ಶರಣರ ಕಾಯಕದ ಮಹತ್ವವನ್ನು ಯುವಪೀಳಿಗೆ ಅರಿಯಬೇಕು

| Published : Feb 12 2024, 01:32 AM IST

ಸಾರಾಂಶ

ಕಾಯಕ ಶರಣರು ೧೨ನೇ ಶತಮಾನದಲ್ಲಿಯೇ ವಚನಗಳ ಮೂಲಕ ರಚಿಸಿದ ಕಾಯಕದ ಮಹತ್ವವನ್ನು ಇಂದಿನ ಯುವ ಪೀಳಿಗೆ ಅರಿತು ಮುನ್ನೆಡೆಯಬೇಕು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕಾಯಕ ಶರಣರು ೧೨ನೇ ಶತಮಾನದಲ್ಲಿಯೇ ವಚನಗಳ ಮೂಲಕ ರಚಿಸಿದ ಕಾಯಕದ ಮಹತ್ವವನ್ನು ಇಂದಿನ ಯುವ ಪೀಳಿಗೆ ಅರಿತು ಮುನ್ನೆಡೆಯಬೇಕು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು. ನಗರದ ವರನಟ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಾಯಕ ಶರಣರಾದ ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ, ಮಾದಾರ ಧೂಳಯ್ಯ ಹಾಗೂ ಡೋಹರ ಕಕ್ಕಯ್ಯ ಅವರು ಅನುಭವ ಮಂಟಪದಲ್ಲಿ ಸಾಮಾಜಿಕ ಅಂಕುಡೊಂಕುಗಳನ್ನು ತಿದ್ದುವ ವಚನಗಳನ್ನು ರಚಿಸುವ ಮೂಲಕ ಕಾಯಕ ಮತ್ತು ಸಮಾನತೆಯನ್ನು ಪ್ರತಿಪಾದಿಸಿ ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಶರಣರು ರಚಿಸಿದ ವಚನಗಳ ಮೌಲ್ಯಗಳನ್ನು ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದಲ್ಲಿ ಅಡಕಗೊಳಿಸಿದ್ದಾರೆ. ಶರಣರ ಆದರ್ಶ ಕಾಯಕವನ್ನು ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಪ್ರಸ್ತುತ ಪರಿಸ್ಥಿತಿಯಲ್ಲಿ ಕಾಯಕಗಳೆಲ್ಲವೂ ಜಾತಿಗಳಾಗಿ ಮಾರ್ಪಟ್ಟಿವೆ. ಇಂದಿನ ಮಕ್ಕಳಿಗೆ ಶರಣರ ಕಾಯಕದ ಮಹತ್ವವನ್ನು ಪರಿಚಯಿಸಲು ಸರ್ಕಾರ ಕಾಯಕ ಶರಣರ ಜಯಂತಿ ಆಚರಣೆಗೆ ಅನುವು ಮಾಡಿಕೊಟ್ಟಿದೆ. ಸಂವಿಧಾನದಲ್ಲಿರುವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಅಂಶಗಳು ಶರಣರ ವಚನಗಳಿಂದ ಪ್ರೇರೇಪಿತಗೊಂಡಿವೆ. ಸಂವಿಧಾನವನ್ನು ಪ್ರತಿಯೊಬ್ಬರು ಓದುವ ಮೂಲಕ ಮನುಷ್ಯತ್ವದ ಭಾರತವನ್ನು ಕಟ್ಟಬೇಕಾಗಿದೆ ಎಂದರು. ಬಡವರು, ರೈತರು, ಶ್ರಮಿಕರ ಬೆವರಿನಲ್ಲಿ ದೇವರನ್ನು ಕಾಣಬೇಕೆಂದರು ಬಸವಣ್ಣನವರು. ಜಾತಿ, ವರ್ಗಗಳನ್ನು ಮೀರಿದ್ದ ಕಾಯಕ ಶರಣರು ಜೀವಿಸಿದ್ದ ಅಂದಿನ ಕಾಲಘಟ್ಟದಲ್ಲಿ ಬೇಡುವ ಬದಲು ನೀಡುವ ಸಂಸ್ಕೃತಿ ಇತ್ತು. ಇಂದು ಬೇಡುವ ಕಾಯಕ ಎಲ್ಲೆಡೆ ಕಂಡುಬರುತ್ತಿದೆ. ಶರಣರ ನಡೆ-ನುಡಿ ಒಂದೇ ಆಗಿತ್ತು. ಪುಸ್ತಕಗಳನ್ನು ಓದುವ ಬದಲು ಗೂಗಲ್ ಸಂಸ್ಕೃತಿಗೆ ಮಾರುಹೋಗುತ್ತಿರುವುದು ಮಕ್ಕಳಿಗೆ ಮಾರಕವಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳು, ಯುವಕರು ಶರಣರ ವಚನಗಳ ಅಧ್ಯಯನ ಮಾಡಬೇಕು. ಇದರಿಂದ ಸಾಮಾಜಿಕ ಚಲನೆಯಾಗಲಿದೆ ಎಂದು ತಿಳಿಸಿದರು. ಎಡಿಸಿ ಗೀತಾ ಹುಡೇದ ಮಾತನಾಡಿ ವಿದ್ಯಾರ್ಥಿಗಳು ಪ್ರತಿದಿನ ಶರಣರ ಒಂದೊಂದು ವಚನಗಳನ್ನು ಅಧ್ಯಯನ ಮಾಡಬೇಕು. ಪಠ್ಯದ ಜೊತೆಗೆ ವ್ಯಕ್ತಿತ್ವ ವಿಕಸನವಾಗುವಂತಹ ಪುಸ್ತಕಗಳನ್ನು ಮನನ ಮಾಡಬೇಕು. ಆಗಮಾತ್ರ ಪರಿಪೂರ್ಣ ವ್ಯಕ್ತಿಯಾಗಿ ದೇಶಕ್ಕೆ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೊಡ್ಡಮೋಳೆಯ ಗವಿಬಸಪ್ಪ, ರಾಮಸಮುದ್ರದ ನಿಂಗಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಮಾದಾಪುರ ರವಿಕುಮಾರ್, ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಸಿ.ಎಂ. ಕೃಷ್ಣಮೂರ್ತಿ, ಜನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ, ಕನ್ನಡಪರ ಸಂಘಟನೆಯ ಚಾ.ಗು. ನಾಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕುಮಾರ್, ನಾಗೇಂದ್ರ, ಇತರರು ಉಪಸ್ಥಿತರಿದ್ದರು.