ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ನಮ್ಮ ಮಾತೃಭಾಷೆ ಉಳಿಸಿ, ಬೆಳೆಸುವಲ್ಲಿ ಹಾಗೂ ಕನ್ನಡಿಗರಿಗೆ ಅನ್ಯಾಯವಾದಾಗ ಬೀದಿಗಿಳಿದು ಹೋರಾಟ ಮಾಡುವ ಮೂಲಕ ನ್ಯಾಯ ಒದಗಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಇನ್ನಿತರ ಕನ್ನಡಪರ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದು ಶಿಕ್ಷಣಪ್ರೇಮಿ ಹಾಗೂ ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಶಂಕರ ಹಂಜಿ ಹೇಳಿದರು.ಪಟ್ಟಣದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಎಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ, ತಾಲೂಕು ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಶುದ್ಧ ಕನ್ನಡ ಭಾಷಣ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂಗ್ಲಿಷ್ ಭಾಷೆಯ ವ್ಯಾಮೋಹ ಹೆಚ್ಚಾಗುತ್ತಿರುವ ಇಂದಿನ ದಿನಮಾನಗಳಲ್ಲಿ ನಮ್ಮ ಮಾತೃಭಾಷೆ ಕನ್ನಡ ಉಳಿಸಿ, ಬೆಳೆಸಬೇಕು. ಸುಮಾರು 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆ ದೇಶ ವಿದೇಶಗಳಲ್ಲಿಯೂ ಬೆಳವಣಿಗೆ ಹೊಂದಿದೆ. ನಾನು ಇತ್ತೀಚಿಗೆ ಆಸ್ಟ್ರೇಲಿಯಾ ದೇಶಕ್ಕೆ ಹೋದಾಗ ಅಲ್ಲಿನ ಶಾಲೆಯೊಂದರಲ್ಲಿ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಕನ್ನಡ ನಾಮಫಲಕ ಹಾಕಿರುವುದನ್ನು ಕಂಡು ವಿದೇಶದಲ್ಲಿಯೂ ನಮ್ಮ ಭಾಷೆ ಇರುವುದನ್ನು ನೋಡಿ ನನಗೆ ಬಹಳಷ್ಟು ಹೆಮ್ಮೆ ಮತ್ತು ಖುಷಿ ಎನಿಸಿತು ಎಂದರು.ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಹೇಬ ತೆಲಸಂಗ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಭಾಷೆ ವಿಶ್ವದಲ್ಲಿಯೇ ಶ್ರೀಮಂತವಾಗಿದೆ. ಸ್ವಾಭಿಮಾನದಿಂದ ನಾವೆಲ್ಲರೂ ಮಾತೃಭಾಷೆಯನ್ನು ನಿತ್ಯ ಬಳಸುವ ಮೂಲಕ ಉಳಿಸಬೇಕು ಎಂದು ಮನವಿ ಮಾಡಿದರು.ಕರವೇ ತಾಲೂಕು ಘಟಕದ ಅಧ್ಯಕ್ಷ ಉದಯ ಮಾಕಾಣಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಗನ್ನಾಥ ಬಾಮನೆ, ರಾಜು ವಾಘಮಾರೆ, ಸಿದ್ದು ಹಂಡಗಿ, ಡಿಡಿ ಮೇಕನಮರಡಿ, ವಿಜಯ ಉದ್ದಾರ, ಬಿ.ಪಿ.ಲಡಗಿ, ಡಾ.ಅರ್ಚನಾ ಅಥಣಿ, ಮಹಾಂತೇಶ ಹಲವಾಯಿ, ಅನಿಲ ಒಡೆಯರ, ಎಸ್.ಕೆ.ಹೊಳೆಪ್ಪನವರ, ಶಿವಶಂಕರ ಬಡಿಗೇರ, ಪಿ.ಎಲ್.ಪೂಜಾರಿ, ವಿಜಯ ಕಾಂಬಳೆ, ಎಂ.ಡಿ.ಮಾಂಗ, ಸುವರ್ಣ ಬಡಕಂಬಿ, ಪರಶುರಾಮ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಡಿ.7 ರಂದು ಬಹುಮಾನ ವಿತರಣೆ
ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಕರವೇ ಸಂಘಟನೆಯಿಂದ ಹಮ್ಮಿಕೊಳ್ಳಲಾಗಿದ್ದ ಶುದ್ಧ ಕನ್ನಡ ಭಾಷಣ ಸ್ಪರ್ಧೆಯಲ್ಲಿ 160ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಪ್ರಾಥಮಿಕ ವಿಭಾಗದಲ್ಲಿ ಕು.ಕುಪವಾಡ ಪ್ರಥಮ, ಕು.ಶ್ರಾವಣಿ ಅನಗುಲೆ ದ್ವಿತೀಯ, ಕು.ರಶ್ಮಿತಾ ರಾಥೋಡ ತೃತೀಯ ಸ್ಥಾನ ಪಡೆದುಕೊಂಡರು. ಪ್ರೌಢಶಾಲಾ ವಿಭಾಗದಲ್ಲಿ ಕು.ಸಾಕ್ಷಿ ಮಠಪತಿ ಪ್ರಥಮ, ಭೂಮಿಕಾ ಸೌಂದಲಗೆಕರ ದ್ವಿತೀಯ, ವಿಜಯಲಕ್ಷ್ಮೀ ಹಳ್ಳೂರ ತೃತೀಯ ಸ್ಥಾನ ಪಡೆದುಕೊಂಡರು. ಕಾಲೇಜ ವಿಭಾಗದಲ್ಲಿ ಕು.ಮಹಾದೇವಿ ಹೊನಕಡಬಿ ಪ್ರಥಮ, ಕು.ಸಾವಿತ್ರಿ ಯಲ್ಲಟ್ಟಿ ದ್ವಿತೀಯ, ಲಕ್ಷ್ಮಣ ಯಡ್ರಾವಿ ತೃತೀಯ ಸ್ಥಾನ ಪಡೆದುಕೊಂಡರು.ವಿಶ್ವವ್ಯಾಪಿಯಾಗಿರುವ ನಮ್ಮ ಕನ್ನಡ ಭಾಷೆಯನ್ನು ನಮ್ಮ ಮಕ್ಕಳಿಗೆ ಕಲಿಸಿಕೊಟ್ಟಾಗ ಕನ್ನಡ ಉಳಿಸಿ ಬೆಳೆಸಲು ಸಾಧ್ಯವಿದೆ. ನಿತ್ಯ ಮನೆಯಲ್ಲಿ ಕನ್ನಡವನ್ನು ಬಳಸುವಂತಾಗಬೇಕು. ಇದು ನಮ್ಮ ಅನ್ನದ ಭಾಷೆ, ನಮ್ಮ ಬದುಕಿನ ಭಾಷೆ ಎಂದು ಜನ್ಮ ನೀಡಿದ ತಾಯಿಯನ್ನು ಪ್ರೀತಿಸಿದಂತೆ ನಮ್ಮ ಮಾತೃಭಾಷೆಯನ್ನು ಪ್ರತಿಯೊಬ್ಬರು ಪ್ರೀತಿಸಬೇಕು. ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹೋರಾಟದ ಜತೆಗೆ ಗಡಿಭಾಗದಲ್ಲಿ ಕನ್ನಡವನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
-ಶಿವಶಂಕರ ಹಂಜಿ, ಶಿಕ್ಷಣಪ್ರೇಮಿ ಹಾಗೂ ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು.ಗಡಿ ಭಾಗದಲ್ಲಿ ಇಂದು ಕನ್ನಡ ಶಾಲೆಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಮುಚ್ಚುವ ಸ್ಥಿತಿಯಲ್ಲಿವೆ. ಸರ್ಕಾರ ಅವುಗಳನ್ನು ಪುನಃ ಚೇತನ ಗೊಳಿಸುವ ಕನ್ನಡ ಶಾಲೆಗಳನ್ನು ಉಳಿಸಬೇಕು. ಕರ್ನಾಟಕ ರಕ್ಷಣಾ ವೇದಿಕೆಯಿಂದ ಶುದ್ಧ ಕನ್ನಡ ಭಾಷಣ ಸ್ಪರ್ಧೆಯನ್ನು ಪ್ರಾಥಮಿಕ ವಿಭಾಗ , ಪ್ರೌಢಶಾಲಾ ವಿಭಾಗ, ಕಾಲೇಜು ವಿಭಾಗ ಎಂಬ 3 ಹಂತಗಳಲ್ಲಿ ನಡೆಸಲಾಗುತ್ತಿದೆ. ಪ್ರಾಯೋಜಕರಿಂದ ನಗದು ಬಹುಮಾನ ನೀಡಲಾಗುತ್ತಿದ್ದು, ಬರುವ ಡಿ.7 ರಂದು ನಡೆಯುವ ಗಡಿನಾಡು ಕನ್ನಡ ಉತ್ಸವ ಸಮಾರಂಭದಲ್ಲಿ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು.
-ಅಣ್ಣಾಸಾಹೇಬ ತೆಲಸಂಗ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))