ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ವಿದ್ಯಾವಂತ ಯುವ ಸಮುದಾಯ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಶ್ರೇಷ್ಠ ಸಾಧಕರಾಗಬೇಕು ಎಂದು ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಆರ್.ನಂದಿನಿ ಕಿವಿಮಾತು ಹೇಳಿದರು.ತಾಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ಸಭಾಂಗಣದಲ್ಲಿ ಎನ್‌ಎಸ್‌ಎಸ್ 10 ಮತ್ತು 16ನೇ ಘಟಕಗಳ ವತಿಯಿಂದ ಆಯೋಜಿಸಿದ್ದ ಸೀಡ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಧ್ಯಾತ್ಮಿಕ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆ ವಿವಿಧ ಆಯಾಮಗಳಲ್ಲಿ ವಿಭಿನ್ನ ಮಾದರಿಗಳಿಂದ ಶೈಕ್ಷಣಿಕ ಕ್ಷೇತ್ರದ ವಿಶಿಷ್ಠ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಇಂತಹ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೀವು ಬಿಜಿಎಸ್ ಎಂಬ ಮುದ್ರೆಯ ರಾಯಭಾರಿಗಳಾಗುತ್ತೀರಿ ಎಂದರು.ಕುಟುಂಬ, ಸಂಸ್ಥೆ ಹಾಗೂ ಸಮಾಜದಿಂದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಪ್ರತಿಯಾಗಿ ಸಮಾಜಕ್ಕೆ ಏನನ್ನು ಕೊಡುತ್ತೀರಿ ಎಂಬುದು ಬಹಳ ಮುಖ್ಯ. ತಮ್ಮ ಮುಂದಿನ ಸುಂದರ ಜೀವನ ರೂಪಿಸಿಕೊಳ್ಳಲು ಇಂದಿನಿಂದಲೇ ಉತ್ತಮ ಗುರಿಯನ್ನು ನಿರ್ಧರಿಸಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಉಪಕುಲಪತಿ ಡಾ. ಎಂ.ಎ. ಶೇಖರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಂಬಿಕೆ, ವಿಶ್ವಾಸ ಮತ್ತು ಆತ್ಮವಿಶ್ವಾಸದ ಗುಣಗಳು ಸದಾ ಯಶಸ್ಸನ್ನು ನೀಡುತ್ತವೆ. ಸತತ ಪರಿಶ್ರಮದಿಂದ ಉತ್ತಮವಾದುದ್ದನ್ನು ಸಾಧಿಸಬೇಕು ಎಂದರು.ಮಾನವಿಕ ಮತ್ತು ಸಮಾಜ ವಿಜ್ಞಾನಗಳ ವಿಭಾಗದ ಡೀನ್ ಡಾ. ಎ.ಟಿ. ಶಿವರಾಮು ಮಾತನಾಡಿ, ಡಾ.ನಿರ್ಮಲಾನಂದನಾಥಶ್ರೀಗಳ ಮಾರ್ಗದರ್ಶನದಂತೆ ವಿವಿ ಮಟ್ಟದಲ್ಲಿ ಸೀಡ್ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಶಿಸ್ತು, ಭಾವನಾತ್ಮಕ ಅರಿವು ಮತ್ತು ನಾವಿನ್ಯತೆಯ ಮೂಲಕ ಸಾರ್ವಜನಿಕ ಸೇವೆಯನ್ನು ವರ್ಗಾಯಿಸುವ ಆಶಯವು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಯಿಂದ ಉತ್ತಮ ಮಾರ್ಗದರ್ಶನ ಮತ್ತು ಸಂವಾದವನ್ನು ಆಯೋಜಿಸಲಾಗಿದೆ. ಐಎಎಸ್ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿರುವ ಕರ್ನಾಟಕದ ಮಹಿಳೆ ಕೆ.ಆರ್. ನಂದಿನಿ ಅವರಂಥ ಸಾಧಕರನ್ನು ಮಾದರಿಯಾಗಿಸಿಕೊಂಡು ಇವರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಉತ್ತಮ ಸಾಧನೆ ಮಾಡಬಹುದು ಎಂದು ಹೇಳಿದರು.ಸಮಾರಂಭದಲ್ಲಿ ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ, ಸಾಂಸ್ಥಿಕ ಕಾಲೇಜುಗಳ ಪ್ರಾಂಶುಪಾಲರಾದ ಡಾ.ಎಂ.ಜಿ.ಶಿವರಾಮು, ಡಾ.ಬಿ.ರಮೇಶ್, ಡಾ.ಡಿ.ಆರ್. ಭಾರತಿ, ಡಾ.ಬಿ.ಎನ್.ಶೋಭಾ, ಟಿ.ಎನ್.ಶಿಲ್ಪ, ಹಣಕಾಸು ಅಧಿಕಾರಿ ಬಿ.ಕೆ.ಉಮೇಶ್ ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.