ಸಾರಾಂಶ
ಇಸಾಮುದ್ರ ಗೊಲ್ಲರಹಟ್ಟಿಯಲ್ಲಿ 2 ಕೋಟಿ ರು. ವೆಚ್ಚದಲ್ಲಿ ನೂತನ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಭರಮಸಾಗರ ಹೋಬಳಿಯ ಎಲ್ಲಾ ಗ್ರಾಮಗಳಿಗೆ ಇನ್ನೂ ನಾಲ್ಕೈದು ತಿಂಗಳಲ್ಲಿ ಹಿರಿಯೂರಿನ ವಾಣಿ ವಿಲಾಸಸಾಗರ ಅಣೆಕಟ್ಟೆಯಿಂದ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ಭರಮಸಾಗರ ಸಮೀಪದ ಇಸಾಮುದ್ರ ಗೊಲ್ಲರಹಟ್ಟಿಯಲ್ಲಿ 2 ಕೋಟಿ ರು. ವೆಚ್ಚದಲ್ಲಿ ನೂತನ ಸಿಸಿ ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇಸಾಮುದ್ರ, ಕಾಲ್ಕೆರೆ, ಭರಮಸಾಗರ, ಯಳಗೋಡು ಕೆರೆಗಳಲ್ಲಿ ಹೂಳು ತೆಗೆಸಿ, ಜಾಲಿ ಗಿಡಗಳನ್ನು ಕಿತ್ತು ಅಭಿವೃದ್ಧಿ ಪಡಿಸಿದ ಪರಿಣಾಮ ನೀರು ತುಂಬಿದ್ದು, ಎಲ್ಲಿಯೂ ಗದ್ದಲ, ಗಲಾಟೆ, ಜಾತಿ ನಿಂದನೆ ಕೇಸಿಗೆ ಅವಕಾಶ ಕೊಟ್ಟಿಲ್ಲ. ನೆಮ್ಮದಿಯ ವಾತಾವರಣವಿದೆ. ಮುಂದಿನ ದಿನಗಳಲ್ಲಿ ಇಲ್ಲಿ ನಾಲ್ಕು ಶಾಲೆಗಳನ್ನು ಕಟ್ಟಿಸುತ್ತೇನೆ. ಭರಮ ಸಾಗರದಲ್ಲಿ ಹತ್ತು, ಕೊಳಾಳ್, ಎಮ್ಮೆಹಟ್ಟಿ, ಇಸಾಮುದ್ರದಲ್ಲಿ ನಾಲ್ಕು ಶಾಲೆಗಳನ್ನು ಕಟ್ಟಿಸಿದ್ದೇನೆ. ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ ಅದುವೆ ನಿಜವಾದ ಆಸ್ತಿ ಎಂದು ಹೇಳಿದರು.ಆಂಜನೇಯಸ್ವಾಮಿ ದೇವಸ್ಥಾನಕ್ಕೆ 10 ಲಕ್ಷ ರು. ಕೊಟ್ಟಿದ್ದೇನೆ. ಶಿವನಿ, ಅಜ್ಜಂಪುರದವರೆಗೂ ನನ್ನ ಕ್ಷೇತ್ರವಿದೆ. ರಾಜ್ಯದಲ್ಲಿ ಸರ್ಕಾರ ಯಾವುದಿದೆ ಎನ್ನುವುದು ಮುಖ್ಯವಲ್ಲ. ಹೋರಾಟ ಮಾಡಿ ಹಣ ತಂದು ಪ್ರತಿನಿತ್ಯವು ಎಲ್ಲಾ ಗ್ರಾಮಗಳಲ್ಲಿ ಒಂದಲ್ಲ ಒಂದು ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತಿದ್ದೇನೆ. ಭರಮಸಾಗರ ಹೋಬಳಿಯ ಎಲ್ಲಾ ಹಳ್ಳಿಗಳಲ್ಲಿ ಪ್ರತಿ ಮನೆಗಳಿಗೆ ಹಿರಿಯೂರಿನಿಂದ ನೀರು ಪೂರೈಸುವುದಕ್ಕಾಗಿ 300 ಕೋಟಿ ರು. ಖರ್ಚು ಮಾಡುತ್ತಿದ್ದೇನೆ ಎಂದರು.
ಭರಮಸಾಗರ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಶೈಲೇಶ್, ಗ್ರಾಪಂ ಅಧ್ಯಕ್ಷೆ ಲತಾ ಮಂಜುನಾಥ್, ಸದಸ್ಯರಾದ ಎನ್.ಟಿ.ತಿಪ್ಪೇಸ್ವಾಮಿ, ಶಿವಮ್ಮ ರಾಮಚಂದ್ರನಾಯ್ಕ, ಸತೀಶ್ ಕುಮಾರ್, ಕ್ಯಾತಪ್ಪ, ನಾಗೇಂದ್ರಪ್ಪ, ಶಿವಣ್ಣ, ಹಿರೇಬೆನ್ನೂರು ನಾಗರಾಜ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.