ಸಾರಾಂಶ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಿರಂತರವಾಗಿ ಸಮಾಜಮುಖಿ ಕೆಲಸದ ಮೂಲಕ ಗುರುತಿಸಿಕೊಂಡಿದ್ದು, ವಾತ್ಸಲ್ಯ ಯೋಜನೆಯಡಿ ಕಡುಬಡವರಿಗೆ ಮನೆ ನಿರ್ಮಾಣ ಮಾಡಿಕೊಡುತ್ತಿರುವ ಕಾರ್ಯ ಶ್ಲಾಘನೀಯ.
ಧರ್ಮಸ್ಥಳ ಸಂಘದಿಂದ ವಾತ್ಸಲ್ಯ ಮನೆ ಹಸ್ತಾಂತರ । ಫಲಾನುಭವಿಯ ಮೊಮ್ಮಗನ ಶಿಕ್ಷಣಕ್ಕೆ ₹೨೫೦೦೦ ನೆರವು ನೀಡಿದ ಕೆಎಂಎಫ್ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಿರಂತರವಾಗಿ ಸಮಾಜಮುಖಿ ಕೆಲಸದ ಮೂಲಕ ಗುರುತಿಸಿಕೊಂಡಿದ್ದು, ವಾತ್ಸಲ್ಯ ಯೋಜನೆಯಡಿ ಕಡುಬಡವರಿಗೆ ಮನೆ ನಿರ್ಮಾಣ ಮಾಡಿಕೊಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಕೆಎಂಎಫ್ ಅಧ್ಯಕ್ಷ ಎಸ್. ಭೀಮಾ ನಾಯ್ಕ ತಿಳಿಸಿದರು.ಧರ್ಮಸ್ಥಳ ಸಂಘದಿಂದ ವಸತಿರಹಿತರಿಗಾಗಿ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗುತ್ತಿದ್ದು, ತಾಲೂಕಿನ ಮಸಾರಿ ನೆಲ್ಕುದ್ರಿ ಗ್ರಾಮದ ರೇಣುಕಮ್ಮಗೆ ಮನೆ ಹಸ್ತಾಂತರಿಸಿ ಮಾತನಾಡಿದರು. ಕಡುಬಡವರನ್ನು ಗುರುತಿಸಿ ಸಹಾಯ ಮಾಡುತ್ತಿರುವುದು ನಿಜಕ್ಕೂ ಸಂತೋಷಕರ. ಸಂಘದವರು ಅಂತರ್ಜಲ ಹೆಚ್ಚಿಸಲು ರಾಜ್ಯಾದ್ಯಂತ ಕೆರೆಕಟ್ಟೆಗಳ್ನು ನಿರ್ಮಿಸಿ ಮಾದರಿಯಾಗಿದ್ದಾರೆ. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ವೀರೇಂದ್ರ ಹೆಗಡೆಯವರು ನಿರಂತರವಾಗಿ ಧನಸಹಾಯ ನೀಡುತ್ತಾ ಬಂದಿದ್ದಾರೆ.ರಾಜ್ಯದಲ್ಲಿ ನಿತ್ಯವೂ ಕೋಟಿ ಲೀಟರ್ ಹಾಲು ಉತ್ಪಾದನೆ ಮಾಡಿದ ಹಿರಿಮೆ ಹೊಂದಿರುವ ಕೆಎಂಎಫ್ ಸಾಧನೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘದ ಸಹಕಾರವೂ ಇದೆ. ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ತುಂಬಿಸಿದ ಫಲವಾಗಿ ಸುತ್ತಲಿನ ಗ್ರಾಮದಲ್ಲಿ ಅಂತರ್ಜಲ ಹೆಚ್ಚಿರುವುದು ಸಂತಸ ತಂದಿದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಿದ ಸಾರ್ಥಕತೆ ಇದೆ. ಅಧಿಕಾರ ಇರಲಿ ಇಲ್ಲದಿರಲಿ ಜನಸೇವೆ ನಿರಂತರವಾಗಿರುತ್ತದೆ. ನೊಂದವರಿಗೆ ಸರ್ಕಾರ ಮತ್ತು ವೈಯಕ್ತಿಕವಾಗಿ ಅಗತ್ಯ ನೆರವು ನೀಡಲು ಹಿಂದೇಟು ಹಾಕುವುದಿಲ್ಲ. ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಿ ಎಂದರು. ₹೨೫೦೦೦ ಸಹಾಯ:ಇದೇ ವೇಳೆ ಭೀಮಾ ನಾಯ್ಕ ರೇಣುಕಮ್ಮರ ಮೊಮ್ಮಗನ ವಿದ್ಯಾಭ್ಯಾಸಕ್ಕೆ ₹೨೫,೦೦೦ ವೈಯಕ್ತಿಕ ಸಹಾಯಧನ ನೀಡಿ, ನಿನ್ನ ಮುಂದಿನ ವಿದ್ಯಾಭ್ಯಾಸದ ಹೊಣೆ ನನ್ನದು ಎಂದು ಹೇಳಿದರು. ಇವರ ಮಾತಿಗೆ ಭಾವುಕರಾದ ರೇಣುಕಮ್ಮಳನ್ನು ಮಾಜಿ ಶಾಸಕರು ಸಂತೈಸಿದರು. ಸಂಘದ ಜಿಲ್ಲಾ ನಿರ್ದೇಶಕ ಸತೀಶ್‌ಶೆಟ್ಟಿ, ತಾಲೂಕು ಯೋಜನಾಧಿಕಾರಿ ಚಂದ್ರಶೇಖರ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ತಾಪಂ ಮಾಜಿ ಸದಸ್ಯ ಚಿಂತಪಳ್ಳಿ ದೇವೇಂದ್ರಪ್ಪ, ಸಂಘದ ಜ್ಞಾನವಿಕಾಸ ಸಮನ್ವಯಾಧಿಕಾರಿ ಸರಸ್ವತಿ, ಪುರಸಭೆ ಸದಸ್ಯರಾದ ಪವಾಡಿ ಹನುಮಂತಪ್ಪ, ರಾಜೇಶ್ ಬ್ಯಾಡಗಿ, ಗ್ರಾಪಂ ಮಾಜಿ ಸದಸ್ಯರಾದ ಡಿಶ್ ಮಂಜುನಾಥ, ಸೆರಗಾರ ಹುಚ್ಚಪ್ಪ, ತ್ಯಾವಣಗಿ ಕೊಟ್ರೇಶ, ವಿಜಯ್‌ಕುಮಾರ, ಸಿಕಂದರ್, ಬದಾಮಿ ನಟರಾಜ, ಶಿವಕುಮಾರ, ರಶ್ಮಿ, ಪ್ರಭುದೇವ, ವಾಲೇಕರ್ ಯಮುನಪ್ಪ ಇತರರಿದ್ದರು.