ಶ್ರೀ ಶಂಕರರ ಜ್ಞಾನ, ಪರಿಶ್ರಮಕ್ಕೆ ಜಗತ್ತು ತಲೆಬಾಗುತ್ತದೆ : ಕೋಟಾ ಶ್ರೀನಿವಾಸ ಪೂಜಾರಿ

| Published : May 04 2025, 01:32 AM IST

ಶ್ರೀ ಶಂಕರರ ಜ್ಞಾನ, ಪರಿಶ್ರಮಕ್ಕೆ ಜಗತ್ತು ತಲೆಬಾಗುತ್ತದೆ : ಕೋಟಾ ಶ್ರೀನಿವಾಸ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುತಮ್ಮ ಜೀವಿತದ ಅಲ್ಪಾವಧಿಯಲ್ಲಿ ಸಾಧನೆ ಮಾಡಿದ ಶ್ರೀ ಶಂಕರಾಚಾರ್ಯರ ತತ್ತ್ವ, ನಿಷ್ಠೆ, ಅಪಾರ ಜ್ಞಾನ, ಪರಿಶ್ರಮಕ್ಕೆ ಜಗತ್ತು ಇಂದಿಗೂ ತಲೆ ಬಾಗುತ್ತದೆ ಎಂದು ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಶ್ರೀ ಶಂಕರಾಚಾರ್ಯರು ಹಾಗೂ ಶ್ರೀ ರಾಮಾನುಜಾಚಾರ್ಯರ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತಮ್ಮ ಜೀವಿತದ ಅಲ್ಪಾವಧಿಯಲ್ಲಿ ಸಾಧನೆ ಮಾಡಿದ ಶ್ರೀ ಶಂಕರಾಚಾರ್ಯರ ತತ್ತ್ವ, ನಿಷ್ಠೆ, ಅಪಾರ ಜ್ಞಾನ, ಪರಿಶ್ರಮಕ್ಕೆ ಜಗತ್ತು ಇಂದಿಗೂ ತಲೆ ಬಾಗುತ್ತದೆ ಎಂದು ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ, ಶೃಂಗೇರಿ ಶ್ರೀ ಶಂಕರಮಠ ಹಾಗೂ ವಿಎಚ್‌ಪಿ ಆಶ್ರಯದಲ್ಲಿ ನಗರದ ರಂಗಣ್ಣ ನವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಶ್ರೀ ಶಂಕರಾಚಾರ್ಯರು ಹಾಗೂ ಶ್ರೀ ರಾಮಾನುಜಾಚಾರ್ಯರ ಜಯಂತಿ ಉದ್ಘಾಟಿಸಿ ಮಾತನಾಡಿದರು. ಇಡೀ ವಿಶ್ವ ಒಂದು ಕುಟುಂಬದಂತೆ ಬದುಕಬೇಕೆಂಬ ಸಂದೇಶ ಶಂಕರಾಚಾರ್ಯರ ದಾಗಿತ್ತು. ಹಿಂದೂ ಸಮಾಜ ಸ್ವಾವಲಂಬಿಯಾಗಿ ಬದುಕಲು ಅನೇಕ ಯೋಜನೆಗಳನ್ನು ಅವರು ರೂಪಿಸಿದ್ದರು ಎಂದರು. ಕಾಲ ಕಾಲಕ್ಕೆ ಸಮಾಜದಲ್ಲಿ ಬದಲಾವಣೆಗಳು ಬರುತ್ತವೆ. ಎಲ್ಲ ಹೊಡೆತಗಳನ್ನು ಸಹಿಸಿಕೊಂಡು ಬ್ರಾಹ್ಮಣ ಸಮಾಜ ತಲೆ ಎತ್ತಿ ನಿಂತಿರುವುದು ಹೆಮ್ಮೆಯ ಸಂಗತಿ. ನನಗಿಂತ, ಜಾತಿ, ಧರ್ಮಕ್ಕಿಂತ ದೇಶ ಮೊದಲು ಎನ್ನುವ ರಾಷ್ಟ್ರ ಭಕ್ತರನ್ನು ನಿರ್ಮಾಣ ಮಾಡಬೇಕಿದೆ. ಎಲ್ಲರೂ ಒಂದು ಕುಟುಂಬದಂತೆ ಬದುಕಬೇಕೆನ್ನುವ ಸಂದೇಶವನ್ನು ಶಂಕರಾಚಾರ್ಯರು ನೀಡಿದ್ದಾರೆ. ಸಾವಿರ ವರ್ಷಗಳ ನಂತರವೂ ಆದಿ ಶಂಕರರ ಸಂದೇಶ, ಆಚಾರ, ವಿಚಾರ, ತತ್ತ್ವಗಳು ಈಗಲೂ ಪ್ರಸ್ತುತ ವಾಗುತ್ತದೆ. ಅವುಗಳನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು. ಮಂಕುತಿಮ್ಮನ ಕಗ್ಗ ಖ್ಯಾತಿಯ ಉಪನ್ಯಾಸಕ ಶಿವಮೊಗ್ಗದ ಜಿ.ಎಸ್.ನಟೇಶ್ ಮಾತನಾಡಿ, ಶಂಕರ ಭಗವತ್ಪಾದರು ನಮಗೆಲ್ಲ ಜಾಗೃತಿ ಸಂದೇಶ ನೀಡಿದ್ದಾರೆ. ಎಲ್ಲರೂ ಒಂದೆನ್ನುವ ಭಾವದಿಂದ ಸಮಾಜ ಗಟ್ಟಿಗೊಳಿಸುವ ಕಾರ್ಯ ನಮ್ಮಿಂದಾ ಗಬೇಕು. ಪರಮಾತ್ಮ ಒಬ್ಬನೆ, ಉಳಿದದ್ದು ಸತ್ಯದಂತೆ ಕಾಣುವ, ಸತ್ಯವಾಗಿ ಉಳಿಯದ ವಿಚಾರಗಳು ಎಂದು ಆಚಾರ್ಯರು ಹೇಳುತ್ತಾರೆ. ಕಣ್ಣಿಗೆ ಕಾಣಿಸುವುದು ಯಾವುದೂ ಉಳಿಯಲ್ಲ. ಕಣ್ಣಿಗೆ ಕಾಣಿಸದೇ ಇದ್ದದ್ದು ಯಾವಾಗಲೂ ಉಳಿಯುತ್ತದೆ ಎನ್ನುವುದು ಅವರ ತತ್ತ್ವ ಎಂದು ಹೇಳಿದರು.ಶಂಕರಾಚಾರ್ಯರು 8ನೇ ವಯಸ್ಸಿನಲ್ಲೇ ನಾಲ್ಕು ವೇದಗಳನ್ನು ಕಂಠಸ್ಥ ಮಾಡಿಕೊಂಡಿದ್ದರು. ವೇದಾಂತಗಳ ಅಧ್ಯಯನ ಮಾಡಿದ್ದರು. ನಂತರ ಎಲ್ಲಾ ಶಾಸ್ತ್ರಗಳನ್ನೂ ಕಲಿತರು. ತಮ್ಮ 12 ನೇ ವಯಸ್ಸಿನಲ್ಲೇ ಎಲ್ಲಾ ಶಾಸ್ತ್ರಗಳ ಅಧ್ಯಯನ ಮುಗಿಸಿ ದ್ದರು. ಅನಂತರ ಬರೆಯಲು ಆರಂಭಿಸಿದರು. ಅವಲೋಕಿಸಲು ಸಹ ಸಾಧ್ಯವಾಗದಷ್ಟು ತತ್ತ್ವಗಳನ್ನು ನೀಡಿದ್ದಾರೆ ಎಂದರು. ಎಲ್ಲಾ ಮತಗಳನ್ನು ಒಬ್ಬ ಭಗವಂತನ ಕಡೆಗೆ ಮುಖ ಮಾಡಿ ಶಂಕರಾಚಾರ್ಯರು ತೋರಿಸುತ್ತಾರೆ. ಸಮಾನತೆಯನ್ನು ಈ ರೀತಿ ಕಂಡುಕೊಳ್ಳಬಹುದು. ನೀವು ಬೇರೆ, ನಾವು ಬೇರೆ ಎನ್ನುವ ಗೋಡೆ ಹಾಕಿ ಕುಳಿತುಕೊಳ್ಳುವುದಲ್ಲ. ಎಲ್ಲಿಯವರೆಗೆ ಬೇರೆ ಎನ್ನುವ ಭಾವ ಇರುತ್ತದೆ ಅಲ್ಲಿಯವರೆಗೆ ಸಮಾಜ ನಮ್ಮನ್ನು ತುಳಿಯುತ್ತದೆ. ನಾವೆಲ್ಲ ಒಂದೆಂಬ ಭಾವದಿಂದ ಸಮಾಜವನ್ನು ಕಟ್ಟಬೇಕು. ಭೇದ-ಭಾವ ಮಾಡುವುದನ್ನು ಮೊದಲು ಬಿಡಬೇಕು ಎಂದು ಕಿವಿಮಾತು ಹೇಳಿದರು.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಜಗತ್ತಿನಲ್ಲಿ ಸಾವಿರಾರು ಕೋಟಿ ಜನರು ಬಂದು ಹೋಗುತ್ತಾರೆ. ಆದರೆ ಕೆಲವರು ಮಾತ್ರ ಸೂರ್ಯ, ಚಂದ್ರರು ಇರುವವರೆಗೆ ತಮ್ಮ ತತ್ತ್ವ, ಆದರ್ಶ ಗಳ ಮೂಲಕ ಬದುಕಿರುತ್ತಾರೆ. ಅಂತಹವರ ಸಾಲಿನಲ್ಲಿ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಸೇರುತ್ತಾರೆ ಎಂದು ಹೇಳಿದರು.ಬಿಎಂಎಸ್ ನಿರ್ದೇಶಕಿ ಎಸ್.ಶಾಂತಕುಮಾರಿ ಮಾತನಾಡಿ, ಭಾರತದಲ್ಲಿ ಸನಾತನ ಧರ್ಮ ಮತ್ತಷ್ಟು ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಲ್ಲಬೇಕೆಂಬ ನಿಟ್ಟಿನಲ್ಲಿ ಇಡೀ ಭಾರತವನ್ನು ಸುತ್ತಿ ಅದ್ವೈತ ತತ್ತ್ವದ ಪ್ರಚಾರ ಮಾಡಿದವರು ಶ್ರೀ ಆದಿಶಂಕರರು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಶ್ರೀಶಂಕರಮಠದಿಂದ ಛತ್ರದವರೆಗೆ ಆಚಾರ್ಯತ್ರಯರ ಭಾವಚಿತ್ರ ಸಹಿತ ಮೆರವಣಿಗೆ ನಡೆಯಿತು. ಭಗವತ್ಪಾದರ ಶ್ರೀ ಶಂಕರಾಚಾರ್ಯರ ಬಗ್ಗೆ ರಸಪ್ರಶ್ನೆ ಸ್ಪರ್ಧೆ ಹಾಗೂ 10 ವರ್ಷದ ಒಳಗಿನ ಮಕ್ಕಳಿಗೆ ಬಾಲ ಶಂಕರರ ವೇಷಭೂಷಣ ಸ್ಪರ್ಧೆ ನಡೆಯಿತು. ಪೂರ್ವಾಹ್ನ ನಾಲ್ವರು ವಟುಗಳಿಗೆ ಉಪನಯನ ಕಾರ್ಯಕ್ರಮ ನಡೆಯಿತು.

ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಪಿ.ರಾಜೇಶ್, ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಎಂಇಎಸ್‌ ಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಡಿ.ಎಲ್. ವಿಜಯಕುಮಾರ್, ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎಂ.ಆರ್.ನಾಗರಾಜ್, ದಾಸ ಸಾಹಿತ್ಯ ಭಜನಾ ಮಂಡಳಿ ಸಂಚಾಲಕ ಉದಯಸಿಂಹ, ಸಾಂಸ್ಕೃತಿಕ ಸಂಘದ ಅಧ್ಯಕ್ಷ ಆನಂದಕುಮಾರ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ರಂಗನಾಥ್, ಸಂಸ್ಕಾರ ಭಾರತಿ ಅಧ್ಯಕ್ಷ ದಿನೇಶ್ ಪಟೇಲ್ , ಬಿಎಂಎಸ್ ಕಾರ್ಯದರ್ಶಿ ಎನ್.ಕೆ.ಅಶ್ವಿನ್, ನಿರ್ದೇಶಕಿ ಸುಮಾ ಪ್ರಸಾದ್ , ನಿರ್ದೇಶಕಿ ಶಶಿಕಲಾ ಶಿವಶಂಕರ್ ಉಪಸ್ಥಿತರಿದ್ದರು.

3 ಕೆಸಿಕೆಎಂ 1ಚಿಕ್ಕಮಗಳೂರಿನ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಶಂಕರಾಚಾರ್ಯರು ಹಾಗೂ ಶ್ರೀ ರಾಮಾನುಜಾ ಚಾರ್ಯರ ಜಯಂತಿಯನ್ನು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.