ್ಲಿ ವಿಕಲಚೇತನರ ಮತಗಟ್ಟೆ ಮಾಡಲಾಗಿದೆ. ಇಲ್ಲಿ 2 ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಹಿಳೆಯರ ಸಖಿ ಮತಗಟ್ಟೆ, ಮಾವಿನಕೆರೆಯಲ್ಲಿ ಯುವ ಮತಗಟ್ಟೆ ತೆರೆಯಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಮತದಾನಕ್ಕೆ ಬರುವ ನಾಗರಿಕರಿಗೆ ಯಾವುದೇ ತೊಂದರೆ ಆಗದಂತೆ ನೆರಳು, ನೀರು ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯ ಕೈಗೊಳ್ಳಲಾಗಿದೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಸಾರ್ವಜನಿಕರು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಸಹಾಯಕ ಚುನಾವಣಾಧಿಕಾರಿ ಮಂಜುನಾಥ್ ಮನವಿ ಮಾಡಿದ್ದಾರೆ.