ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಗ್ರಾಪಂಯಲ್ಲಿ 1.24 ಲಕ್ಷ ರು. ಮೊತ್ತದ ಬಾವಿ ಕಾಮಗಾರಿ ನಿರ್ಮಾಣವೇ ಇಲ್ಲದೇ ಬಿಲ್ ಪಾವತಿಯಾದ ಪ್ರಕರಣವೊಂದು ನಾಲ್ಕು ವರ್ಷಗಳ ನಂತರ ಬೆಳಕಿಗೆ ಬಂದಿದ್ದು, ಬಾವಿ ಕಳೆದು ಹೋಗಿದೆ ಹುಡುಕಿ ಕೊಡಿ ಎಂದು ಕುಡುಮಲ್ಲಿಗೆ ಗ್ರಾಮಸ್ಥರ ಪ್ರತಿಭಟನೆಗೆ ಕಾರಣವಾಗಿದೆ.2021-22ರಲ್ಲಿ ನಡೆದಿರುವ ಈ ಪ್ರಕರಣದಲ್ಲಿ ಭೆಕ್ಷೆ ಗ್ರಾಮದ ಧಾರ್ಮಿಕ ಕೇಂದ್ರದ ಬಳಿ ನಿರ್ಮಿಸಲು ಮಂಜೂರಾಗಿದ್ದ ಹಣ ದುರುಪಯೋಗ ಆಗಿರುವ ಬಗ್ಗೆ ಸಾರ್ವಜನಿಕ ಲೆಕ್ಕಪರಿಶೋದನಾ ಸಮಿತಿಯ ತನಿಖೆಯಿಂದ ಪ್ರಕರಣ ಹೊರ ಬಂದಿದ್ದು ಗ್ರಾಮಸ್ಥರ ಪ್ರತಿಭಟನೆಗೆ ಕಾರಣವಾಗಿದ್ದು, ಅಧಿಕಾರಿಗಳು ವಿವರ ಕಲೆ ಹಾಕುತ್ತಿದ್ದಾರೆ.
ಕುಡುಮಲ್ಲಿಗೆ ಬಳಿಯ ಭೆಕ್ಷೆ ಶ್ರೀ ಸತ್ಯಸಾರಮಾನಿ ಧರ್ಮದೈವ ಹಾಗೂ ಶ್ರೀ ಆತೀರ ಪಂಜುರ್ಲಿ ದೇವಸ್ಥಾನದ ಬಳಿ ಕುಡಿಯುವ ನೀರಿನ ಬಾವಿ ನಿರ್ಮಾಣದ ಸಲುವಾಗಿ ತಾಪಂ ಅನುದಾನದಲ್ಲಿ 1.24 ಲಕ್ಷ ರು. ಮಂಜೂರಾಗಿತ್ತು. ಕಾಮಗಾರಿ ಸ್ಥಳಕ್ಕೆ 30 ರಿಂಗ್‍ಗಳನ್ನು ತಂದು ಹಾಕಿ ಬೇರೊಂದು ಜಾಗದಲ್ಲಿ ನಿರ್ಮಿಸಲಾಗಿದ್ದ ಬಾವಿಯ ಫೋಟೊವನ್ನು ಲಗತ್ತಿಸಿ ಹಣವನ್ನು ಡ್ರಾ ಮಾಡಲಾಗಿದೆ ಎನ್ನಲಾಗಿದೆ.ಈ ಕಾಮಗಾರಿ ಸಲುವಾಗಿ ತಂದಿರುವ ಸುಮಾರು 30 ಬಾವಿ ರಿಂಗ್‍ಗಳು ಸ್ಥಳದಲ್ಲಿ ಬಿದ್ದಿದ್ದು, ಅವುಗಳು ಕೂಡಾ ಶಿಥಿಲಗೊಂಡಿವೆ. ಈ ಪ್ರಕರಣದಲ್ಲಿ ನಡೆದಿರುವ ಅಕ್ರಮದಲ್ಲಿ ಗುತ್ತಿಗೆದಾರನೊಂದಿಗೆ ಕೈ ಜೋಡಿಸಿರುವ ಗ್ರಾಮೀಣ ಕುಡಿಯುವ ನೀರಿನ ಯೋಜನಾಧಿಕಾರಿ ಹಾಗೂ ಬಾವಿ ನಿರ್ಮಾಣವಾಗಿರುವ ಬಗ್ಗೆ ಧೃಡೀಕರಣ ಪತ್ರ ನೀಡಿರುವ ಕುಡುಮಲ್ಲಿಗೆ ಗ್ರಾಪಂ ಅಂದಿನ ಪಿಡಿಓ ಶಾಮೀಲಾಗಿದ್ದಾರೆಂಬ ಬಗ್ಗೆಯೂ ಗ್ರಾಮಸ್ಥರಿಂದ ಆರೋಪವಿದೆ.