ಅತಿ ಮಳೆ, ಬೆಲೆ ಕುಸಿತದ ಸಂಕಟ ತಂದ ವರ್ಷ

| Published : Dec 28 2024, 12:48 AM IST

ಸಾರಾಂಶ

ಗದಗ ಜಿಪಂ ಸಿಇಓ ಹುದ್ದೆ 6 ತಿಂಗಳುಗಳ ಕಾಲ ಪ್ರಭಾರ ಅಧಿಕಾರಿಗಳ ಮೇಲೆ ನಡೆಸಿದ್ದು, ಜಿಲ್ಲೆಯ ಇತಿಹಾಸದಲ್ಲಿಯೇ ಮಹತ್ವದ ಹುದ್ದೆ ಇಷ್ಟೊಂದು ತಿಂಗಳು ಖಾಲಿ ಉಳಿದದ್ದು 2024 ರಲ್ಲಿಯೇ ಎಂದು ದಾಖಲಾಗಿ ಹೋಯಿತು

ಶಿವಕುಮಾರ ಕುಷ್ಟಗಿ ಗದಗ

2024ರ ಅಂತ್ಯಕ್ಕೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆ. ಹತ್ತಾರು ನೋವು, ಹೊಸತನ ಕಾರ್ಯ, ಅಪಘಾತದಲ್ಲಿ ಅಮೂಲ್ಯ ಜೀವಗಳ ಬಲಿ, ಅತಿಯಾಗಿ ಸುರಿದ ಮಳೆಯಿಂದ ತತ್ತರಿಸಿದ ಜನಜೀವನ, ಬೆಲೆ ಕುಸಿತದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಸ್ಥಿತಿಗೆ ನೂಕಲ್ಪಟ್ಟ ರೈತ ಸಮುದಾಯ ಹೀಗೆ ಸಾಲು ಸಾಲು ಸಮಸ್ಯೆಗಳ ಮಧ್ಯೆಯೇ ವರ್ಷ ಕಳೆದು ಹೋಗಿದೆ.

ಹಲವಾರು ಚುನಾವಣೆಗಳ ಮುಖ್ಯ ವಸ್ತುವಾಗಿರುವ ಕಳಸಾ -ಬಂಡೂರಿ, ಮುಗಿಯದ ಮಹದಾಯಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು, ನಗರಸಭೆಯ ಸಾಲು ಸಾಲು ಹಗರಣ, ನಗರಸಭೆ ಅಧಿಕಾರಿಯ ಸಹಿಯನ್ನೇ ನಕಲಿ ಮಾಡಿ ಬೇಲ್ ಮೇಲೆ ಇರುವ ಚುನಾಯಿತ ಪ್ರತಿನಿಧಿಗಳು, ಜಿಲ್ಲೆಯ ಪ್ರವಾಸೋಧ್ಯಮ ಅಭಿವೃದ್ಧಿಗೆ ಲಕ್ಕುಂಡಿ ಪ್ರಾಚ್ಯಾವಶೇಷಗಳ ಮೂಲಕ ಹೊಸ ಮನ್ವಂತರ ಸೃಷ್ಟಿಗೆ ಈ ಬಾರಿ ಜಿಲ್ಲೆ ಸಾಕ್ಷಿಯಾಗಿದೆ.

ಅರ್ಧ ವರ್ಷ ಸಿಇಓ ಇರಲಿಲ್ಲ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೋಗಿ, ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳ ಬದಲಾವಣೆಯಾಯಿತು. ಆದರೆ ಗದಗ ಜಿಪಂ ಸಿಇಓ ಹುದ್ದೆ 6 ತಿಂಗಳುಗಳ ಕಾಲ ಪ್ರಭಾರ ಅಧಿಕಾರಿಗಳ ಮೇಲೆ ನಡೆಸಿದ್ದು, ಜಿಲ್ಲೆಯ ಇತಿಹಾಸದಲ್ಲಿಯೇ ಮಹತ್ವದ ಹುದ್ದೆ ಇಷ್ಟೊಂದು ತಿಂಗಳು ಖಾಲಿ ಉಳಿದದ್ದು 2024 ರಲ್ಲಿಯೇ ಎಂದು ದಾಖಲಾಗಿ ಹೋಯಿತು.

ನರಳಿದ ನಗರಸಭೆ: 2024ರ ಆರಂಭವನ್ನು ಗದಗ ಬೆಟಗೇರಿ ನಗರಸಭೆ ನರಳುತ್ತಲೇ ಸ್ವಾಗತಿಸಿತು. ಬೀದಿ ದೀಪಗಳ ನಿರ್ವಹಣೆ, ಗುತ್ತಿಗೆ ಅಕ್ರಮ, ಆರ್ಥಿಕ ಬಿಡ್ ತೆರೆಯುವ ಪೂರ್ವದಲ್ಲೇ ಗುತ್ತಿಗೆ ದರಕ್ಕೆ ಅನುಮೋದನೆ, ಅಭಿವೃದ್ಧಿ ಕಾಣದ ಬಡಾವಣೆಗಳಿಗೆ ನಗರಸಭೆಯ ಕೆಲ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಶಾಮೀಲಾಗಿ ಫಾರ್ಮ ನಂ. 3 ವಿತರಣೆ ಮಾಡಿದ್ದು, ಲೋಕಾಯುಕ್ತರಲ್ಲಿ ಪ್ರಕರಣ ದಾಖಲಾಯಿತು.

ಪ್ರಭಾರಗಳದ್ದೇ ದರ್ಬಾರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿರಿಯ ಕಾಂಗ್ರೆಸ್ ನಾಯಕ ಎಚ್.ಕೆ. ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಗದಗ ಜಿಲ್ಲೆಯಲ್ಲಿ ಒಂದು ಹೊಸ ಪದ್ಧತಿ ಜಾರಿಗೆ ಬಂದಿದ್ದು, ಜಿಲ್ಲೆಯ ಎಲ್ಲ ಪ್ರಮುಖ ಹುದ್ದೆಗಳಿಗೆ ಪ್ರಭಾರ ಅಧಿಕಾರಗಳನ್ನು ನೇಮಕ ಮಾಡುವುದು, ಅದರಲ್ಲಿಯೂ ಅವರ ಕೆಲಸ ನಿರ್ವಹಿಸುವ ಇಲಾಖೆಗೂ, ಸಧ್ಯ ಪ್ರಭಾರ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಇಲಾಖೆಗೂ ಸಂಬಂಧವೇ ಇಲ್ಲದಿದ್ದರೂ ಅವರನ್ನೇ ಅಧಿಕಾರಿಗಳನ್ನಾಗಿ ನೇಮಿಸುವ ಅನಿಷ್ಠ ಪದ್ಧತಿ 2024 ರಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಸಧ್ಯ ಒಬ್ಬ ಅಧಿಕಾರಿ ಮೂರು, ನಾಲ್ಕು ಇಲಾಖೆಗಳನ್ನು ನಿಭಾಯಿಸುವ ಸಾಮರ್ಥ್ಯ ಪ್ರದರ್ಶಿಸಿದ್ದು, ನಿತ್ಯವೂ ಸಚಿವರ ಹಿಂದೆಯೇ ಸುತ್ತುವ ಮೂಲಕ ಎಲ್ಲ ಇಲಾಖೆಗಳ ಕಾರ್ಯ ಭಾರ ನಿಭಾಯಿಸುವ ಕಲೆ ಗದಗ ಜಿಲ್ಲೆಯಲ್ಲಿ ಮಾತ್ರ ಗೋಚರವಾಗುತ್ತಿದೆ.

ಅತೀ ಮಳೆ ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ.125ಕ್ಕೂ ಹೆಚ್ಚು ಮಳೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಮುಂಗಾರು ಬೆಳೆಗಳಾದ ಗೋವಿನಜೋಳ, ಈರುಳ್ಳಿ, ಮೆಣಸಿನಕಾಯಿ, ಹೆಸರು ಬೆಳೆಗಳು ಸಂಪೂರ್ಣ ನೀರು ಪಾಲಾಗಿ ರೈತರು ಬಹುದೊಡ್ಡ ಸಂಕಷ್ಟ ಎದುರಿಸಿದರು. ಇದರೊಟ್ಟಿಗೆ ಪ್ರವಾಹ ಪೀಡಿತ ನರಗುಂದ ಮತ್ತು ರೋಣ ತಾಲೂಕಿನ 18 ಕ್ಕೂ ಹೆಚ್ಚಿನ ಹಳ್ಳಿಗಳಿಗೆ ಈ ಬಾರಿಯೂ ಮಲಪ್ರಭಾ ಪ್ರವಾಹ ಸಂಕಷ್ಟ ಎದುರಾಗಿತ್ತು. ಅದರಲ್ಲಿಯೂ ಸತತ 20 ದಿನಗಳ ಕಾಲ ತುಂಬಿ ಹರಿದ ಬೆಣ್ಣೆಹಳ್ಳ ಅಕ್ಕಪಕ್ಕದ ಸಾವಿರಾರು ಎಕರೆ ಜಮೀನುಗಳಿಗೂ ನೀರು ನುಗ್ಗಿ ರೈತರ ಬದುಕು ತತ್ತರಿಸುವಂತಾಯಿತು.

ಬೆಲೆ ಕುಸಿತ: ಗದಗ ಜಿಲ್ಲೆ ಕೃಷಿಯನ್ನೇ ಸಂಪೂರ್ಣ ಆರ್ಥಿಕ ಹಿನ್ನೆಲೆಯನ್ನಾಗಿ ಹೊಂದಿದ್ದು, 2.52 ಲಕ್ಷ ಹೆಕ್ಟೇರ್ ಗೂ ಅಧಿಕ ಕೃಷಿ ಯೋಗ್ಯ ಭೂಮಿ ಹೊಂದಿರುವ ಜಿಲ್ಲೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಅತೀ ಮಳೆಯಿಂದ ಬೆಳೆಗಳು ಹಾಳಾಗಿದ್ದು, ಇದರ ಮಧ್ಯ ರೈತರ ಕೈಗೆ ಬಂದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ರೈತರು ಕಂಗಾಲಾಗಿ ಹೋದರು. ಇದರ ಮಧ್ಯೆ ಹಿಂಗಾರು ಹಂಗಾಮಿನ ಬಿತ್ತನೆಗೂ ರೈತರಿಗೆ ಅವಕಾಶ ಕೊಡದಷ್ಟು ಮಳೆ ಸುರಿದಿದ್ದು, ಹಿಂಗಾರು ಕೂಡಾ ಈ ಬಾರಿ ರೈತರನ್ನು ಕಂಗಾಲಾಗಿಸಿತು. ವರ್ಷದ ಕೊನೆಯಲ್ಲಿ ಒಂದು ವಾರದ ಕಾಲ ಈರುಳ್ಳಿ ಬೆಳೆಗೆ ಉತ್ತಮ ಬೆಲೆ ಬಂದಿದ್ದನ್ನು ಹೊರತುಪಡಿಸಿದಲ್ಲಿ ವರ್ಷವೀಡಿ ರೈತರು ಅತಿಯಾದ ಮಳೆ, ಬೆಲೆ ಕುಸಿತದಿಂದ ಕಂಗಾಲಾಗಿ ಹೋದರು.