ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಚರಂತಿಮಠವನ್ನು ನಾಡಿನ ಮಠವನ್ನಾಗಿಸಿ, ಶಿವಯೋಗದ ಮೂಲಕ ಬಾಗಲಕೋಟೆಗೆ ಬೆಳಕಾದ ಚೇತನ ಪ್ರಭುದೇವರ ಕಾರ್ಯ ಮಾದರಿಯಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಹೇಳಿದರು.ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಹಾಗೂ ವಿದ್ಯಾಗಿರಿಯ ಬಿವಿವಿಎಸ್ ಕಲಾ, ವಿಜ್ಞಾನ, ಹಾಗೂ ವಾಣಿಜ್ಯ ಸ್ವತಂತ್ರ ಪದವಿ-ಪೂರ್ವ ಮಹಾವಿದ್ಯಾಲಯದಿಂದ ಶುಕ್ರವಾರ ಎಂಜಿನಿಯರಿಂಗ್ ಕಾಲೇಜಿನ ನೂತನ ಸಭಾಭವನದಲ್ಲಿ ಚರಂತಿಮಠದ ಪೂಜ್ಯರು ಸಂಘದ ಅಧ್ಯಕ್ಷರಾದ ಪ್ರಭುಸ್ವಾಮಿಗಳಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದ ಪ್ರಯುಕ್ತ ಶ್ರೀಗಳಿಗೆ ಗೌರವಾಭಿನಂಧನೆ ಹಾಗೂ 2025-26ನೇ ಶೈಕ್ಷಣಿಕ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಪೂಜ್ಯರಿಗೆ ಸಂಘದ ಪರವಾಗಿ ಗೌರವಾಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
ಅವರು ಓಣಿಯ ಮಠದಂತೆ ಇದ್ದ ಚರಂತಿಮಠವನ್ನು ಅನೇಕ ಧಾರ್ಮಿಕ ಆಚರಣೆಯಿಂದ ಶಿವಯೋಗದ ಪ್ರವವಚನಗಳ ಮೂಲಕ ಧಾರ್ಮಿಕ ವಾತವಾರಣವನ್ನು ನಿರ್ಮಾಣ ಮಾಡಿ, ನಾಡಿನ ಮಠವನ್ನಾಗಿ ಬೆಳಗಿಸಿದ ಕೀರ್ತಿ ಪೂಜ್ಯ ಪ್ರಭುಸ್ವಾಮೀಜಿಗಳಿಗೆ ಸಲ್ಲುತ್ತದೆ. ಬಾಗಲಕೋಟೆ ಹಾಗೂ ನಿಡಸೋಸಿಯ ಮಠದೊಂದಿಗೆ ಶಿಕ್ಷಣ ಸಂಸ್ಥೆಯಗಳನ್ನು ಪರಿಣಾಮಕಾರಿಯಾಗಿ ಬೆಳಕಿಗೆ ತಂದವರು. ಜನರಲ್ಲಿರುವ ಅನೇಕ ಮೂಡನಂಬಿಕೆಗಳ ಪಿಡುಗುಗಳನ್ನು ತೊಡೆದು ಹಾಕುವ ಮೂಲಕ ಅನೇಕ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗಿ, ನೀರಾವರಿ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡುವ ಮೂಲಕ ರೈತರಿಗೆ ದಾರಿದೀಪವಾಗಿದ್ದಾರೆ. ಈ ಸಾಧನೆ ಗುರುತಿಸಿ ಅವರಿಗೆ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದ್ದು ಹೆಮ್ಮೆಯ ವಿಚಾರವಾಗಿದೆ, ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ಮುಖ್ಯವಾಗಿದ್ದು ಅದರಿಂದ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳಿಗೆ ವೇದಿಕೆ ನಿರ್ಮಿಸಿ, ಉತ್ತಮ ವ್ಯಕ್ತಿತ್ವ ರೂಪಿಸುತ್ತವೆ ಎಂದರು.ಸಾನ್ನಿಧ್ಯ ವಹಿಸಿದ ಇಳಕಲ್ಲಿನ ಚಿತ್ತರಗಿ ಸಂಸ್ಥಾನಮಠದ ಪೂಜ್ಯರು ಸಂಘದ ಉಪಾಧ್ಯಕ್ಷರಾದ ಗುರುಮಹಾಂತ ಸ್ವಾಮೀಜಿಗಳು ಮಾತನಾಡಿ, ಪ್ರಭುಸ್ವಾಮಿಗಳು ಬಾಗಲಕೋಟೆಗೆ ಬಂದು 40 ವರ್ಷವಾಗಿದೆ. ಪೂಜ್ಯರು ಅತ್ಯಂತ ಕ್ರೀಯಾಶೀಲರಾಗಿ, ಅಧ್ಯಯನಶೀಲರಾಗಿರುವ ಅವರ ಹೊಸ ಹೊಸ ಚಿಂತನೆಗಳಿಂದ ನಿತ್ಯನೂತನರಾಗಿದ್ದಾರೆ. ಭಕ್ತರು ತನ್ನಂತೆಯೆಂದು ನೋಡುವ ಮನೋಭಾವ, ಅವರ ವಿಚಾರಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿವೆ. ಅಂತರಂಗದಲ್ಲಿ ಅಧ್ಯಾತ್ಮಿಕ ಜೀವಿಯಾದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ಒಳಗು ಹೊರಗು ಒಂದೇ ಇದ್ದವರು. ಅವರಿಗೆ ದಿನನಿತ್ಯದ ಲಿಂಗ ಪೂಜೆಯಿಂದ ಅನುಭಾವದ ಶಕ್ತಿ ಪ್ರಾಪ್ತಿಯಾಗಿದೆ. ಇದರಿಂದ ತಪ್ಪನ್ನು ಕಂಡಿಸುವ, ಇದ್ದದ್ದನ್ನು ಇದ್ದಹಾಗೆ ಹೇಳುವ ಶಕ್ತಿ ಅವರಿಗೆ ಒಲಿದಿದೆ. ಅದರಂತೆ ಪ್ರಭುಮಹಾಸ್ವಾಮೀಜಿಗಳು ತ್ರಿಕಾಲ ಲಿಂಗಪೂಜೆ ಮಾಡುವುದರಿಂದ ಅವರಿಗೆ ಅನುಭಾವ ಪ್ರಾಪ್ತಿಯಾಗಿದೆ. ಈ ಅನುಭಾವದಿಂದ ಭಕ್ತರು ಮತ್ತು ಶಿಷ್ಯರು ನಡುವೆ ಅಂತರ ಇರುವುದಿಲ್ಲ. ಈ ಅಂತರ ಹೋದರೆ ಅಂತರಂಗದಲ್ಲಿ ಸಾಮರಸ್ಯ ಬರುತ್ತದೆ. ಅಂತರಂಗದಲ್ಲಿ ಸಾಮರಸ್ಯ ಬಂದರೆ ಬಹಿರಂಗದಲ್ಲಿಯೂ ಸಾಮರಸ್ಯ ಬರುತ್ತದೆ ಎಂದು ನಂಬಿರುವ ಪ್ರಭುಮಹಾಸ್ವಾಮೀಜಿಗಳ ಈ ಸರಳ ಸ್ವಭಾವವೇ ಭಕ್ತ ಜನರ ಪ್ರೀತಿಗೆ ಕಾರಣವಾಗಿದೆ. ಪಾಶ್ಚಿಮಾತ್ಯ ಪ್ಯಾಶನ್ ನಮ್ಮ ಜೀವನವಲ್ಲ. ತಂದೆ ತಾಯಿಗೆ ಭಾರವಾಗದೆ ಆರ್ಥಿಕತೆ ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಜ್ಞಾನವಂತರಾಗಿ ಸಾಧನೆಯತ್ತ ಗಮನ ಹರಿಸಿ ಎಂದರು.
ಗೌರವಾಭಿನಂಧನೆ ಸ್ವೀಕರಿಸಿದ ಚರಂತಿಮಠದ ಪ್ರಭುಸ್ವಾಮೀಜಿಗಳು ಮಾತನಾಡಿ, ಜಗತ್ತನ್ನೆ ಸೆಳೆಯುವ ಶಕ್ತಿ ಭಾರತೀಯ ಸಂಸ್ಕೃತಿಗೆ ಇದೆ. ಅದಕ್ಕೆ ಎಲ್ಲ ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಅಳವಡಿಸಲಾಗಿದೆ. ಇವುಗಳು ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತವೆ. ಎಷ್ಟೆ ಶಿಕ್ಷಣ ಪಡೆದರೂ ಸಹಿತ ಮಾನವೀಯತೆ ಎಂಬ ಸಂಸ್ಕೃತಿಯಲ್ಲಿ ಬದುಕಿದಾಗ ಮಾತ್ರ ಮನುಷ್ಯ ಮನುಷ್ಯಾಗಿರುವ ವ್ಯವಸ್ಥೆ ಬರುತ್ತದೆ. ಇಲ್ಲದೆ ಹೋದರೆ ಬರಿ ಯಾಂತ್ರಿಕವಾಗಿ ಬದುಕುವ ವ್ಯವಸ್ಥೆ ಬರುತ್ತದೆ. ಆ ನಿಟ್ಟಿನಲ್ಲಿ ಬಿವಿವಿ ಸಂಘವು ಶತಮಾನದಿಂದಲೂ ಮಾನವೀಯ ನೆಲಗಟ್ಟಿನಲ್ಲಿ ಶಿಕ್ಷಣ ದಾಸೋಹವನ್ನು ಮಾಡುತ್ತಾ ಬಂದಿರುವುದು ದೇಶಕ್ಕೆ ಮಾದರಿಯಾದ ಸಂಸ್ಥೆಯಾಗಿದೆ. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘವು ಅನೇಕ ಕುಲಪತಿಗಳನ್ನು, ವಿಜ್ಞಾನಿಗಳನ್ನು, ಸಮಾಜ ಚಿಂತಕರನ್ನು, ಶೈಕ್ಷಣಿಕ ವಿದ್ವಾಂಸರನ್ನು, ಸೈನಿಕರನ್ನು, ಉತ್ತಮ ರೈತರನ್ನು, ಕಲಾವಿದರನ್ನು, ಸಾಧಕರನ್ನು ನೀಡಿದೆ ಎಂದರು.ಇದೇ ಸಂದರ್ಭದಲ್ಲಿ ದ್ವೀತಿಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 6 ಜನ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿದರು. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಸ್ವಾಗತಿಸಿ, ಎಸ್.ಆರ್.ಮುಗನೂರಮಠ, ಡಾ.ಎಸ್.ಎಂ.ಗಾಂವಕರ ವಂದಿಸಿದರು. ನಂತರ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಮಾರಂಭದಲ್ಲಿ ಗುರುಬಸವ ಸೂಳಿಬಾವಿ ಸೇರಿದಂತೆ ಸಂಘದ ಎಲ್ಲ ಸದಸ್ಯರುಗಳು, ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.