ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಜನ ಸಾಮಾನ್ಯರಿಗೂ ರಾಜಯೋಗ ಕಲಿಸುವ ಮತ್ತು ಆಧ್ಯಾತ್ಮಿಕತೆ ತುಂಬುವ ಕೆಲಸ ಮಾಡುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ನಾವು ಪರೋಪಕಾರಕ್ಕಾಗಿ ಬದುಕಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ. ನಮ್ಮ ಬದುಕಿಗಿಂತ ಸಮಾಜದ ಏಳಿಗೆಯೇ ಮುಖ್ಯ ಎಂದರು.
ಜಿಲ್ಲೆಯ ಜನರು ನಂಬಿದವರನ್ನು ಕೈಬಿಡುವುದಿಲ್ಲ ಎಂಬುದಕ್ಕೆ ನಾನು ಸನ್ಯಾಸತ್ವ ಸ್ವೀಕರಿಸಿದ ಅಲ್ಪ ಅವಧಿಯಲ್ಲಿ ಹಲವು ಉದಾಹರಣೆ ಸಿಕ್ಕಿವೆ. ಈ ಹಿಂದೆ ತಾವು ನಾಗಮಂಗಲದಲ್ಲಿ ತಹಸೀಲ್ದಾರ್ ಆಗಿದ್ದಾಗಲೂ ತಾಲೂಕಿನ ಜನರು ಅಪಾರ ಅಭಿಮಾನವನ್ನು ಹೊಂದಿದ್ದು, ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.ಎಲ್ಲಾ ಅವಕಾಶಗಳನ್ನು ಬಿಟ್ಟು ಆಧ್ಯಾತ್ಮಿಕತೆಯ ಕಡೆಗೆ ಬಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ನಮಗೂ ಪ್ರೇರಣೆಯಾಗಿದ್ದಾರೆ. ತಾಲೂಕಿನ ಜನರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಲು ಸದಾ ಮುಂದಿರುತ್ತಾರೆ. ಇಲ್ಲಿನ ಜನರ ಹೃದಯ ಶ್ರೀಮಂತಿಕೆ ಪ್ರಶಂಸನೀಯವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರು ಹಳೆ ಮೈಸೂರು ಭಾಗದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರು. ನಂತರ ಧಾರ್ಮಿಕ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಆಧ್ಯಾತ್ಮಿಕ ಚಿಂತಕರಾಗಿ ಜನಸೇವೆ ಮಾಡುವ ಹಂಬಲ ಹೊಂದಿದ್ದಾರೆ ಎಂದರು.ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಜನರನ್ನು ಆಧ್ಯಾತ್ಮಿಕದ ಕಡೆಗೆ ಕರೆದೊಯ್ಯುವ ಮೂಲಕ ಮನಃಶಾಂತಿ, ನೆಮ್ಮದಿ ತರುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತ ನ್ಯಾಯಾಧೀಶ ಚಂದ್ರಶೇಖರಯ್ಯ ಮಾತನಾಡಿ, ಹೇಗೆ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳು ಆದಿಚುಂಚನಗಿರಿ ಮಠವನ್ನು ಜಗತ್ಪ್ರಸಿದ್ಧಿಯಾಗುವಂತೆ ಮಾಡಿದ್ದಾರೆಯೋ ಅದೇ ರೀತಿ ವಿಶ್ವ ಒಕ್ಕಲಿಗರ ಮಠವನ್ನೂ ಕೂಡ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರು ಬೆಳೆಸುವ ಕೆಲಸ ಮಾಡಬೇಕಿದೆ ಎಂದರು.ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಜಿಲ್ಲಾ ಸಂಚಾಲಕಿ ರಾಜಯೋಗಿನಿ ಶಾರದಕ್ಕ ಮಾತನಾಡಿದರು. ನಾಗಮಂಗಲದ ಗೆಳೆಯರು ದೇಣಿಗೆ ಸಂಗ್ರಹಿಸಿದ್ದ ಸುಮಾರು ಒಂದೂವರೆ ಲಕ್ಷ ರು.ಗಳನ್ನು ವಿಶ್ವ ಒಕ್ಕಲಿಗರ ಮಠಕ್ಕೆ ನೀಡಿದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ಪಟ್ಟಣದ ಮಾದರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ವಕೀಲ ಟಿ.ಕೆ.ರಾಮೇಗೌಡ, ಸಾವಯವ ಕೃಷಿ ಮಾರುಕಟ್ಟೆ ಮಂಡಳಿ ರಾಜ್ಯಾಧ್ಯಕ್ಷ ಇ.ಎನ್.ಉಮೇಶ್, ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್‌ಗೌಡ, ಮುಖಂಡರಾದ ತಿಮ್ಮರಾಯಿಗೌಡ, ಎಸ್.ಎಂ.ಕೃಷ್ಣಮೂರ್ತಿ ಸೇರಿದಂತೆ ಹಲವರು ಇದ್ದರು.