ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಕಳವು: ಪತ್ತೆಗೆ ಮನವಿ

| Published : Aug 15 2025, 01:00 AM IST

ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಕಳವು: ಪತ್ತೆಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿರುವವರನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ: ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿರುವವರನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಧಾರ್ಮಿಕ ಪರಿಷತ್ ವ್ಯಾಪ್ತಿಯಲ್ಲಿರುವ ದೇವಸ್ಥಾನವಾದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಆ. ೧೧ರ ರಾತ್ರಿ ಕಾಣಿಕೆ ಹುಂಡಿ ಒಡೆದು ಸಾವಿರಾರು ರು.ಗಳನ್ನು ಕಳ್ಳತನ ಮಾಡಲಾಗಿದೆ. ಮುಸುಕುಧಾರಿಗಳು ದೇವಸ್ಥಾನದ ಅನ್ನದಾಸೋಹದ ಕೊಠಡಿಯಲ್ಲಿದ್ದ ಸಿಸಿ ಕ್ಯಾಮೆರಾವನ್ನು ಬೇರೆ ಕಡೆ ತಿರುಗಿಸಿ ಎರಡು ಕಾಣಿಕೆ ಹುಂಡಿಗಳನ್ನು ಒಡೆದು ಕಳ್ಳತನ ಮಾಡಿದ್ದಾರೆ ಎಂದು ಮನವಿದಾರರು ತಿಳಿಸಿದರು.

ದೇವಸ್ಥಾನಕ್ಕೆ ಕೆಟ್ಟ ಹೆಸರು ತರಲು ಕಾಣದ ಕೈಗಳ ಕೈವಾಡ ಇರಬಹುದು. ಜಿಲ್ಲೆಯ ವಿವಿಧ ಭಾಗದ ದೇವಸ್ಥಾನಗಳಲ್ಲಿಯೂ ಈ ರೀತಿಯ ಕಳ್ಳತನಗಳು ನಡೆಯುತ್ತಿವೆ. ಇದರ ಹಿಂದೆ ದೊಡ್ಡ ಜಾಲವೇ ಇದೆ. ಪೊಲೀಸ್ ಇಲಾಖೆ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕಳ್ಳರನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಬಿ. ವರಲಕ್ಷ್ಮಿ ಪ್ರಕಾಶ್, ಡಾ. ನಾಗರತ್ನ, ರೇಖಾ ಭದ್ರಾವತಿ, ಸವಿತಾ, ಹೊರಕೇರಪ್ಪ, ದೇವಕುಮಾರ್, ಮಹದೇವಪ್ಪ, ಮತ್ತಿತರರು ಇದ್ದರು.