ಸಾರಾಂಶ
ರಾಣಿಬೆನ್ನೂರು: ಇಲ್ಲಿನ ದೊಡ್ಡಪೇಟೆ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಹೋಳಿ ಹಬ್ಬದ ಪ್ರಯುಕ್ತ ನಗರದ ಶ್ರೀ ರಾಮಲಿಂಗೇಶ್ವರ ಸೇವಾ ಸಮಿತಿ, ಶ್ರೀ ಭೀಮಲಿಂಗೇಶ್ವರ ಸೇವಾ ಸಮಿತಿ, ಶ್ರೀ ಶಕ್ತಿ ಯುವಕ ಸಂಘ ಹಾಗೂ ಜೆಬಿಸಿಸಿ ಯುವಕ ಮಂಡಳಿ ವತಿಯಿಂದ ಕುಳ್ಳಿರಿಸಿದ್ದ ಜೀವಂತ ರತಿ-ಮನ್ಮಥರು ಈ ಬಾರಿಯೂ ನಗು ಚಿಮ್ಮಿಸದೇ ತಮ್ಮ ದಾಖಲೆಯನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿದ್ದಾರೆ.
ನಗಿಸಲು ಹೋದವರೇ ನಗೆಪಾಟಿಲಿಗೆ ಈಡಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೀಗಾಗಿ ಯಾರಿಗೂ ಹೋಳಿ ಬಂಪರ್ ಬಹುಮಾನದ ಮೊತ್ತ ಆರೂವರೆ ಲಕ್ಷ ರುಪಾಯಿ ದಕ್ಕಲಿಲ್ಲ.ಈ ಹಿಂದಿನ 66 ವರ್ಷಗಳಂತೆ ಈ ವರ್ಷವೂ ಓಕುಳಿ ಮುನ್ನಾದಿನವಾದ ಶುಕ್ರವಾರ ರಾತ್ರಿ (ಮಾ. 14) ರಾತ್ರಿ 8ಕ್ಕೆ ಜೀವಂತ ರತಿ-ಮನ್ಮಥ ಪಾತ್ರಧಾರಿಗಳನ್ನು ಕುಳ್ಳಿರಿಸಲಾಗಿತ್ತು. ಅವರನ್ನು ನಗಿಸಲೆಂದು ವಿವಿಧ ಪ್ರದೇಶಗಳ ಹಲವಾರು ಜನರು ಮುಂಚಿತವಾಗಿಯೇ ಇಲ್ಲಿಗೆ ಬಂದು ಜಮಾಯಿಸಿದ್ದರು. ಯಾರು ಎಷ್ಟೇ ಪ್ರಯತ್ನಿಸಿದರೂ ರತಿ ಮನ್ಮಥರು ನಗುವಿನ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದೆ ಗಂಭೀರವದನರಾಗಿ ಆಸೀನರಾಗಿದ್ದರು. ನಗಿಸಲು ಹೋದವರು ಪೇಚಿಕೆ ಸಿಲುಕುತ್ತಿದ್ದರು. ಒಂದು ಸಲ ನಕ್ಕ ಬಿಡ್ರಪ್ಪಾ ಬೇಕಾರ ಬಹುಮಾನದ ರೊಕ್ಕ (₹6.50 ಲಕ್ಷ) ಪೂರ್ತಿ ನಿಮಗ್ ಕೊಡ್ತೇನಿ ಎಂದು ಕೆಲವರು ಆಮಿಷವೊಡ್ಡುವ ಪ್ರಯತ್ನ ಮಾಡಿದರು. ಮಹಿಳೆಯರು ಕೂಡ ಅವರನ್ನು ನಗಿಸಲು ಇನ್ನಿಲ್ಲದ ಪ್ರಯತ್ನ ನಡೆಸಿ ವಿಫಲರಾದರು.
ಬಂದೋಬಸ್ತ್: ರತಿ-ಮನ್ಮಥರ ವೀಕ್ಷಣೆಗೆ ಬರುವ ಜನರನ್ನು ನಿಯಂತ್ರಿಸುವ ಸಲುವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರಿಗೆ ವೀಕ್ಷಣೆಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಒಟ್ಟಿನಲ್ಲಿ ನಗರದಲ್ಲಿ ಜೀವಂತ ರತಿ-ಮನ್ಮಥರು ತಮ್ಮ ಮೌನದ ಶಪಥ ಈ ಬಾರಿಯು ಮುಂದುವರಿಯಿತು.