ಕನ್ನಡಪ್ರಭ ವಾರ್ತೆ ಜಗಳೂರು
ಇಡೀ ಜಗತ್ತು ಮತ್ತು ಸಂಸಾರ ಸುಗಮವಾಗಿ ಸಾಗುತ್ತಿರುವುದು ನಂಬಿಕೆ ಹಾಗೂ ವಿಶ್ವಾಸದ ಬಲದ ಮೇಲೆ. ಮನುಷ್ಯ ವಿಶ್ವಾಸ ಕಳೆದುಕೊಂಡರೆ, ಬದುಕಿನ ನೈಜ ಅರ್ಥವೇ ಇಲ್ಲದಂತಾಗುತ್ತದೆ ಎಂದು ಶ್ರೀ ಷಡಕ್ಷರಿ ಬ್ರಹ್ಮದೇವ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.ತಾಲೂಕಿನ ಐತಿಹಾಸಿಕ ಹಾಗೂ ಪ್ರಸಿದ್ಧ ಕ್ಷೇತ್ರವಾದ ಕಣ್ವಕುಪ್ಪೆ ಗವಿಮಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪೂಜ್ಯರ ಅಧಿಕ ಶ್ರೇಷ್ಠ ಮಾಸದ ಶುಭ ಪೂಜಾ ಅನುಷ್ಠಾನ ಮಂಗಳ ಹಾಗೂ ಪ್ರಸಾದ ವಿತರಣೆ ಧರ್ಮ ಸಮ್ಮೇಳನದಲ್ಲಿ ಅವರು ಆಶೀರ್ವಚನ ನೀಡಿದರು.
ದೈವಕ್ಕೆ ಸವಾಲು ಬೇಡ:ನಾವು ದೇವರನ್ನು ಕಣ್ಣಾರೆ ನೋಡಿಲ್ಲ ಎನ್ನುವುದು ಸತ್ಯವಾದರೂ, ಭಗವಂತ ಇದ್ದಾನೆ ಎಂಬ ದೃಢನಂಬಿಕೆ ಮತ್ತು ವಿಶ್ವಾಸ ಎಲ್ಲರ ಬದುಕನ್ನು ಮುನ್ನಡೆಸುತ್ತಿದೆ. ಮನುಷ್ಯ ಎಂದಿಗೂ ದೈವಶಕ್ತಿಗೆ ಸವಾಲು ಹಾಕಬಾರದು. ಎಂದಿಗೂ ಗುರುನಿಂದನೆ ಮಾಡಬಾರದು. ಗುರುವಿನ ಶಾಪ ತಟ್ಟಿದರೆ ಜೀವನದಲ್ಲಿ ಚೇತರಿಸಿಕೊಳ್ಳುವುದು ಕಷ್ಟ ಎಂದು ಭಕ್ತರಿಗೆ ಎಚ್ಚರಿಸಿದರು.
2013ರ ಜೂನ್‌ನಲ್ಲಿ ಭೀಕರ ಜಲಪ್ರಳಯ ಸಂಭವಿಸಿತು. 150 ಅಡಿ ಅಗಲದ ಭೋರ್ಗರೆಯುವ ಸರೋವರದ ನೀರು ಅಪ್ಪಳಿಸಿದರೂ ಕೇದಾರನಾಥ ದೇವಸ್ಥಾನಕ್ಕೆ ಧಕ್ಕೆಯಾಗಲಿಲ್ಲ. ಆರು ತಿಂಗಳು ದೇವಸ್ಥಾನದ ಬಾಗಿಲು ಮುಚ್ಚಿದ್ದರೂ, ಅದಕ್ಕೂ ಮುನ್ನ ಮುಡಿಸಿದ ಹೂವು, ಬಿಲ್ವಪತ್ರೆಗಳು ತಾಜಾವಾಗಿಯೇ ಇರುತ್ತವೆ. ಹಚ್ಚಿದ ತುಪ್ಪದ ದೀಪ ಆರು ತಿಂಗಳ ಕಾಲ ನಿರಂತರವಾಗಿ ಉರಿಯುತ್ತಲೇ ಇರುತ್ತದೆ. ಕೇದಾರನಾಥನ ಭಸ್ಮ ಧರಿಸುವುದರಿಂದ ಅಶ್ವಮೇಧ ಯಾಗದ ಪುಣ್ಯ ಲಭಿಸುತ್ತದೆ ಎಂದು ವಿವರಿಸಿದರು.
ಎಸ್‌ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಜಿಪಂ ಮಾಜಿ ಅಧ್ಯಕ್ಷೆ ನಾಗರತ್ನಮ್ಮ ಮಲ್ಲೇಶಪ್ಪ ಸೇರಿದಂತೆ ಇತರೇ ಭಕ್ತರು ಮಾತನಾಡಿದರು. ಮಠದಲ್ಲಿ ಮುಂಜಾನೆಯಿಂದಲೇ ಹೋಮ, ಹವನ ಹಾಗೂ ದೇವರಿಗೆ ವಿಶೇಷ ರುದ್ರಾಭಿಷೇಕಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭ ಪ್ರಮುಖರಾದ ರುದ್ರೇಶ್ ಗೌಡ್ರು, ಗುಂಡು ಮುಳುಗು ತಿಪ್ಪೇಸ್ವಾಮಿ, ಮನೋಹರ್ ರೆಡ್ಡಿ, ರುದ್ರಯ್ಯ, ಬಿಜೆಪಿ ಮಂಡಲ್ ಅಧ್ಯಕ್ಷ ಮರುಳಾರಾಧ್ಯ, ಶಿವಯೋಗಿ ಸ್ವಾಮಿ, ಮಲ್ಲಿಕಾರ್ಜುನಯ್ಯ, ಕರಿಬಸಯ್ಯ, ಮಲ್ಲಿಕಾರ್ಜುನ ಸ್ವಾಮಿ, ಬಿಳಿಚೋಡು ಅರುಣ್ ಕುಮಾರ್ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಬಂದ ಭಕ್ತಾದಿಗಳು ಉಪಸ್ಥಿತರಿದ್ದರು.- - -
-14ಜೆ.ಜಿ.ಎಲ್.1: ಕಣ್ವಕುಪ್ಪೆ ಗವಿಮಠದಲ್ಲಿ ಅಧಿಕ ಶ್ರೇಷ್ಠ ಮಾಸದ ಶುಭ ಪೂಜಾ ಅನುಷ್ಠಾನ ಮಂಗಳ, ಧರ್ಮ ಸಮ್ಮೇಳನ ನಡೆಯಿತು.