ಸಾರಾಂಶ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆ ಸಿಹಿ ಹಂಚುವ ವೇಳೆ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆ ಸಿಹಿ ಹಂಚುವ ವೇಳೆ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದರಿಂದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಶಿವಪ್ಪ ನಾಯಕ ಪ್ರತಿಮೆ ಬಳಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಲಡ್ಡು ಹಂಚುತ್ತಿದ್ದರು. ಇದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಹಾಗಾಗಿ, ಜನರು ಮುಂದೆ ಸಾಗುವಂತೆ ಪೊಲೀಸರು ತಿಳಿಸುತ್ತಿದ್ದರು.
ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಬುರ್ಖಾ ಧರಿಸಿದ್ದ ಮಹಿಳೆಗೂ ಮುಂದೆ ಸಾಗುವಂತೆ ಸೂಚಿಸಿದರು. ಆಗ ಆಕ್ರೋಶಗೊಂಡ ಮಹಿಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿದ್ದಾರೆ.
ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಮಹಿಳೆ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದಾರೆ. ಆಗ ಕೂಡಲೇ ಪೊಲೀಸರು ಸದರಿ ಮಹಿಳೆಯನ್ನು ವಶಕ್ಕೆ ಪಡೆದರು.
ಘೋಷಣೆ ಕೂಗಿದಾಕೆ ಮಾನಸಿಕ ಅಸ್ವಸ್ಥೆ: ಅಯೋಧ್ಯೆ ಶ್ರೀ ರಾಮನ ಪ್ರತಿಷ್ಠಾಪನೆ ಹಿನ್ನೆಲೆ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಸಂಭ್ರಮೋತ್ಸವ ವೇಳೆ ಅಲ್ಲಾ ಹು ಅಕ್ಬರ್ ಘೋಷಣೆ ಹಾಕಿದ ಮುಸ್ಲಿಂ ಮಹಿಳೆ ಮಾನಸಿಕ ಆಸ್ವಸ್ಥೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಸ್ಪಷ್ಟನೆ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಮಹಿಳೆಯನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ. ವಿಚಾರಣೆ ವೇಳೆ ಮಹಿಳೆ ಮಾನಸಿಕ ಅಸ್ವಸ್ಥಳೆಂದು ತಿಳಿದುಬಂದಿದೆ. ಈ ಸಂಬಂಧ ಅವರ ತಂದೆ ಪೂರಕ ದಾಖಲೆಗಳನ್ನ ನೀಡಿದ್ದಾರೆ.
ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ. ಶಿವಮೊಗ್ಗ ಸೇರಿದಂತೆ ವಿವಿಧ ಕಡೆಗಳಲ್ಲಿ ಮುಸ್ಲಿಂ ಮಹಿಳೆ ಮಾನಸಿಕ ಚಿಕಿತ್ಸೆ ಪಡೆಯುತ್ತಿದ್ದ ಬಗ್ಗೆ ದಾಖಲೆಗಳಿವೆ ಎಂದು ತಿಳಿಸಿದ್ದಾರೆ.
ಎಫ್‌ಐಆರ್ ದಾಖಲಿಸಿ, ಬಂಧಿಸಿ ತನಿಖೆ ನಡೆಸಿ: ಈಶ್ವರಪ್ಪ ಆಗ್ರಹ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನೆಲೆ ಸಿಹಿ ಹಂಚುವ ವೇಳೆ ಅಲ್ಲಾ ಹು ಅಕ್ಬರ್ ಎಂದು ಬುರ್ಖಾ ಧರಿಸಿದ ಮಹಿಳೆ ಕೂಗಿದ್ದಾಳೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಮಾನ ಮಾಡಿದ್ದಾಳೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸೋಮವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಎಸ್‌ಪಿ ಅವರ ಜೊತೆ ಮಾತನಾಡಿದ್ದೇನೆ. ಈ ವೇಳೆ ಎಸ್‌ಪಿ ಅವರು ಆ ಮಹಿಳೆ ಹುಚ್ಚಿ ಅಂತಾ ಹೇಳಿದ್ದಾರೆ. ನೀವು ಹುಚ್ಚಿ ಅಂತಾ ಹೇಗೆ ನಿರ್ಧಾರ ಮಾಡ್ತೀರಾ ಅಂತಾ ನಾನು ಕೇಳಿದ್ದೇನೆ. ಆಕೆ ವಿರುದ್ಧ ಎಫ್‌ಐಆರ್ ಮಾಡಿ, ಬಂಧಿಸುವಂತೆ ಹೇಳಿದ್ದೇನೆ. ನಿಪ್ಷಕ್ಚಪಾತವಾಗಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಅಯೋಧ್ಯೆಯ ಸಂಭ್ರಮದಲ್ಲಿರುವಾಗ ಇದ್ದಕ್ಕಿದ್ದಂತೆ ಗಲಾಟೆ ನಡೆಸುವ ಪ್ರಯತ್ನ ಮಾಡಿರುವುದು ಬೇಸರ ತರಿಸಿದೆ. ಆಕೆ ಹುಚ್ಚಿ ಆಗಿದ್ದರೆ ಅಲ್ಲಾ ಹು ಅಕ್ಬರ್ ಹೇಗೆ ಕೂಗಿದಳು? ಮೋದಿಗೆ ಧಿಕ್ಕಾರ ಏಕೆ ಕೂಗಿದಳು? ಸಂಭ್ರಮದ ಕಾರ್ಯಕ್ರಮದ ವೇಳೆ ಷಡ್ಯಂತ್ರ ನಡೆಸುವ ಕೆಲಸ ನಡೆದಿದೆ.
ಈ ಬಗ್ಗೆ ಸಿಎಂ, ಗೃಹ ಸಚಿವರು ಗಮನಹರಿಸಿ, ತನಿಖೆ ನಡೆಸಬೇಕು. ಇದರ ಹಿಂದೆ ಯಾರಿದ್ದಾರೆ, ಯಾರು ಕುಮ್ಮಕ್ಕು ಕೊಟ್ಟಿದ್ದಾರೆ ಎಲ್ಲವೂ ತನಿಖೆಯಿಂದ ಹೊರಗೆ ಬರಬೇಕು.
ಆ ಮಹಿಳೆ ಶಿವಮೊಗ್ಗದಲ್ಲಿ ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ದಳು. ಶಾಂತಿಯುತ ಶಿವಮೊಗ್ಗದಲ್ಲಿ ಆಕೆ ಗಲಾಟೆ ಮಾಡಿದ ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಸಬೇಕು ಎಂದರು.
ಮಗಳು ಮೊದಲಿಂದಲೂ ಮಾನಸಿಕ ಅಸ್ವಸ್ಥೆ: ಸಯ್ಯದ್ ಅಬ್ಬಾಸ್
ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಮಹಿಳೆ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಮಾತನಾಡಿದ ಆಕೆಯ ತಂದೆ ಸಯ್ಯದ್ ಅಬ್ಬಾಸ್, ನನ್ನ ಮಗಳು ಮೊದಲಿನಿಂದಲೂ ಮಾನಸಿಕ ಅಸ್ವಸ್ಥಳಿದ್ದಾಳೆ.
ಈ ಸಂಬಂಧ ಅವಳಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಕಳೆದ 10 ತಿಂಗಳಿನಿಂದ ಗಂಡನ ಮನೆ ಬಿಟ್ಟು ನನ್ನ ಮನೆಯಲ್ಲಿಯೇ ಇದ್ದಾಳೆ ಎಂದಿದ್ದಾರೆ.
ಈ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಘಟನೆ ಕೇಳಿ ನನಗೂ ನೋವಾಗಿದೆ. ಅವಳು ಆ ತರಹದ ಹುಡುಗಿ ಅಲ್ಲ.
ಅವಳು ಜಾತಿ-ಭೇದ ಮಾಡಲ್ಲ. ಎಲ್ಲರನ್ನೂ ಒಂದೇ ತರಹ ನೋಡುತ್ತಾಳೆ. ಉದ್ದೇಶಪೂರಕವಾಗಿ ಅವಳು ಘೋಷಣೆ ಕೂಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.