5 ವರ್ಷಗಳ ಕಾಲ ಗ್ಯಾರಂಟಿ ಯೋಜನೆ ರದ್ದಾಗದು: ಸಚಿವ ಮಧು

| Published : Feb 11 2024, 01:46 AM IST

ಸಾರಾಂಶ

ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಜನತೆಗೆ ನೀಡಿದ ಭರವಸೆಯಂತೆ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ಯಾರಿಂದಲೂ ರದ್ದು ಮಾಡಲು ಸಾಧ್ಯವಿಲ್ಲ. ಎಸ್‌.ಬಂಗಾರಪ್ಪ ಅವರ ಸರ್ಕಾರ ಜಾರಿ ಮಾಡಿದ್ದ ರೈತರ ಪಂಪ್‌ಸೆಟ್‌ಗಳಿಗೆ ನೀಡಿದ ಉಚಿತ ವಿದ್ಯುತ್ ಯೋಜನೆ 3 ದಶಕ ಕಳೆದಿದ್ದರೂ ಜಾರಿಯಲ್ಲಿರುವುದೇ ಇದಕ್ಕೆ ಸಾಕ್ಷಿ. ಮಧ್ಯವರ್ತಿಗಳು ಇಲ್ಲದಂತೆ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿದ್ದು, ಗ್ಯಾರಂಟಿ ಯೋಜನೆಯಡಿ ಎಲ್ಲ ಸೌಲಭ್ಯಗಳನ್ನೂ ಜಾರಿ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀರ್ಥಹಳ್ಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಜನತೆಗೆ ನೀಡಿದ ಭರವಸೆಯಂತೆ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ಯಾರಿಂದಲೂ ರದ್ದು ಮಾಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶನಿವಾರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಎಸ್‌.ಬಂಗಾರಪ್ಪನವರ ಸರ್ಕಾರ ಜಾರಿ ಮಾಡಿದ್ದ ರೈತರ ಪಂಪ್‌ಸೆಟ್‌ಗಳಿಗೆ ನೀಡಿದ ಉಚಿತ ವಿದ್ಯುತ್ ಯೋಜನೆ 3 ದಶಕ ಕಳೆದಿದ್ದರೂ ಜಾರಿಯಲ್ಲಿರುವುದೇ ಇದಕ್ಕೆ ಸಾಕ್ಷಿ. ಮಧ್ಯವರ್ತಿಗಳು ಇಲ್ಲದಂತೆ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿದ್ದು, ಗ್ಯಾರಂಟಿ ಯೋಜನೆಯಡಿ ಎಲ್ಲ ಸೌಲಭ್ಯಗಳನ್ನೂ ಜಾರಿ ಮಾಡಿದ್ದೇವೆ ಎಂದೂ ಹೇಳಿದರು.

ಜನರಿಗೆ ಫ್ರೀ ಕೊಟ್ಟರೆ ಸೋಮಾರಿಗಳಾಗುತ್ತಾರೆ. ಈ ಗ್ಯಾರಂಟಿಗೆ ಆಯಸ್ಸು ಇಲ್ಲ ಎಂಬ ಟೀಕಾಕಾರರ ಮಾತಿಗೆ ಬೆಲೆ ಕೊಡಬೇಕಿಲ್ಲ. ಮುಂದಿನ ಐದು ವರ್ಷಗಳವರೆಗೂ ಈ ಗ್ಯಾರಂಟಿ ಯೋಜನೆ ಇರುತ್ತದೆ. ಬಂಗಾರಪ್ಪನವರು ಫ್ರೀ ಕರೆಂಟ್ ಕೊಟ್ಟರು. 32 ವರ್ಷದಿಂದ ರೈತರು ಯಾರೂ ಕರಂಟ್ ಬಿಲ್ ಕಟ್ಟುತ್ತಿಲ್ಲ. ರಾಜ್ಯದಲ್ಲಿ ಶೇ.90 ಪರ್ಸೆಂಟ್ ಫ್ರೀ ಕರೆಂಟ್ ಕೊಡುತ್ತಿದ್ದೇವೆ ಎಂದ ಅವರು, ಯಾರಿಗೆ ₹2,000 ಸೌಲಭ್ಯ ಸಿಕ್ಕಿಲ್ಲವೋ ಅಂಥವರು ಆಶಾ ಕಾರ್ಯಕರ್ತರಿಗೆ ನೆನಪು ಮಾಡಿಕೊಡಿ ಅಥವಾ ನಮ್ಮ ಗಮನಕ್ಕೆ ತನ್ನಿ. ಪಕ್ಷ, ಜಾತಿ ಎಲ್ಲನ್ನೂ ಮೀರಿ ಯೋಜನೆಯ ಲಾಭ ಸಿಗುತ್ತದೆ ಎಂದು ಭರವಸೆ ನೀಡಿದರು.

ಮಕ್ಕಳ ಸೇವೆ ಮಾಡುವ ಯೋಗ ನನಗೆ ದೊರೆತಿದ್ದು ನನ್ನ ಅದೃಷ್ಟ ಎಂದೇ ಭಾವಿಸಿದ್ದೇನೆ. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಶಾಲೆಯಲ್ಲಿ ಸಂಜೆ ವಿಶೇಷ ತರಗತಿ ನಡೆಸಲು ಉದ್ದೇಶಿಸಲಾಗಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರವೇಶದ ನೀಟ್ ಪರೀಕ್ಷೆಗೆ ತರಬೇತಿ ಕೊಡುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಿದ್ದೇವೆ. ಮಕ್ಕಳ ಭವಿಷ್ಯ ವೃದ್ಧಿಗೆ ವಿಶೇಷವಾಗಿ ಪ್ರಯತ್ನ ನಡೆಸಲಾಗುತ್ತಿದೆ. ಪೋಷಕರ ಒತ್ತಡ ಕಡಿಮೆ ಮಾಡುವುದು ಕೂಡ ಚಿಂತನೆಯಾಗಿದೆ. ಜೊತೆಗೆ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ನೀಡುವ ಜವಾಬ್ದಾರಿಯನ್ನೂ ಸರ್ಕಾರ ನಿರ್ವಹಿಸುತ್ತಿದೆ ಎಂದರು.

ಪ.ಪಂ. ಅಧ್ಯಕ್ಷೆ ಗೀತಾ ರಮೇಶ್ ಮಾತನಾಡಿ, ಕೆಲವು ತಾಂತ್ರಿಕ ಕಾರಣಗಳಿಂದ ಗ್ಯಾರಂಟಿ ಯೋಜನೆಯಲ್ಲಿ ಫಲಾನುಭವಿಗಳು ವಂಚಿತರಾಗಿದ್ದರು. ಈ ಸಮಾವೇಶದಿಂದ ವಂಚಿತರಾಗಿರುವ ಫಲಾನುಭವಿಗಳಿಗೆ ಸೂಕ್ತ ಮಾಹಿತಿ ದೊರೆಯಲಿದೆ. ರಾಜ್ಯ ಸರ್ಕಾರ ಮಾತಿನಂತೆ ನಡೆದಿದ್ದು, ಇದರಿಂದ ಬಹಳ ಮುಖ್ಯವಾಗಿ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ದೊರೆತಿದೆ ಎಂದರು.

ಯೋಜನೆಗಳ ಕುರಿತಂತೆ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಗ್ಯಾರಂಟಿ ಯೋಜನೆ ದೇಶದ ಬಹುದೊಡ್ಡ ಯೋಜನೆಯಾಗಿದೆ. ಈ ಮೊದಲು ಎಂದೂ ಆಗಿಲ್ಲ. ಯೋಜನೆ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಲು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ ಎಂದರು.

ಇದೇ ವೇಳೆ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ಕಟ್ಟಡ ಕಾಮಿಕರ 23 ಮಕ್ಕಳಿಗೆ ಕಾರ್ಮಿಕ ಇಲಾಖೆ ವತಿಯಿಂದ ಲ್ಯಾಪ್ ಟಾಪ್ ವಿತರಿಸಲಾಯಿತು. ವೇದಿಕೆಯಲ್ಲಿ ಪಪಂ ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಕಂಡೆ, ಕಾರ್ಮಿಕ ಇಲಾಖೆ ಅಧಿಕಾರಿ ಸುಮಾ, ತಹಸೀಲ್ದಾರ್ ಜಕ್ಕನ ಗೌಡರ್, ತಾಪಂ ಇಒ ಎಂ.ಶೈಲಾ ಇದ್ದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಸೂರತ್ ಕಾರ್ಯಕ್ರಮ ನಿರ್ವಹಿಸಿದರು.

- - - -ಫೋಟೋ:

ಸಮಾವೇಶದಲ್ಲಿ ಕಟ್ಟಡ ಕಾಮಿಕರ 23 ಮಕ್ಕಳಿಗೆ ಕಾರ್ಮಿಕ ಇಲಾಖೆ ವತಿಯಿಂದ ಲ್ಯಾಪ್ ಟಾಪ್ ವಿತರಿಸಲಾಯಿತು.