ಸಮಾಜ ಸರಿದಾರಿಗೆ ತರುವ ಅಸ್ತ್ರ ಶಿಕ್ಷಕರಲ್ಲಿದೆ: ಪಾಟೀಲ

| Published : Sep 06 2024, 01:03 AM IST

ಸಮಾಜ ಸರಿದಾರಿಗೆ ತರುವ ಅಸ್ತ್ರ ಶಿಕ್ಷಕರಲ್ಲಿದೆ: ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಬದಲಾದ ಇಂದಿನ ಮಾನಗಳಲ್ಲಿ ದೇಶ, ರಾಜ್ಯ ಹಾಗೂ ಸಮಾಜಗಳನ್ನು ಬದಲಾವಣೆ ಮಾಡುವ ಶಕ್ತಿಯ ಜತೆಗೆ ಎಲ್ಲವನ್ನು ಸರಿದಾರಿಗೆ ಸಾಗಿಸುವ ಅಸ್ತ್ರ ಶಿಕ್ಷಕರಲ್ಲಿ ಮಾತ್ರ ಇದೆ. ಈಗಿನಿಂದಲೇ ಮಕ್ಕಳಲ್ಲಿ ಶ್ರದ್ಧೆ, ದೇಶಭಕ್ತಿ ಬೆಳೆಸುವ ಪಾಠ ಕಲಿಕೆ ಆರಂಭಿಸಿ ಎಂದು ಶಾಸಕ ಜೆ.ಟಿ.ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಬದಲಾದ ಇಂದಿನ ಮಾನಗಳಲ್ಲಿ ದೇಶ, ರಾಜ್ಯ ಹಾಗೂ ಸಮಾಜಗಳನ್ನು ಬದಲಾವಣೆ ಮಾಡುವ ಶಕ್ತಿಯ ಜತೆಗೆ ಎಲ್ಲವನ್ನು ಸರಿದಾರಿಗೆ ಸಾಗಿಸುವ ಅಸ್ತ್ರ ಶಿಕ್ಷಕರಲ್ಲಿ ಮಾತ್ರ ಇದೆ. ಈಗಿನಿಂದಲೇ ಮಕ್ಕಳಲ್ಲಿ ಶ್ರದ್ಧೆ, ದೇಶಭಕ್ತಿ ಬೆಳೆಸುವ ಪಾಠ ಕಲಿಕೆ ಆರಂಭಿಸಿ ಎಂದು ಶಾಸಕ ಜೆ.ಟಿ.ಪಾಟೀಲ ತಿಳಿಸಿದರು.

ಇಲ್ಲಿನ ಸಿದ್ದೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಪಂ, ಶಾಲಾ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಬೀಳಗಿ ತಾಲೂಕು ಶಿಕ್ಷಕರ ದಿನೋತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಜಯಂತಿ ಹಾಗೂ ಶಿಕ್ಷಕರ ದಿನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸ್ವಚ್ಛತೆ, ಕಾನೂನು ಪಾಲನೆ,ದೇಶ ಭಕ್ತಿಯ ಜತೆಗೆ ಶ್ರದ್ಧೆಯ ಪಾಠ ನಿರಂತರವಾಗಿ ಬರಬೇಕು. ಬರುವ ದಿನಮಾನಗಳಲ್ಲಿ ಏನಾದರೂ ಬದಲಾವಣೆ ಆಗಬೇಕು ಅಂದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.ಸಮಾರಂಭದಲ್ಲಿ ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಯಾರಾದರೂ ಯಾವುದಾದರ ಜಗಮೆಚ್ಚುವ ಸಾಧನೆ ಮಾಡಿದ್ದಾರೆ ಎಂದರೆ ಸಾಧಕರ ಹಿಂದೆ ಉತ್ತಮ ಶಿಕ್ಷಕ ಇದ್ದೆ ಇರುತ್ತಾನೆ. ಕಲಿತ ಶಾಲೆ, ಕಲಿಸಿದ ಶಿಕ್ಷಕ ಹಾಗೂ ರಾಜ್ಯದ ಕೀರ್ತಿ ಬೆಳೆಸುವ ಸಾಧಕ ಮಕ್ಕಳನ್ನು ರೂಪಿಸುವ ಕೆಲಸ ಶಿಕ್ಷಕರಿಗೆ ಮಾತ್ರ. ಅಂಕಗಳಿಲ್ಲದೇ ಸಾಧನೆ ಇಲ್ಲ, ಹಾಗೆಯೇ ಅನ್ಯ ಮಾರ್ಗದ ಅಂಕಗಳಿಕೆ ಯಾವುದಕ್ಕೂ ಪ್ರಯೋಜನವಾಗಲಾರದು. ಮಕ್ಕಳಿಗೆ ಭಾರತೀಯ ಪರಂಪರೆ, ಸಂಸ್ಕ್ರತಿಯ ಕುರಿತಾಗಿ ಹೇಳುವುದು ಜತೆಗೆ ಮಕ್ಕಳಲ್ಲಿ ಅಡಗಿರುವ ನಿಜವಾದ ಕಲಿಕೆಯನ್ನು ಗುರುತಿಸುವ ಕೆಲಸವಾಗಬೇಕು ಎಂದರು.

ಸಮಾರಂಭದಲ್ಲಿ ತಾಲೂಕು ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಕುಂದರಗಿಯ ಶಿಕ್ಷಕಿ ಉಮಾದೇವಿ ಪವಾರ ಅವರಿಗೆ ನೀಡಿ ಗೌರವಿಸಲಾಯಿತು. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿನ ಉತ್ತಮ ಶಿಕ್ಷಕ ಶಿಕ್ಷಕಿಯರನ್ನು ಗೌರವಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಬೀಳಗಿ ತಾಲೂಕು ಶಿಕ್ಷಕರ ದಿನೋತ್ಸವ ಸಮಿತಿಯ ಮಹಾದೇವ ಬೋರ್ಜಿ ವಹಿಸಿದ್ದರು. ಸಮಾರಂಭದಲ್ಲಿ ಶಿಕ್ಷಕ ಮತ್ತು ಶಿಕ್ಷಣ ಕುರಿತಾಗಿ ಬಸವನಬಾಗೇವಾಡಿಯ ಶಿಕ್ಷಕ ಸಾಹಿತಿಗಳಾದ ಅಶೋಕ ಹಂಚಲಿ ವಿಶೇಷ ಉಪನ್ಯಾಸ ನೀಡಿದರು. ತಹಸೀಲ್ದಾರ್‌ ಸುಹಾಸ ಇಂಗಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್‌.ಆದಾಪೂರ, ತಾಪಂ ಇಒ ಅಭಯಕುಮಾರ ಮೊರಬ ಸೇರಿದಂತೆ ಇತರರು ಇದ್ದರು.