12ನೇ ಶತಮಾನದ ಬಸವಾದಿ ಪ್ರಮಥರ ನುಡಿದಂತೆ ನಡೆದ ದೇವಮಾನವರು, ಅವರ ಆದರ್ಶಗಳು ಸುಸಂಸ್ಕೃತ ಸಮಾಜ ಕಟ್ಟಲು ನೆರವಾಗುತ್ತದೆ

ಕೊಟ್ಟೂರು: ಶರಣರ ನಡೆ, ನುಡಿ, ಅವರು ಹಾಕಿಕೊಟ್ಟಿರುವ ತತ್ವ- ಆದರ್ಶದಲ್ಲಿ ಮುನ್ನಡೆದರೆ ಪ್ರತಿಯೊಬ್ಬರೂ ಮಾದರಿ ವ್ಯಕ್ತಿಯಾಗಬಲ್ಲರು ಎಂದು ಕೊಟ್ಟೂರು ಥಿಯಾಸಾಪ್ಟಿಕಲ್ ಲಾಡ್ಜ್‌ನ ಅಧ್ಯಕ್ಷ ಜೆ.ಎಂ. ಧನಂಜಯ ಹೇಳಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ನಿಲುವಂಜಿ ಮಠದ ಬಸಮ್ಮ, ಎನ್.ಎಂ. ಚನ್ನಬಸಯ್ಯ ಮತ್ತು ಸಂಘದ ಸೊನ್ನದ ಮುರುಡಿ ಮಠದ ಬಸಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣರ ಬದುಕು, ಚಿಂತನೆಗಳು ನಿಜಕ್ಕೂ ಮಾನವ ಜನಾಂಗ ಮತ್ತು ಸಮಾಜ ಸುಧಾರಣೆಗೊಳಪಡಿಸುವ ಪ್ರಕ್ರಿಯೆಯಾಗಿದೆ ಎಂದರು.

ನಿವೃತ್ತ ಬ್ಯಾಂಕ್ ಅಧಿಕಾರಿ ಬಿ.ಎಂ. ಪ್ರಭುದೇವ ಮಾತನಾಡಿ, 12ನೇ ಶತಮಾನದ ಬಸವಾದಿ ಪ್ರಮಥರ ನುಡಿದಂತೆ ನಡೆದ ದೇವಮಾನವರು, ಅವರ ಆದರ್ಶಗಳು ಸುಸಂಸ್ಕೃತ ಸಮಾಜ ಕಟ್ಟಲು ನೆರವಾಗುತ್ತದೆ ಎಂದರು.

ನಿವೃತ್ತ ಪಿಡಿಒ ಎಸ್.ಎಂ. ಕೊಟ್ರಯ್ಯ ರಾಷ್ಟ್ರ ಧರ್ಮನಿಷ್ಠ ಹರ್ಡೆಕರ್ ಮಂಜಪ್ಪ ಕುರಿತು ಉಪನ್ಯಾಸ ನೀಡಿ, ದಾವಣಗೆರೆಯಲ್ಲಿ ಬಸವ ಜಯಂತಿ ಕಾರ್ಯಕ್ರಮ 1933ರಲ್ಲಿ ಹಮ್ಮಿಕೊಳ್ಳುವ ಜತೆಗೆ ಅಕ್ಕಮಹಾದೇವಿ ಜಯಂತಿ ಆಚರಣೆಗೂ ಹರ್ಡೆಕರ್ ಮಂಜಪ್ಪ ಚಾಲನೆ ನೀಡಿ, ಉದಾತ್ತ ಬಸವಾದಿ ಶರಣರ ಉದಾತ್ತತೆ ಪ್ರತಿಯೊಬ್ಬರಲ್ಲಿ ಒಡಮೂಡಲು ಕಾರಣರಾದರು ಎಂದರು.

ಸಾಹಿತ್ಯ ಪರಿಷತ್ ತಾಲೂಕು ಖಜಾಂಚಿ ಅಂಗಡಿ ಚಂದ್ರಪ್ಪ, ಶರಣರ ವೈಚಾರಿಕ ಚಿಂತನೆಗಳು ಪ್ರತಿಯೊಬ್ಬರ ಜೀವನದಲ್ಲಿ ಗುಣಮಟ್ಟದ ಜೀವನವನ್ನಾಗಿಸಲು ಪ್ರೇರಣೆ ನೀಡುತ್ತವೆ ಎಂದರು.

ದತ್ತಿ ಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಿದ ರಶ್ಮಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಎಚ್.ಎಂ.ಹರೀಶ, ಶಿಕ್ಷಕ ಮತ್ತಿಹಳ್ಳಿ ನಾಗರಾಜ ಮಾತನಾಡಿದರು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಎಇಒ ಎಚ್.ಎಂ.ಹಾಲಯ್ಯ, ಡಾ. ಮಮತಾ, ಎಸ್.ಎಂ.ವಿಜಯ್ ಕುಮಾರ, ಎಚ್.ಎಂ. ಗಿರೀಶ, ಎಚ್.ಎಂ. ಸುರೇಶ ಮತ್ತಿತರರು ಇದ್ದರು. ಶಿಕ್ಷಕ ಟಿ.ಕೆ. ಸಿದ್ದರಾಮೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊಂಬಾಳೆ ಮಂಜುನಾಥ ನಿರೂಪಿಸಿದರು.