ಕಲಾನಿಧಿ ಪ್ರಶಸ್ತಿ, ಕೈಲಾಸಂ ಪ್ರಶಸ್ತಿ ಪುರಸ್ಕೃತೆ, ವೃತ್ತಿರಂಗಭೂಮಿ ಹಿರಿಯ ಕಲಾವಿದೆ ಸಿ. ಗಂಗಮ್ಮ (ರಂಗಭೂಮಿಯ ಹೆಸರು ಶಶಿಕಲಾ) (80) ಹೃದಯಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ.
ಮರಿಯಮ್ಮನಹಳ್ಳಿ: ಕಲಾನಿಧಿ ಪ್ರಶಸ್ತಿ, ಕೈಲಾಸಂ ಪ್ರಶಸ್ತಿ ಪುರಸ್ಕೃತೆ, ವೃತ್ತಿರಂಗಭೂಮಿ ಹಿರಿಯ ಕಲಾವಿದೆ ಸಿ. ಗಂಗಮ್ಮ (ರಂಗಭೂಮಿಯ ಹೆಸರು ಶಶಿಕಲಾ) (80) ಶುಕ್ರವಾರ ನಿಧನರಾದರು.
ಸಂಜೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು. ಮೃತರಿಗೆ ಮೂವರು ಪುತ್ರಿಯರು ಇದ್ದಾರೆ.ಗಂಗಮ್ಮ, ತಮ್ಮ ತಾಯಿಯ ತವರೂರಾದ ಹಂಪಾಪಟ್ಟಣದಲ್ಲಿ 6ನೇ ತರಗತಿ ಓದುತ್ತಿದ್ದಾಗ ಗುರುಗಳಾದ ಚೋರನೂರು ವೀರಯ್ಯ ಅವರ ಒತ್ತಾಯಕ್ಕೆ ಮಣಿದು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಸಂಘದ ಪೌರಾಣಿಕ ನಾಟಕವೊಂದರಲ್ಲಿ ಹಾಸ್ಯ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದರು.
ಬಳಿಕ ಅನೇಕ ನಾಟಕಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರಿಂದ ಸೈ ಎನ್ನಿಸಿಕೊಂಡಿದ್ದರು. ಸುಮಾರು ಎರಡೂವರೆ ದಶಕಗಳ ಕಾಲ ರಂಗಭೂಮಿಯಲ್ಲಿ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದರು. ಸ್ತ್ರೀರತ್ನ ದೇವದಾಸಿ, ಸತ್ಯ ಹರಿಶ್ಚಂದ್ರ, ತಾಯಿ ಕರಳು, ಬಾಲಚಂದ್ರ, ಬಡತನದ ಭೂತ, ಹೇಮರೆಡ್ಡಿ ಮಲ್ಲಮ್ಮ, ಕುರುಕ್ಷೇತ್ರ, ರಕ್ತರಾತ್ರಿ ಅವರು ಅಭಿನಯಿಸಿದ ಪ್ರಮುಖ ನಾಟಕಗಳು.ಸಿ. ಗಂಗಮ್ಮ ಅವರಿಗೆ ಮರಿಯಮ್ಮನಹಳ್ಳಿಯ ಲಲಿತಕಲಾ ರಂಗವು ಕಲಾನಿಧಿ ಪ್ರಶಸ್ತಿ ನೀಡಿ ಗೌರವಿಸಿದೆ. ಹೊಸಪೇಟೆಯ ಟಿ.ಬಿ. ಡ್ಯಾಂನ ಕನ್ನಡ ಕಲಾಸಂಘದವರು ಕೈಲಾಸಂ ಪ್ರಶಸ್ತಿ ನೀಡಿದ್ದಾರೆ.