ಶಿಗ್ಗಾಂವಿ ತಾಲೂಕಿನ ಕೆಂಗಾಪುರ ಗ್ರಾಮದೇವಿ ದೇವಸ್ಥಾನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಬಸವಾದಿ ಶರಣರ ನಡೆ- ನುಡಿ ಮಾಲಿಕೆ- ೨ರ ಕಾರ್ಯಕ್ರಮ ನಡೆಯಿತು.
ಶಿಗ್ಗಾಂವಿ: ಶರಣರ ಜೀವನ ತೆರೆದ ಪುಸ್ತಕದಂತೆ ಪಾರದರ್ಶಕವಾಗಿದ್ದು, ಶರಣರ ವಚನಗಳು ಬದುಕಿಗೆ ದಾರಿದೀಪವಾಗಿವೆ. ಅಂಥವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದತ್ತ ಸಾಗಬೇಕು ಎಂದು ಬಂಡಿವಾಡ ಸೀತಾಗಿರಿಯ ಸದ್ಗುರು ಸಮರ್ಥ ಡಾ. ಎ.ಸಿ. ವಾಲಿ ಮಹಾರಾಜರು ಹೇಳಿದರು.
ತಾಲೂಕಿನ ಕೆಂಗಾಪುರ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಬಸವಾದಿ ಶರಣರ ನಡೆ- ನುಡಿ ಮಾಲಿಕೆ- ೨ರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ನೇರ ನಡೆ, ನುಡಿ, ನಿಷ್ಠೆಯಿಂದ ಬದುಕುವುದು ಬಸವಾದಿ ಶರಣರ ಮೂಲ ತತ್ವವಾಗಿತ್ತು. ಅನ್ನದ ಮೂಲಕ ದೇಹದ ಹೊರಗೆ ದಾಸೋಹ ಉಣಬಡಿಸಿದರೆ, ಜ್ಞಾನದ ಮೂಲಕ ದೇಹದ ಒಳಗೂ ದಾಸೋಹ ಉಣಬಡಿಸುವ ಮೂಲಕ ಸಾರ್ಥಕತೆ ಮೆರೆದರು. ಜಾತೀಯತೆ, ಅಸಮಾನತೆ, ಶೋಷಣೆ ಇತ್ಯಾದಿ ತಾಂಡವವಾಡುತ್ತಿದ್ದ ೧೨ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ತತ್ವ, ಚಿಂತನೆಗಳ ಮೂಲಕ ಎಲ್ಲವನ್ನು ತೊಡೆದು ಹಾಕಿ ಜಾತ್ಯತೀತತೆ, ಸಮಾನತೆ ಸ್ಥಾಪಿಸಿದರು. ಅನುಭಾವ ಮಂಟಪದಲ್ಲಿ ಸ್ತ್ರೀಯರಿಗೆ ಪ್ರವೇಶ ಕಲ್ಪಿಸಿ ಸಮಾನತೆ ಕಾಪಾಡಿದರು. ಕತ್ತಲೆಯಿಂದ ಕೂಡಿದ್ದ ಅಂದಿನ ಶತಮಾನಕ್ಕೆ ದಿವ್ಯಚೇತನರಾಗಿ ಕಂಗೊಳಿಸಿದರಲ್ಲದೆ, ಎಲ್ಲೆಲ್ಲೂ ಶಾಂತಿ ನೆಲೆಸುವಂತೆ ಮಾಡಿ ಅಂದು, ಇಂದು, ಎಂದೆಂದೂ ಶ್ರೇಷ್ಠರಾಗಿದ್ದಾರೆ ಎಂದರು.ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ, ಕೇವಲ ದೇಹದ ಹೊರಗೆ ಶುಭ್ರವಾಗಿದ್ದರೆ ಸಾಲದು, ಆತ್ಮವೆಂಬುದನ್ನು ಪರಿಶುದ್ಧವಾಗಿಟ್ಟುಕೊಂಡರೆ ಜೀವನ ಸಾರ್ಥಕವಾಗುತ್ತದೆ. ದೇಹದ ಒಳಗೂ ವಿನಯ, ಹೊರಗೂ ವಿನಯದಿಂದ ಬಾಳಬೇಕು. ತನು, ಮನ, ಭಾವ ಶುದ್ಧಿಯಿಂದ, ಕಾಯಕ ನಿಷ್ಠೆಯಿಂದ ಬದುಕು ಸಾಗಿಸಿದಾಗ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಶರಣರು ಅರಿತು ಎಲ್ಲೆಡೆ ಸಾರಿದರು ಎಂದರು.
ವೇದಮೂರ್ತಿ ರೇವಣಸಿದ್ದಯ್ಯ ಹಿರೇಮಠ ಶಾಸ್ತ್ರಿಗಳು ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಸಿ.ಡಿ. ಯತ್ನಳ್ಳಿ, ಕಾರ್ಯಾಧ್ಯಕ್ಷ ಶಶಿಕಾಂತ ರಾಠೋಡ, ಕಲಾವಿದ ಬಸವರಾಜ ಶಿಗ್ಗಾವಿ, ರಮೇಶ ಹರಿಜನ, ಪ್ರಭುಗೌಡ ತೆಂಬದಮನಿ, ಶಂಬು ಕೇರಿ, ರವಿ ಕಡಕೋಳ ಇದ್ದರು. ಪವಿತ್ರಾ ಸಂಗಡಿಗರು ಪ್ರಾರ್ಥಿಸಿದರು. ಪಿಡಿಒ ವೈ.ಬಿ. ಅಣ್ಣಿಗೇರಿ ಕಾರ್ಯಕ್ರಮ ನಿರ್ವಹಿಸಿದರು.