ಹನೂರು ಶೈಕ್ಷಣಿಕ ವಲಯದಲ್ಲಿ ಶಿಕ್ಷಕರ ಕೆಲಸ ಶ್ಲಾಘನೀಯ: ಶಾಸಕ ಎಂ.ಆರ್.ಮಂಜುನಾಥ್

| Published : Sep 22 2024, 01:50 AM IST

ಹನೂರು ಶೈಕ್ಷಣಿಕ ವಲಯದಲ್ಲಿ ಶಿಕ್ಷಕರ ಕೆಲಸ ಶ್ಲಾಘನೀಯ: ಶಾಸಕ ಎಂ.ಆರ್.ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಭೌಗೋಳಿಕವಾಗಿ ವಿಸ್ತೀರ್ಣ ಹೊಂದಿರುವ ಗುಡ್ಡಗಾಡು ಪ್ರದೇಶ ಹೆಚ್ಚಾಗಿರುವ ಹನೂರು ಶೈಕ್ಷಣಿಕ ವಲಯದಲ್ಲಿ ಶಿಕ್ಷಕರ ಕೆಲಸ ಅತ್ಯಂತ ಶ್ಲಾಘನೀಯವಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು. ಹನೂರಿನಲ್ಲಿ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರುಭೌಗೋಳಿಕವಾಗಿ ವಿಸ್ತೀರ್ಣ ಹೊಂದಿರುವ ಗುಡ್ಡಗಾಡು ಪ್ರದೇಶ ಹೆಚ್ಚಾಗಿರುವ ಹನೂರು ಶೈಕ್ಷಣಿಕ ವಲಯದಲ್ಲಿ ಶಿಕ್ಷಕರ ಕೆಲಸ ಅತ್ಯಂತ ಶ್ಲಾಘನೀಯವಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.

ಪಟ್ಟಣದ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.ಹನೂರು ತಾಲೂಕಿನ ಉದ್ದಗಲಕ್ಕೂ ಕಾಡಂಚಿನ ಪ್ರದೇಶಗಳಲ್ಲಿಯೂ ಸಹ ಶಿಕ್ಷಕರ ಸೇವೆ ಅನನ್ಯವಾಗಿದೆ ನಡೆಯುತ್ತಿದೆ. ಇವರಿಂದಲೇ ನಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಮುಂದಾಗುತ್ತಿದ್ದಾರೆ. ಹಾಗಾಗಿ ಶಿಕ್ಷಕರ ಸೇವೆ ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಜೊತೆಗೆ ಹನೂರು ತಾಲೂಕಿನಲ್ಲಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ ಗುರು ಭವನ ಮಾಡಲು ಈಗಾಗಲೇ ತಹಸೀಲ್ದಾರ್ ಪ್ರಯತ್ನ ಮಾಡಿದ್ದು ಖಂಡಿತ ಮುಂದಿನ ಶಿಕ್ಷಕರ ದಿನಾಚರಣೆಯ ಶೈಕ್ಷಣಿಕ ಕಾರ್ಯಕ್ರಮದ ವೇಳೆಗೆ ಭವನದ ಜಾಗವನ್ನು ಕೊಡಲು ಮುಂದಾಗುತ್ತೇವೆ ಎಂದರು.

ಕಸಾಪ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಬಿ.ಎಸ್.ವಿನಯ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೇ ಪೋಷಕರು ಖಾಸಗಿ ಶಾಲೆಯ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಹಾಗಾಗಿ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆ ಉಳಿಸಿ ಬೆಳೆಸಬೇಕು. ಹನೂರು ಭಾಗದ ಅನೇಕ ಕವಿಗಳು ಹನೂರು ತಾಲೂಕಿನ ಹೆಸರನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದರು.

ತಹಸೀಲ್ದಾರ್ ಗುರುಪ್ರಸಾದ್ ಮಾತನಾಡಿ, ವೃತ್ತಿಯನ್ನು ನಾನು ಸಹ ಶಿಕ್ಷಕನಾಗಿ ಪ್ರಾರಂಭ ಮಾಡಿದೆ. ಹಾಗಾಗಿ ಅತ್ಯಂತ ಖುಷಿ ತೃಪ್ತಿ ಕೊಡುವ ಹುದ್ದೆ ಶಿಕ್ಷಕರದ್ದು. ಮಕ್ಕಳಿಗೆ ಒಳ್ಳೆಯ ಶಿಕ್ಷಕರು ಸಿಕ್ಕಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ ಎಂದು ಅಭಿಮತ ವ್ಯಕ್ತಪಡಿಸಿದರು.

ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೆಗೌಡ, ಪಪಂ ಅಧ್ಯಕ್ಷೆ ಮುತಾಜ್ ಬೇಗಂ, ಸದಸ್ಯರಾದ ಮಹೇಶ್, ಹರೀಶ್, ಸಂಪತ್ ಕುಮಾರ್, ಬಿಇಒ ಗುರುಲಿಂಗಯ್ಯ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ವೆಂಕಟೇಶ್ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.