ಸಾರಾಂಶ
ಜಗತ್ತಿಗೆ ಯುದ್ದ ಬೇಡ, ಬುದ್ದನ ಆದರ್ಶ ಬೇಕಾಗಿದೆ ಎಂಬುದು ಜನರಿಗೆ ಅರಿವಾಗುತ್ತಿದೆ ಎಂದು ತಕ್ಷಶಿಲ ಬುದ್ಧ ವಿಹಾರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುಭಾಷ್ ಮಾಡ್ರಹಳ್ಳಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಜಗತ್ತಿಗೆ ಯುದ್ದ ಬೇಡ, ಬುದ್ದನ ಆದರ್ಶ ಬೇಕಾಗಿದೆ ಎಂಬುದು ಜನರಿಗೆ ಅರಿವಾಗುತ್ತಿದೆ ಎಂದು ತಕ್ಷಶಿಲ ಬುದ್ಧ ವಿಹಾರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುಭಾಷ್ ಮಾಡ್ರಹಳ್ಳಿ ಅಭಿಪ್ರಾಯಪಟ್ಟರು.ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಬೋದಿಸತ್ವ ಬೆಟ್ಟದಲ್ಲಿ ತಕ್ಷಶಿಲ ಬುದ್ಧ ವಿಹಾರ ಟ್ರಸ್ಟ್ ಆಯೋಜಿಸಿದ್ದ ಧಮ್ಮ ಚಕ್ಕ ಪವತ್ತನ ದಿನಾಚರಣೆಯಲ್ಲಿ ಬುದ್ದನ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿದರು.ಜಗತ್ತು ಪ್ರಸ್ತುತ ಯುದ್ಧದ ಉನ್ಮಾದತೆ ಹೊಂದಿದೆ. ಜನತೆಗೆ ಬುದ್ದರ ಪ್ರೀತಿ, ಮೈತ್ರಿ ಹಾಗೂ ಕರುಣೆ ಭಾವಗಳು ಬೇಕು. ಆದರೆ ಯುದ್ಧದ ಉನ್ಮಾದ ಮಾನವ ಕುಲದ ವಿನಾಶಕ್ಕೆ ಕಾರಣ ಆಗುತ್ತಿದೆ. ಭಗವಾನ್ ಬುದ್ದ ಯುದ್ಧ ನಿರಾಕರಣೆ ಮಾಡಿ ಸತ್ಯ ಮತ್ತು ಜ್ಞಾನ ಪಡೆದುಕೊಂಡು ಆಷಾಡ ಹುಣ್ಣಿಮೆಯಂದು ಶ್ರಮಣರಿಗೆ ಸಾರನಾಥದಲ್ಲಿ ಮೊದಲ ಬಾರಿಗೆ ಜ್ಞಾನ ಹಂಚಿದ್ದರು ಎಂದು ಹೇಳಿದರು.ಇದು ಗುರು ಪೂರ್ಣಿಮೆ ಎಂದೂ, ಆ ಪವಿತ್ರ ದಿನವನ್ನು ಧಮ್ಮ ಚಕ್ಕ ಪವತ್ತನ ದಿನ ಎಂತಲೂ ಭೌಧ್ಧ ಅನುಯಾಯಿಗಳು ಆಚರಣೆ ಮಾಡುತ್ತಾರೆ. ಮಾನವನ ದುರಾಸೆಗಳಿಂದ ಸಮಾಜದ ಮೇಲೆ ಗಂಭೀರ ಜಲ್ವಂತ ಸಮಸ್ಯೆಗಳು ಹುಟ್ಟಿ ಕೊಳ್ಳುತ್ತವೆ. ಇದು ಜೀವ ಸಂಕುಲವನ್ನು ವಿನಾಶದ ಅಂಚಿನಲ್ಲಿ ತಂದು ನಿಲ್ಲಿಸುತ್ತದೆ.ಇದರ ನಿವಾರಣೆಗೆ ಬುದ್ದರ ಚಿಂತನೆಗಳು ದಾರಿ ದೀಪ ವಾಗಿವೆ ಎಂದರು.ಬುದ್ಧ ವಿಹಾರ ಟ್ರಸ್ಟ್‌ನ ಕಿಲಗೆರೆ ಬಸವಣ್ಣ,ಮದ್ದಯ್ಯನಹುಂಡಿ ನಾಗರಾಜು ಹಲವರಿದ್ದರು.