ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಂಗಭೂಮಿ ಒಳ್ಳೆಯ ಮನುಷ್ಯನನ್ನು ರೂಪಿಸುತ್ತದೆ ಎಂದು ರಂಗಕರ್ಮಿ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಚಂದ್ರಶೇಖರ ಹಿರೇಗೋಣಿಗೆರೆ ಹೇಳಿದರು.ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಸ್ಕ್ ಚಲುವರಂಗ ಅಭಿನಯ ಶಾಲೆ, ಸಹ್ಯಾದ್ರಿ ಕಲಾ ಕಾಲೇಜ್ ಇವರ ಸಹಯೋಗದಲ್ಲಿ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ರಂಗ ತರಬೇತಿ ಕಾರ್ಯಾಗಾರವನ್ನು ಜಂಬೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಅವಕಾಶದ ಜೊತೆಗೆ ಶಿಸ್ತು ಕಲಿಸುತ್ತದೆ. ಮನುಷ್ಯ ಮನುಷ್ಯನಾಗಿರಲು ಸಹಾಯಕವಾಗುತ್ತದೆ. ಮಾನವೀಯತೆಯೇ ಮರೆಯಾಗುತ್ತಿರುವ ಇಂತಹ ಸಂದರ್ಭದಲ್ಲಿ ರಂಗಭೂಮಿಯಿಂದ ಒಳ್ಳೆಯತನ, ಮಾನಸಿಕ ಆರೋಗ್ಯ ಸಿಗುತ್ತದೆ. ಅಷ್ಟೇ ಅಲ್ಲ, ಧರ್ಮ, ಜಾತಿಗಳ ಮೀರಿ ಮನುಷ್ಯನನ್ನು ಬೆಳೆಸುತ್ತದೆ ಎಂದರು.ನಟ ಪಾತ್ರದ ಮೂಲಕ ಗುರುತಿಸಿಕೊಳ್ಳಬೇಕು. ಅನೇಕ ಬಾರಿ ಪಾತ್ರ ಸೋಲಿಸಿ ನಟ ಗೆಲ್ಲುತ್ತಾನೆ. ಪಾತ್ರವೇ ಗೆದ್ದು ನಟನೂ ಸೋಲುತ್ತಾನೆ. ರಂಗಭೂಮಿ ಇದೆಲ್ಲವನ್ನೂ ಕಲಿಸುತ್ತದೆ. ಸರಿಯಾದ ದಿಕ್ಕಿನತ್ತ ಸಾಗಿಸುತ್ತದೆ. ವರ್ತಮಾನದ ಸಂಗತಿಗಳಿಗೆ ಮುಖಾಮುಖಿಯಾಗುತ್ತದೆ ಎಂದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್.ಮಂಜುನಾಥ್ ಮಾತನಾಡಿ, ಪ್ರತಿಭೆಗಳ ಅನಾವರಣಗೊಳಿಸಲು ರಂಗಕ್ಷೇತ್ರ ಸಹಾಯಕವಾಗುತ್ತದೆ. ಕಾಲೇಜುಗಳಲ್ಲಿ ಇಂತಹ ಶಿಬಿರಗಳು ಅವಶ್ಯಕವಾಗಿ ಬೇಕಾಗುತ್ತದೆ. ಆತ್ಮಸ್ಥೈರ್ಯ, ಆಸಕ್ತಿ, ಬದುಕನ್ನು ರೂಪಿಸುವ, ಆಸ್ವಾದಿಸುವ ಶಕ್ತಿಯನ್ನು ಇದು ನೀಡುತ್ತದೆ ಎಂದರು.ಆಸ್ಕ್ ಚಲುವರಂಗದ ಸಂಸ್ಥಾಪಕ ಮತ್ತು ತರಬೇತಿದಾರ ಅಜಯ್ ನೀನಾಸಂ ಮಾತನಾಡಿ, ರಂಗಕ್ಷೇತ್ರ ಒಂದು ಅದ್ಭುತವಾದ ಕ್ಷೇತ್ರವಾಗಿದೆ. ಇದು ವಿದ್ಯಾರ್ಥಿ ಗಳಿಗೆ ಅತ್ಯಂತ ಉಪಯುಕ್ತ. ಆಳವಾಗಿ ಅಧ್ಯಯನ ಮಾಡಲು, ನೆನಪಿನ ಶಕ್ತಿ ಹೆಚ್ಚಿಸಲು ತನ್ನನ್ನು ತಾನು ಅರಿಯಲು ಇತರರನ್ನು ಗೌರವಿಸಲು ರಂಗಕ್ಷೇತ್ರ ಅನು ಕೂಲವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಇಂತಹ ತರಬೇತಿಗಳನ್ನು ನಮ್ಮ ಸಂಸ್ಥೆ ಕಾಲೇಜುಗಳಲ್ಲಿ ಆಯೋಜಿಸುತ್ತಾ ಬಂದಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಸೈಯದ್ ಸನಾವುಲ್ಲಾ, ನಾಟಕವನ್ನು ಕಲೆಯನ್ನಾಗಿ ಉಳಿಸುವ ಪ್ರಯತ್ನವನ್ನು ಚಲುವರಂಗ ರಂಗ ಶಾಲೆಯವರು ಮಾಡುತ್ತಿ ರುವುದು ಸಂತೋಷದ ವಿಷಯವಾಗಿದೆ. ಪಠ್ಯಗಳಲ್ಲಿ ಫಿಲಂ ಸ್ಟಡಿ ಅಧ್ಯಯನ ಕೂಡ ಮಾಡಬೇಕಾಗಿದೆ. ರಂಗ ಕಲೆಯ ಬಗ್ಗೆ ಅಭಿರುಚಿ ಮೂಡಿಸುವ ದೃಷ್ಟಿ ಯಿಂದ ಕುವೆಂಪು ವಿವಿಯಲ್ಲಿ ಸಿನಿಮಾ ಅಧ್ಯಯನವನ್ನು ಒಂದು ವಿಷಯವನ್ನಾಗಿ ಬೋಧಿಸಲು ವಾತಾವರಣ ಕಲ್ಪಿಸಬೇಕೆಂದು ಸಹ್ಯಾದ್ರಿ ಕಾಲೇಜಿನಿಂದ ಮನವಿ ಮಾಡಲಾಗಿದೆ ಎಂದರು.ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು. ಅಭಿ ಮತ್ತು ತಂಡದವರು ರಂಗಗೀತೆ ಹಾಡಿದರು.