ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಖಾಸಗಿ ನಿವೇಶನಕ್ಕೋಸ್ಕರ ಸಾರ್ವಜನಿಕರು ತಿರುಗಾಡುವ ರಸ್ತೆಯಲ್ಲಿದ್ದ ಬಂಡೆಯನ್ನು ಸಿಡಿಸಿದ ಪರಿಣಾಮ ಸುತ್ತಮುತ್ತಲಿನ ಮನೆ ಹಾಗೂ ದೇವಸ್ಥಾನದ ಗೋಡೆ ಬಿರುಕು ಬಿಟ್ಟಿದ್ದು ನಿವಾಸಿಗಳು ಪ್ರತಿಭಟನೆ ನಡೆಸಿದರು .ತಾಲೂಕಿನ ಎಸ್ ಸೂರಾಪುರ ಗ್ರಾಮದ ಸರ್ವೇ ನಂಬರ್ 108ರ ಸುಪ್ರೀತ್ ಕುಮಾರ್ ಎಂಬುವರಿಗೆ ಸೇರಿದ ಎರಡು ಎಕರೆ ಜಾಗವನ್ನು ಹಾಸನದ ಚೇತನ್, ಮುರಳಿ ಎಂಬುವರು ಖಾಸಗಿ ನಿವೇಶನ ನಿರ್ಮಿಸಲು ಮುಂದಾಗಿದ್ದರು. ಸೂರಾಪುರ ಗ್ರಾಮದ ಯಗಚಿ ನದಿಯ ಹಿನ್ನೀರಿನ ಪಕ್ಕದಲ್ಲಿ ಸರ್ಕಾರಿ ರಸ್ತೆಯಲ್ಲಿ ಒಳ ಚರಂಡಿ ನಿರ್ಮಿಸುವ ಸಲುವಾಗಿ ಸುಮಾರು ಇಪ್ಪತ್ತು ಅಡಿ ಆಳ ಅಗೆಯುತ್ತಿದ್ದಾಗ ಮಧ್ಯದಲ್ಲಿ ಸಿಕ್ಕ ಬೃಹತ್ ಗಾತ್ರದ ಬಂಡೆಯನ್ನು ಸಿಡಿಮದ್ದು ಬಳಸಿ ಪುಡಿ ಮಾಡಿದ ಶಬ್ಧಕ್ಕೆ ಸುತ್ತಮುತ್ತ ಸುಮಾರು ಹತ್ತಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, ಮನೆಯೊಳಗಿದ್ದ ಗೃಹಪಯೋಗಿ ವಸ್ತುಗಳು ನೆಲಕ್ಕೆ ಬಿದ್ದು ಅಪಾರ ನಷ್ಟವಾಗಿದೆ. ಸೂರಾಪುರ ಗ್ರಾಮದ ಚಂದ್ರು ಮಾತನಾಡಿ, ನಾವೆಲ್ಲಾ ಸುಮಾರು ಇಪತ್ತು ವರ್ಷಗಳ ಹಿಂದೆ ಮುಳುಗಡೆ ಪ್ರದೇಶದಿಂದ ಇಲ್ಲಿಗೆ ಬಂದು ವಾಸ ಮಾಡುತ್ತಿದ್ದೇವೆ. ಆದರೆ ನಮಗೆ ಇಲ್ಲಿ ಯಾವುದೇ ಸರಿಯಾಗಿ ಮುಲಭೂತ ಸೌಕರ್ಯವಿಲ್ಲದಿದ್ದರೂ ವಾಸಿಸಲು ಸ್ಥಳವಿಲ್ಲದೆ ಸಣ್ಣ ಸಣ್ಣ ಮನೆಗಳಲ್ಲಿ ಹಾಲು, ಮೊಸರು ಮಾರಿಕೊಂಡು ಕೂಲಿ ಮಾಡುತ್ತಾ ಸರ್ಕಾರದ ನಿವೇಶನದಲ್ಲಿ ವಾಸಿಸುತ್ತ ಇದ್ದೇವೆ. ಹಾಸನ ಮೂಲದ ಚೇತನ್, ಮುರಳಿ ಎಂಬುವವರು ಇದೆ ಊರಿನ ಸುಪ್ರೀತ್ ಅವರಿಂದ ಜಮೀನು ಪಡೆದಿದ್ದರು. ಯಾವುದೇ ಅನುಮತಿ ಪಡೆಯದೇ ಭೂ ವಿಜ್ಞಾನ ಗಣಿ ಇಲಾಖೆಯಿಂದ ಅನುಮತಿ ಪಡೆಯದೇ ಬಂಡೆ ಸಿಡಿಸಿದ್ದಾರೆ. ಇದರಿಂದ ನಮ್ಮ ಮನೆಗಳಿಗೆ ಅಪಾರ ನಷ್ಟವಾಗಿದೆ. ದಂಡಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಜೊತೆಗೆ ಪರಿಹಾರ ಕೊಡಿಸಿಕೊಡಬೇಕೆಂದು ಮನವಿ ಮಾಡಿದರು.ಸೂರಾಪುರ ಗ್ರಾಮದ ರಮೇಶ್ ಮಾತನಾಡಿ, ಯಾವುದೇ ನಿವೇಶನ ನಿರ್ಮಿಸಲು ಅನುಮತಿ ಕಡ್ಡಾಯ. ಅಲ್ಲದೆ ನಿವೇಶನ ಪಕ್ಕದಲ್ಲಿ ಕೇವಲ ಐವತ್ತು ಮೀಟರು ಪಕ್ಕದಲ್ಲೇ ಮನೆ ದೇವಸ್ಥಾನಗಳು, ಮೊರಾರ್ಜಿ ದೇಸಾಯಿ ಶಾಲೆ, ಯಗಚಿ ಹಿನ್ನೀರು ಇದೆ, ಇಂತಹ ಸ್ಥಳದಲ್ಲಿ ನಾವುಗಳು ಜಮೀನಿಗೆ ಹೋಗುವ ನಕ್ಷೆ ರಸ್ತೆಯನ್ನೇ ಸುಮಾರು ಇಪ್ಪತ್ತು ಮೀಟರ್ ಆಳ ಅಗೆದು ಒಳ ಚರಂಡಿ ನಿರ್ಮಿಸುವ ಸಲುವಾಗಿ ಮಧ್ಯದಲ್ಲಿ ಸಿಕ್ಕ ಬಂಡೆಯನ್ನು ಸಿಡಿಸಲು ಸಿಡಿಮದ್ದನ್ನು ಉಪಯೋಗಿಸಿದ್ದಾರೆ. ಆ ಶಬ್ಧಕ್ಕೆ ಅಕ್ಕ ಪಕ್ಕದಲ್ಲಿದ್ದ ಮನೆಗಳು, ದೇವಸ್ಥಾನದ ಗೋಡೆಗಳು ಬಿರುಕು ಬಿಟ್ಟಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಕೊಡಿಸಬೇಕೆಂದು ಹೇಳಿದರು. ಗ್ರಾಮದ ವಾಸಿಗಳಾದ ಮಹಿಳೆಯರು ಮಾತನಾಡಿ, ನಾವೆಲ್ಲ ಗದ್ದೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಮುಳುಗಡೆ ಸಮಸ್ಯೆನೆ ಬಗೆಹರಿದಿಲ್ಲ, ಅದರೊಳಗೆ ನಿವೇಶನ ನಿರ್ಮಿಸುತ್ತಿರುವ ಮಾಲೀಕರ ಕಾಟ ಹೆಚ್ಚಾಗಿದೆ, ಅವರನ್ನು ಕೇಳಿದರೆ ನಮಗೆ ಉಡಾಫೆ ಉತ್ತರ ಕೊಡುತ್ತಾರೆ. ತಿರುಗಾಡುವ ರಸ್ತೆಯನ್ನು ಅಗೆದು ಸಿಕ್ಕ ಬಂಡೆಯನ್ನು ಸಿಡಿಸಿದ್ದರ ಪರಿಣಾಮವಾಗಿ ನಮ್ಮ ಮನೆಗಳೆಲ್ಲ ಬಿರುಕಾಗಿದೆ. ನಮಗೆ ನ್ಯಾಯ ಕೊಡಿಸಬೇಕು, ಪರಿಹಾರ ಕೊಡಬೇಕು. ಮುಂದೆ ಈ ರೀತಿಯ ಅನಾಹುತ ಆಗದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರ ವಹಿಸಬೇಕು. ಇಲ್ಲದಿದ್ದಲಿ ಸಂಬಂಧಪಟ್ಟ ಅಧಿಕಾರಿಗಳ ಕಚೇರಿ ಉಪವಾಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ತುಂಗಾ , ಮಮತಾ, ಜಯಂತಿ , ಕೋಮಲ, ಧರ್ಮವತಿ, ರವಿ , ಪಾಪಣ್ಣ ಸುನಿತಾ , ಪರಶುರಾಮ್, ಕೇಶವಮೂರ್ತಿ, ಶೇಖರ್, ರಾಜೇಗೌಡ ಮುಂತಾದವರು ಇದ್ದರು.