ಕನ್ನಡ ಉಳಿಸುವ ಕಾರ್ಯ ಎಲ್ಲೆಡೆ ನಡೆಯಲಿ: ಶೋಭಾ ಮೇಟಿ

| Published : Nov 07 2025, 02:45 AM IST

ಸಾರಾಂಶ

ಕನ್ನಡವು ನಮ್ಮ ಬಾಂಧವ್ಯ ಹೆಮ್ಮೆ ಮತ್ತು ಅಸ್ತಿತ್ವದ ಗುರುತಾಗಿದ್ದು, ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ.

ಗದಗ: ಕನ್ನಡ ನಮ್ಮ ಉಸಿರು. ಕನ್ನಡಕ್ಕೆ ತನ್ನದೇ ಆದ ಅಸ್ಮಿತೆ ಇದ್ದು, ಅದು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಕನ್ನಡವನ್ನು ಬಳಸುವ ಅವಶ್ಯಕತೆಗಿಂತ ಎಲ್ಲರೂ ಕನ್ನಡತನವನ್ನು ಬಳಸಿಕೊಂಡಾಗ ಮಾತ್ರ ಕನ್ನಡವನ್ನು ಕಾಪಾಡಲು ಸಾಧ್ಯ ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಶೋಭಾ ಬಸವರಾಜ ಮೇಟಿ ತಿಳಿಸಿದರು.ನಗರದ ಮುಳಗುಂದ ನಾಕಾ ಬಳಿಯ ಅಡವಿಂದ್ರಸ್ವಾಮಿ ಮಠದ ಶಿವಾನುಭವ ಸಮಿತಿ ಜಿಲ್ಲಾ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆದ 341ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ನಿಮಿತ್ತ ನಡೆದ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿಯಲ್ಲಿ ಮಾತನಾಡಿದರು. ಮಕ್ಕಳ ಸಾಹಿತಿ ಡಾ. ರಾಜೇಂದ್ರ ಎಸ್. ಗಡಾದ ಮಾತನಾಡಿ, ಕನ್ನಡವು ನಮ್ಮ ಬಾಂಧವ್ಯ ಹೆಮ್ಮೆ ಮತ್ತು ಅಸ್ತಿತ್ವದ ಗುರುತಾಗಿದ್ದು, ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಾಡು ಸಾಕಷ್ಟು ರಾಜಮನೆತನಗಳನ್ನು, ಅರಸರನ್ನು ಹೊಂದಿದಂತೆ ಅನೇಕ ಕವಿ, ಕಲಾವಿದರನ್ನು ಹೊಂದಿರುವ ಪುಣ್ಯ ಭೂಮಿಯಾಗಿದೆ ಎಂದರು. ಬೇಂದ್ರೆ, ಕುವೆಂಪು, ಕರ್ಕಿ ಗೋವಿಂದ್ ಪೈ, ಸಿದ್ದಯ್ಯ ಪುರಾಣಿಕ, ಹುಯಿಲಗೋಳ ನಾರಾಯಣರಾಯರು, ನಿಸಾರ್ ಅಹ್ಮದ್, ಜಿ.ಪಿ. ರಾಜರತ್ನಂ ಮೊದಲಾದವರು ತಮ್ಮ ಕಾವ್ಯದ ಮೂಲಕ ಹೇಗೆ ಕನ್ನಡವನ್ನು ಕಟ್ಟುವ ಕಾರ್ಯ ಕೈಗೊಂಡರೆಂಬುದನ್ನು ಅನೇಕ ಉದಾಹರಣೆಗಳ ಮೂಲಕ ವಿವರಿಸಿದರು.

ಮಹಿಳಾ ಕವಿಗೋಷ್ಠಿಯಲ್ಲಿ ಪ್ರೊ. ಶಕುಂತಲಾ ಸಿಂಧೂರ, ಡಾ. ರಶ್ಮಿ ಅಂಗಡಿ, ಡಾ. ಪದ್ಮಾ ಕಬಾಡಿ, ಜ್ಯೋತಿ ಎಂ., ಲೋಣಿ, ನೀಲಮ್ಮ ಅಂಗಡಿ, ರತ್ನಾ ಬದಿ, ಶಾರದಾ ಬಾಣದ, ಗೀತಾ ಹೂಗಾರ ಅವರು ಸ್ವರಚಿತ ನಾಡಪ್ರಭು ಬಿಂಬಿಸುವ ಕವಿತೆಗಳನ್ನು ಮಂಡಿಸಿದರು.ಮಂಗಳಾ ಯಾನಮಶೆಟ್ಟಿ, ಎಂ.ವಿ. ಕುಂದ್ರಾಳಹಿರೇಮಠ, ಆದ್ಯಾ, ಮನಸ್ವಿ ಅವರು ಕನ್ನಡ ನಾಡು- ನುಡಿ ಕುರಿತಾದ ಗೀತೆಗಳನ್ನು ಗಾಯನದ ಮೂಲಕ ಪ್ರಸ್ತುತಪಡಿಸಿದರು. ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಮಾತನಾಡಿದರು. ವಿನೋದ್ ಕವಲನಾಯಕ್, ಕುರಟ್ಟಿ, ಪ್ರಭುಗೌಡ ಪಾಟೀಲ, ಪ್ರೊ. ಕೆ.ಎಚ್. ಬೇಲೂರು, ಬಿ.ಎಂ. ಬಿಳೆಯಲಿ, ಸುಶೀಲಾ ಕೋಟಿ, ನಿಂಗಪ್ಪ ಬಳಿಗಾರ, ಎಲ್.ಎಸ್. ನೀಲಗುಂದ, ವೀರೇಶ್ವರ ಸ್ವಾಮಿಗಳು ಹೊಸಳ್ಳಿಮಠ, ನಿಡುಗುಂದಿ, ಯಶೋದಾ ಗಿಡ್ನಂದಿ ಸೇರಿದಂತೆ ಅನೇಕರು ಇದ್ದರು. ಗೀತಾ ಹೂಗಾರ ಪ್ರಾರ್ಥಿಸಿದರು. ಬಿ.ಬಿ. ಪಾಟೀಲ ವಂದಿಸಿದರು.