ಸಾರಾಂಶ
ಎರಡು ದೇವಾಲಯಗಳ ಲೋಕಾರ್ಪಣೆ । ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವ
ಕನ್ನಡಪ್ರಭ ವಾರ್ತೆ ಕಡೂರುಕಠಿಣ ಪರಿಶ್ರಮ ಪಡುವ ಲಂಬಾಣಿ ಸಮಾಜವು ದೇವತಾ ಕಾರ್ಯಗಳಲ್ಲಿ ಪಾಲ್ಗೊಂಡು ದೇವರಲ್ಲಿ ನಂಬಿಕೆ ಹೊಂದಿ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿರುವುದು ಸಂತಸದ ಸಂಗತಿ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲೂಕಿನ ಸಿಂಗಟಗೆರೆ ಹೋಬಳಿಯ ಲಕ್ಷ್ಮೀ ಪುರದಲ್ಲಿ (ಸೋಮನಹಳ್ಳಿ ತಾಂಡ್ಯ) ಸೋಮವಾರ ಶ್ರೀ ಸೇವಾಲಾಲ್ ಯುವಕರ ಸೇವಾಟ್ರಸ್ಟ್‌ನಿಂದ ಶ್ರೀ ಪ್ಲೇಗಿನಮ್ಮ, ಶ್ರೀಸೇವಾಲಾಲ್ ದೇವಾಲಯಗಳ ಲೋಕಾರ್ಪಣೆ ಹಾಗೂ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವಗಳಲ್ಲಿ ಬಾಗಹಿಸಿ ಮಾತನಾಡಿದರು.ಕ್ಷೇತ್ರದ ಶಾಸಕನಾಗಿ ನಾನೂ ಕೂಡ ನನ್ನ ಕರ್ತ್ಯವದ ಭಾಗವಾಗಿ ಈ ಭಾಗದ ಸೋಮನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 10 ಕೋಟಿ ರು. ವೆಚ್ಚದಲ್ಲಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ವೈ.ಮಲ್ಲಾಪುರದಿಂದ ಸೋಮನಹಳ್ಳಿವರೆಗೆ ರಸ್ತೆ ಡಾಂಬರೀಕರಣ ಹಾಗೂ ಯರದಕೆರೆಯಿಂದ ಸೋಮನಹಳ್ಳಿಗೆ 4 ಕೋಟಿ ರು.ನ ಮತ್ತೊಂದು ಸಂಪರ್ಕ ರಸ್ತೆ ಸೇರಿದಂತೆ 8 ಕೋಟಿ ರು.ನಲ್ಲಿ ಡಾಂಬರ್ ರಸ್ತೆಗಳ ನಿರ್ಮಾಣ ಮಾಡಲಾಗಿದೆ. ಶ್ರೀ ಆಲಘಟ್ಟಮ್ಮ ದೇವಾಲಯದ ಸುತ್ತ ಕಾಂಕ್ರೀಟ್ ರಸ್ತೆ ಮಾಡಲಾಗಿದೆ ಎಂದರು.
ದಲಿತ ವರ್ಗವು ಹೆಚ್ಚಾಗಿರುವ ಈ ಭಾಗದ ಜನತೆ ತಮ್ಮನ್ನು ಪ್ರೀತಿಯಿಂದ ಕಂಡು ತಮಗೆ ಚುನಾವಣೆಯಲ್ಲಿ ಸಹಕಾರ ನೀಡುವ ಮೂಲಕ ಶಾಸಕನಾಗಲು ಮತಗಳ ಕೊಡುಗೆ ನೀಡಿದೆ. ಈ ನಿಟ್ಟಲ್ಲಿ ಜಂಟಿ ಪಂಚಾಯಿತಿಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಶಾಶ್ವತ ನೀರಾವರಿಗೆ ಆದ್ಯತೆ ನೀಡುತ್ತಿದ್ದು ನೀರಿನ ಸಂಗ್ರಹಗಾರ ತೊಟ್ಟಿ ನಿರ್ಮಿಸಲಾಗುತ್ತದೆ. ಇದರಿಂದ ಮಲ್ಲಾಘಟ್ಟ ಕೆರೆ ತುಂಬುವ ಜತೆಗೆ ವಿಷ್ಣು ಸಮುದ್ರದ ಕೆರೆ ನಿರಂತರವಾಗಿ ತುಂಬುವುದರಿಂದ ಈ ಭಾಗದ ರೈತರಿಗೆ ನೀರಾವರಿಯ ಅನುಕೂಲವಾಗಲಿದೆ ಎಂದರು.ಕಡೂರು ಸಮೀಪದ ನಗದಿಯತ್ ಕಾವಲಿನಲ್ಲಿ ಗಾರ್ಮೆಂಟ್ಸ್ ಆಗುತ್ತಿದ್ದು ಸುತ್ತಲಿನ ಗ್ರಾಮೀಣ ಭಾಗದ ಸಾವಿರಾರು ಮಹಿಳೆಯರಿಗೆ ಉದ್ಯೋಗ ದೊರೆಯಲಿದೆ. ಸೇವಾಲಾಲ್‌ರನ್ನು ಆರಾಧ್ಯ ದೈವದಂತೆ ಕಾಣುತಿದ್ದು, ಸೇವಾಲಾಲ್ ಅವರು ಲಂಬಾಣಿ ಸಮಾಜದ ಸುಧಾರಣೆಗೆ ಶ್ರಮಿಸಿದ ಮಹಾನ್ ಸಂತರಾಗಿದ್ದಾರೆ ಎಂದು ಹೇಳಿದರು.
ಚಿತ್ರದುರ್ಗದ ಬಂಜಾರ ಪೀಠದ ಶ್ರೀಸರ್ದಾರ್ ಸೇವಾಲಾಲ್ ಸ್ವಾಮೀಜಿ ಸಮಾಜದ ಸಂಘಟನೆ ಕುರಿತು ಮಾತನಾಡಿ ಸಮಾಜಕ್ಕೆ ಸಂದೇಶ ನೀಡಿದರು. ಕೆ.ಬಿದರೆ ದೊಡ್ಡಮಠದ ಪ್ರಭು ಕುಮಾರ ಸ್ವಾಮೀಜಿ ಸಂದೇಶ ನೀಡಿದರು. ಎರಡು ದಿನಗಳ ಕಾಲ ದೇವಾಲಯಗಳ ಲೋಕಾರ್ಪಣೆಯ ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ಪೂಜೆಗಳು, ಹೋಮಗಳು ನಡೆದವು.ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷ ಎಸ್.ಆರ್.ರಾಜಾನಾಯ್ಕ,ಸಮಾಜದ ಮುಖಂಡರಾದ ಕುಮಾರ ನಾಯ್ಕ, ಪ್ರಕಾಶನಾಯ್ಕ, ಸತೀಶ್ ನಾಯ್ಕ, ಗಣೇಶನಾಯ್ಕ, ಶ್ರೀನಿವಾಸನಾಯ್ಕ, ಗಿರೀಶ್, ಶರತ್ ಯಾದವ್ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.