ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವರು ವಿವಿಧ ಕ್ಷೇತ್ರದಲ್ಲಿ ವೈಯಕ್ತಿಕ ಸಾಧನೆ ಮಾಡಿದವರಿಂದ ಇಂದು ಜನಾಂಗವನ್ನು ವಿಶ್ವ ಗುರುತಿಸಿ ಗೌರವಿಸುತ್ತಿದೆ. ಈ ಆದರ್ಶದಿಂದ ನಾವು ಸಾಧನೆ ಮಾಡಿ ಜನಾಂಗಕ್ಕೆ ಹೆಮ್ಮೆ ತರಬೇಕು. ನಮ್ಮ ಹಿರಿಯರ ಒಳ್ಳೆಯ ಗುಣ, ಸತ್ಯ, ಧರ್ಮ, ನ್ಯಾಯ, ಪ್ರಾಮಾಣಿಕತೆ ಮೂಲಕ ನಾವು ಹೆಸರುಗಳಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.ಟಿ.ಶೆಟ್ಟಿಗೇರಿ ಕೊಡವ ಸಮಾಜದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿಯ ದೊಡ್ಡ ಪಾತ್ರವಿದೆ. ಆದರೆ ಜಾತಿ ಬಲವಿಲ್ಲದ ಕೊಡವ ಜನಾಂಗ ಜಾತಿಯನ್ನು ಮೀರಿ ಸಾಧಿಸಬೇಕು, ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲ ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ಜಾತಿ ಬಲದಲ್ಲಿ ಪ್ರಾಬಲ್ಯ ಮತ್ತು ಪ್ರಾತಿನಿಧ್ಯ ಸಹ ಜಾಸ್ತಿ ಇರುತ್ತದೆ. ನಾವು ಜಾತಿಯನ್ನು ಮೀರಿ ಸಾಧಿಸಲು ಬುದ್ಧಿಶಕ್ತಿ, ವಿದ್ಯಾಶಕ್ತಿ, ಪ್ರತಿಭೆಯಿಂದ ಮಾತ್ರ ಸಾಧ್ಯ. ಆದ್ದರಿಂದ ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಪಡೆಯುವ ದಾರಿಯನ್ನು ಕೊಡವ ಸಮಾಜಗಳು ತೋರಿಸಿಕೊಡಬೇಕು ಎಂದು ಅಭಿಪ್ರಾಯಪಟ್ಟರು.ಕೊಡವ ಹಬ್ಬ ಆಚಾರ, ವಿಚಾರ ಸಂಸ್ಕೃತಿಯನ್ನು ಕಾಪಾಡುವುದು ಕೊಡವ ಸಮಾಜದ ಆದ್ಯ ಕರ್ತವ್ಯ, 32 ಕೊಡವ ಸಮಾಜಗಳು ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು. ಟಿ.ಶೆಟ್ಟಿಗೇರಿ ಕೊಡವ ಸಮಾಜ ಜನಾಂಗ ಹೆಮ್ಮೆಪಡುವಂತಹ ಬಹಳ ಜವಾಬ್ದಾರಿಯುತವಾದ ಸೇವೆಯನ್ನು ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕೊಡವ ಸಮಾಜ ಕಲ್ಯಾಣ ಮಂಟಪ ಹಾಗೂ ಇತರ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು, ಕೊಡವರು ಸಣ್ಣ ಜನಾಂಗವಾದರೂ ವೈಯಕ್ತಿಕವಾಗಿ ಉನ್ನತ ಮಟ್ಟದ ಸಾಧನೆ ಮಾಡಿದ್ದಾರೆ. ಸೇನೆ, ನ್ಯಾಯಾಂಗ ವ್ಯವಸ್ಥೆ, ವಿದೇಶಾಂಗ ಸೇವೆ, ರಾಜಕೀಯ, ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ. ಇಂಥವರ ವೈಯಕ್ತಿಕ ಸಾಧನೆಗಳನ್ನು ಗುರುತಿಸಿ, ಅದನ್ನು ಆದರ್ಶವಾಗಿಟ್ಟುಕೊಂಡು ಜನಾಂಗದ ಮಕ್ಕಳು ಬೆಳೆಯಬೇಕು ಹಾಗೂ ಉನ್ನತ ಸ್ಥಾನಮಾನವನ್ನು ಪಡೆಯಬೇಕು ಎಂದು ಪೊನ್ನಣ್ಣ ಅವರು ಹೇಳಿದರು.ಕೊಡವ ಸಮಾಜಗಳು ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ ಉನ್ನತ ಸ್ಥಾನಮಾನಕ್ಕೆ ಮಕ್ಕಳು ಏರಿದಾಗ, ನಮ್ಮ ವಯಸ್ಸು ಕಾಲದಲ್ಲಿ ನಮ್ಮ ಮಕ್ಕಳ ಸಾಧನೆ ನೋಡಿ ಹೆಮ್ಮೆ ಪಡುವಂತ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕೆಂದು ನನ್ನ ಆಶಯ ಎಂದು ಅವರು ವಿವರಿಸಿದರು.
ಹೀಗಾದಾಗ ನಮ್ಮ ಆಚಾರ- ವಿಚಾರ ಸಂಸ್ಕೃತಿ -ಪರಂಪರೆ ಪರಿಸರಗಳನ್ನು ಸೂರ್ಯ ಚಂದ್ರ ಇರುವವರಿಗೆ ಸಂರಕ್ಷಣೆ ಮಾಡಲು ಸಾಧ್ಯವಿದೆ ಎಂದು ಅವರು ಉದಾಹರಣೆ ಸಹಿತ ಪ್ರತಿಪಾದಿಸಿದರು.ಮತ್ತೋರ್ವ ಮುಖ್ಯ ಅತಿಥಿ ಬಿಜೆಪಿ ರಾಜ್ಯ ಶಿಸ್ತು ಸಮಿತಿಯ ಸದಸ್ಯೆ ಪಟ್ಟಡ ರೀನಾ ಪ್ರಕಾಶ್ ಅವರು ಮಾತನಾಡಿ ಪ್ರತಿಯೊಂದು ಕೊಡವ ಸಮಾಜಗಳು ಟಿ. ಶೆಟ್ಟಿಗೆರಿ ಕೊಡವ ಸಮಾಜದ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಮಾಡಿದರೆ ಜನಾಂಗದ ಆಚಾರ- ವಿಚಾರ, ಸಂಸ್ಕೃತಿ ಬಗ್ಗೆ ಮಕ್ಕಳಿಗೆ ಅರಿವು ಬರುತ್ತದೆ. ಹೊರಗೆ ಇರುವವರು ಸಹ ಬಂದು ಸೇರಲು ಅವಕಾಶವಾಗುತ್ತದೆ. ಕಾವೇರಿ ಚಂಗ್ರಾಂದಿ ಹಬ್ಬವನ್ನು 10 ದಿನಗಳವರೆಗೆ ಜನೋತ್ಸವವಾಗಿ ಮಾಡುತ್ತಿರುವ ಸಂದರ್ಭ ಕಾವೇರಿ ನದಿಯ ಪಾವಿತ್ರ್ಯತೆಯನ್ನು ಕಾಪಾಡಬೇಕಾಗಿದೆ. ಕೋಟ್ಯಾಂತರ ಜನರಿಗೆ ಜೀವ ಹಾಗೂ ಜೀವನವನ್ನು ಕಾವೇರಿ ನದಿಯಾಗಿ ಕರುಣಿಸಿದೆ. ಆದ್ದರಿಂದ ಕಾವೇರಿ ನದಿ ಕಲುಷಿತವಾಗದಂತೆ ಕಾಪಾಡಬೇಕೆಂದು ಕರೆ ನೀಡಿದರು.
ಜನಸಂಖ್ಯೆ ವೃದ್ಧಿಗೆ ಪ್ರೋತ್ಸಾಹ ನಿರ್ಣಯ:ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಅವರು ನಮ್ಮ ಸಂಸ್ಕೃತಿ ಜನಪದ ಕಲೆ ಆಚಾರ ವಿಚಾರಗಳನ್ನು ನಾವು ಕಲಿತು ವೇದಿಕೆಯಲ್ಲಿ ಪ್ರದರ್ಶನ ಮಾಡುತ್ತೇವೆ. ಆದರೆ ಇದರ ಹಿಂದೆ ನಮ್ಮ ಜನಾಂಗದ ಜನಸಂಖ್ಯೆಯನ್ನು ವೃದ್ಧಿಸುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಟಿ. ಶೆಟ್ಟಿಗೇರಿ ಕೊಡವ ಸಮಾಜದ ವ್ಯಾಪ್ತಿಯಲ್ಲಿ ಕೊಡವ ದಂಪತಿಗಳಿಗೆ ಮೂರನೇ ಮಗುವಾದರೆ 50 ಸಾವಿರ ಹಾಗೂ ನಾಲ್ಕನೇ ಮಗುವಾದರೆ ಒಂದು ಲಕ್ಷ ಬಹುಮಾನವಾಗಿ ನೀಡಲು ನಿರ್ಣಯ ಕೈಗೊಂಡಿರುವುದನ್ನು ಘೋಷಿಸಿದರು.
ಈ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟು ಮಗುವಿಗೆ 18 ವಯಸ್ಸು ಆದಾಗ ಅದನ್ನು ತೆಗೆದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ವಿವರಿಸಿದರು.ಸಭೆಯ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ ಅವರು 2017 ರಿಂದ ಆರಂಭವಾದ ಈ ಪತ್ತಲೋದಿ ಕಾರ್ಯಕ್ರಮ ಆರಂಭದಲ್ಲಿ ಈ ಕಾರ್ಯಕ್ರಮ ಮಾಡಲು ಪ್ರಸ್ತಾವನೆಯನ್ನು ಕೊಡವ ಸಮಾಜದ ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಮಂಡಿಸಿದ್ದರು. ಅದಕ್ಕೆ ಅಂದಿನ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಹಾಗೂ ಆಡಳಿತ ಮಂಡಳಿ ಬೆಂಬಲ ನೀಡಿತು. ಆದರೆ ಆ ಸಂದರ್ಭದಲ್ಲಿ ಕೆಲವರು ನಕಾರಾತ್ಮಕವಾಗಿ ಮಾತನಾಡುತ್ತಿದ್ದರು. ಆದರೆ ಕಳೆದ ಎಂಟು ವರ್ಷದಿಂದ ವಿವಿಧ ಆಡಳಿತ ಮಂಡಳಿ ತನು, ಮನ, ಧನ ಸಹಾಯದಿಂದ ಪತ್ತಲೋದಿ ಕಾರ್ಯಕ್ರಮ 8ನೇ ವರ್ಷಕ್ಕೆ ಕಾಲಿಟ್ಟಿದ್ದು, ಕಾವೇರಿ ಮಾತೆಯ ಆಶೀರ್ವಾದದಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದು ವಿವರಿಸಿದರು.
ಸನ್ಮಾನ ಕಾರ್ಯಕ್ರಮ: ಈ ಸಂದರ್ಭ ಈಚೆಗೆ ರಾಜ್ಯ ಸರ್ಕಾರದ ಹಿರಿಯ ನಾಗರಿಕ ಸೇವಾ ಪ್ರಶಸ್ತಿ ಪಡೆದ ಕೈಬುಲಿರ ಪಾರ್ವತಿ ಬೋಪಯ್ಯ, ದಾನಿಗಳಾದ ಅಜ್ಜಮಾಡ ವೇಣು ಸುಬ್ಬಯ್ಯ, ಅಜ್ಜಮಾಡ ಲವ ಕುಶಾಲಪ್ಪ, ಅಜ್ಜಮಾಡ ಪ್ರಮೀಳಾ ಕರುಂಬಯ್ಯ, ಅಜ್ಜಮಾಡ ಚಿಮ್ಮ ತಿಮ್ಮಯ್ಯ ಹಾಗೂ ಸಮಾಜದ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ ನಿರ್ದೇಶಕಿ, ಚಂಗುಲಂಡ ಅಶ್ವಿನಿ ಸತೀಶ್ ಅವರನ್ನು ಸನ್ಮಾನಿಸಲಾಯಿತು.ಚೆಟ್ಟಂಡ ಲತಾ ಚರ್ಮಣ ಪ್ರಾರ್ಥಿಸಿ, ಬಾದುಮಂಡ ವಿಷ್ಣು ಕಾರ್ಯಪ್ಪ ಸ್ವಾಗತಿಸಿ ಚಂಗುಲಂಡ ಅಶ್ವಿನಿ ಸತೀಶ್ ಅವರು ನಿರೂಪಿಸಿ ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ವಂದಿಸಿದರು.